Advertisement

ಸಾಂಪ್ರದಾಯಿಕ ಬುಟ್ಟಿ ತಯಾರಿಯಲ್ಲಿ ವಿದ್ಯಾರ್ಥಿಗಳು

12:07 AM Oct 13, 2019 | Sriram |

ಉಡುಪಿ: ಆಧುನಿಕತೆಯ ಭರಾಟೆಯಲ್ಲಿ ಕೃಷಿ ಪರಿಕರಗಳು ಮರೆಯಾಗುತ್ತಿವೆ. ಸಾಂಪ್ರದಾಯಿಕ ಪರಿಕರಗಳು ಮೂಲೆ ಸೇರುತ್ತಿವೆ. ಆದರೆ ನಶಿಸುತ್ತಿರುವ ಈ ಸಂಪ್ರದಾಯವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಕುಂಭಾಸಿಯ ಮಕ್ಕಳ ಮನೆಯ ವಿದ್ಯಾರ್ಥಿಗಳು.

Advertisement

5 ವರ್ಷದ ಹಿಂದೆ ಕುಂಭಾಸಿಯ ಕೊರಗರ ಕಾಲನಿಯ ಮಕ್ಕಳಲ್ಲಿ ವಿದ್ಯಾಭ್ಯಾಸದ ಕೊರತೆಯಿತ್ತು. ಸೂಕ್ತ ವಿದ್ಯಾಭ್ಯಾಸವೂ ಲಭಿಸುತ್ತಿರಲಿಲ್ಲ. ಬಳಿಕ ಕುಂಭಾಶಿ ಗ್ರಾ.ಪಂ.ಸಮೀಪ ಅಂಬೇಡ್ಕರ್‌ ಭವನ ನಿರ್ಮಿಸಿ ಅಲ್ಲಿ ವಿದ್ಯಾಭ್ಯಾಸ ಮಾಡುವ ಕೆಲಸ ಪ್ರಾರಂಭವಾಯಿತು. ಅನಂತರ ಇದಕ್ಕೆ ಹೊಂದಿಕೊಂಡಿರುವಂತೆಯೇ ಮಕ್ಕಳ ಮನೆ ಎಂಬ ಹೆಸರಿನಲ್ಲಿ ಕಟ್ಟಡವನ್ನು ರಚಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಿತ ಸಾಂಸ್ಕೃತಿಕ ಚಟುವಟಿಕೆಗಳನ್ನು ನೀಡಲಾಗುತ್ತಿದೆ.

ಬುಟ್ಟಿ ತಯಾರಿ ಆಸಕ್ತಿ
ಹಿಂದಿನ ಸಂಪ್ರದಾಯವನ್ನು ಉಳಿಸುವ ನಿಟ್ಟಿನಲ್ಲಿ ಕೊರಗ ಸಮುದಾಯದ ಸುಮಾರು 12ರಷ್ಟು ಮಂದಿ ವಿದ್ಯಾರ್ಥಿಗಳು ಕಳೆದ 1 ತಿಂಗಳಿನಿಂದ ವಿವಿಧ ರೀತಿಯ ಸಾಂಪ್ರದಾಯಿಕ ಬುಟ್ಟಿಗಳ ತಯಾರಿಯಲ್ಲಿ ತೊಡಗಿದ್ದಾರೆ. ಹಣ್ಣುಕಾಯಿ ಬುಟ್ಟಿ, ಹೆಡಿಗೆ, ಫ‌ುಡ್‌ಟ್ರ್ಯಾಕ್ಸ್‌, ಆಲಂಕಾರಿಕ ವಸ್ತುಗಳು, ಪೆನ್‌ ಸ್ಟಾಂಡ್‌ ಸಹಿತ ಹಲವಾರು ವೈವಿಧ್ಯತೆಯುಳ್ಳ ಬುಟ್ಟಿ ತಯಾರಿಸುವ ಕಲೆಗಾರಿಕೆಯನ್ನು ಇವರು ಹೊಂದಿದ್ದಾರೆ. ಅಂದ ಹಾಗೇ ಇಲ್ಲಿರುವ ವಿದ್ಯಾರ್ಥಿಗಳು ಎಂಎಸ್‌ಡಬ್ಲೂ, ಬಿಎಸ್‌ಡಬ್ಲೂ, ಡಿಎಡ್‌ ವಿದ್ಯಾಭ್ಯಾಸ ಹೊಂದಿದವರು. ಈ ಮೂಲಕ ಸಂಪ್ರಾದಾಯಿಕ ವಸ್ತುಗಳಿಗೆ ಬೇಡಿಕೆ ಬರುವಂತೆ ಮಾಡುವ ಛಾತಿ ಇವರದ್ದು.

ಹಣಕಾಸು ನೆರವು
ಈ ರೀತಿ ವಸ್ತುಗಳನ್ನು ತಯಾರಿಸಿ ಸೊಸೈಟಿ ರೀತಿ ಮಾಡುವ ಆಲೋಚನೆಯೂ ಇವರದ್ದು. ಆರು ತಿಂಗಳುಗಳ ಕಾಲ ಇದನ್ನು ಮುಂದುವರಿಸುವ ಯೋಜನೆಯಿದ್ದು, ಅಪಾರ ಬೇಡಿಕೆ ವ್ಯಕ್ತವಾದರೆ ಮುಂದುವರಿಸುವ ಆಲೋಚನೆಯೂ ಇದೆ. ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಹಾಗೂ ಸ್ಥಳೀಯ ಪಂಚಾಯತ್‌ಗಳು ಅನುದಾನ ಕಲ್ಪಿಸುವ ಮೂಲಕ ಪ್ರೋತ್ಸಾಹ ನೀಡುತ್ತಿವೆ.

2ರಿಂದ 3 ಬುಟ್ಟಿ ತಯಾರಿ
ಓರ್ವ ವಿದ್ಯಾರ್ಥಿ ದಿನವೊಂದಕ್ಕೆ ಕನಿಷ್ಟ ಎಂದರೂ 2ರಿಂದ 3ರಷ್ಟು ಬುಟ್ಟಿಗಳನ್ನು ಹೆಣೆಯುತ್ತಾರೆ. ಅದಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಇವರೇ ಸರಿಪಡಿಸುತ್ತಾರೆ. ಬಿದಿರು, ಕೂಬಿಕೋಲು, ಕುಸುಬ ಬೀಳು, ಕಟ್ಟೆಪಳ್ಳಿಗಳನ್ನು ಇದಕ್ಕೆ ಬಳಸುತ್ತಾರೆ. ಇದನ್ನು ಕೂಡ ಈ ವಿದ್ಯಾರ್ಥಿಗಳೇ ಮಾಡುತ್ತಾರೆ.

Advertisement

ಪೇಟೆಂಟ್‌ ಪಡೆಯಲು ಯತ್ನ
ನಶಿಸುತ್ತಿರುವ ಬುಟ್ಟಿ ತಯಾರಿಕೆಗೆ ಜೀವ ನೀಡಿ ಪೇಟೆಂಟ್‌ ಪಡೆಯುವ ಬಗ್ಗೆಯೂ ಈ ತಂಡ ಚಿಂತನೆ ನಡೆಯುತ್ತಿದೆ. ಇದಕ್ಕೆ ಮಾರುಕಟ್ಟೆ ಒದಗಿಸುವಂತೆ ಈಗಾಗಲೇ ಮಣಿಪಾಲದ ಟ್ಯಾಪ್ಮಿ ಜತೆ ಮಾತುಕತೆಯೂ ನಡೆದಿದೆ. ಒಂದು ವೇಳೆ ಈ ಸಂಸ್ಥೆ ಇವರೊಂದಿಗೆ ಕೈಜೋಡಿಸಿದರೆ ಈ ಉದ್ಯಮಕ್ಕೆ ಮತ್ತಷ್ಟು ಪೋತ್ಸಾಹ ಸಿಗುವುದರ ಜತೆಗೆ ಹಲವಾರು ಮಂದಿಗೆ ಉದ್ಯೋಗಾವಕಾಶವೂ ಲಭಿಸಲಿದೆ.

ಉತ್ತಮ ಮಾರುಕಟ್ಟೆ ನಿರೀಕ್ಷೆ
ನಶಿಸುತ್ತಿರುವ ಈ ಕಸುಬನ್ನು ಉಳಿಸುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೆ ಹಲವಾರು ಮಂದಿ ಇದನ್ನು ಖರೀದಿಸುತ್ತಿದ್ದಾರೆ. ಮತ್ತಷ್ಟು ಬೇಡಿಕೆ ಬಂದರೆ ಉತ್ಪಾದನೆಯನ್ನೂ ಅಧಿಕ ಮಾಡಬಹುದು. ಇದಕ್ಕೆ ಉತ್ತಮ ಮಾರುಕಟ್ಟೆ ಲಭಿಸಿದರೆ ನಮಗೆ ಮತ್ತಷ್ಟು ಪ್ರೋತ್ಸಾಹ ಸಿಗಲಿದೆ.
-ಸುದರ್ಶನ್‌,ತರಬೇತುದಾರರು

Advertisement

Udayavani is now on Telegram. Click here to join our channel and stay updated with the latest news.

Next