ಉಡುಪಿ: ಪರಿಸರ ರಕ್ಷಿಸುವ ಕಾಯಕಕ್ಕೆ ವಿದ್ಯಾರ್ಥಿಗಳೂ ಮುಂದಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಎಂಜಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕಳೆದ 23 ವರ್ಷಗಳಿಂದ ಔಷಧೀಯ ಸಸ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಸಸ್ಯ ಪರಿಚಯ ಎಂಬ ವಿನೂತನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ವಿವಿಧ ರಾಜ್ಯಗಳ ಅಪರೂಪದ ಸಸ್ಯಗಳು ಇಲ್ಲಿವೆ.
ಏನಿದು ಕಾರ್ಯಕ್ರಮ?
ವಾರಕ್ಕೊಮ್ಮೆ ಸಸ್ಯಗಳ ಪರಿಚಯವಿಲ್ಲದ ಅತಿಥಿ ಗಳನ್ನು ಆಹ್ವಾನಿಸಿ ಸಸ್ಯದ ಕುರಿತು ಸಂಪೂರ್ಣ ಪರಿಚಯ, ಮಾಹಿತಿ, ಉಪಯುಕ್ತತೆಯ ಕುರಿತು ಕಾಲೇಜು ಸಸ್ಯಶಾಸ್ತ್ರ ಅಧ್ಯಯನಶೀಲ ವಿದ್ಯಾರ್ಥಿಗಳೇ ಪರಿಚಯ ಮಾಡಿಕೊಡುತ್ತಾರೆ.
ಸಾವಿರಕ್ಕೂ ಅಧಿಕ ಬಗೆಯ ಸಸ್ಯಗಳು
ಪ್ರತೀ ಬುಧವಾರ ಈ ವಿಭಾಗದ 4 ಮಂದಿ ವಿದ್ಯಾರ್ಥಿಗಳು ಔಷಧೀಯ ಗಿಡಗಳನ್ನು ತೆಗೆದು ಕೊಂಡು ಬರುತ್ತಾರೆ. ಅನಂತರ ಅದರ ವೈಶಿಷ್ಟ್ಯದ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತದೆ. ಬಳಿಕ ಒಂದು ವಾರ ಆ ಗಿಡವನ್ನು ವೀಕ್ಷಣೆಗೆ ಇಡಲಾಗುತ್ತದೆ. ಬಳಿಕ ಕಾಲೇಜಿನ ಸಸ್ಯವನದಲ್ಲಿ ನೆಡಲಾಗುತ್ತದೆ. ಇಲ್ಲಿ ಸುಮಾರು ಸಾವಿರಕ್ಕೂ ಅಧಿಕ ವಿವಿಧ ಬಗೆಯ ಔಷಧೀಯ ಸಸ್ಯಗಳಿವೆ ಎನ್ನುತ್ತಾರೆ ವಿಭಾಗದ ಮುಖ್ಯಸ್ಥರಾದ ಪ್ರೊ| ಉಷಾರಾಣಿ.
ಗಿಡಗಳ ಸಂಪೂರ್ಣ ಮಾಹಿತಿ
ಸುಮಾರು 2 ಎಕರೆಗೂ ಅಧಿಕ ಜಾಗದಲ್ಲಿ ಈ ಸಸ್ಯವನವಿದೆ. ಇಲ್ಲಿರುವ ಮರ, ಗಿಡಗಳಿಗೆ ನಾಮ ಫಲಕಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ವಿಭಾಗದಲ್ಲಿರುವ ಪುಸ್ತಕದಲ್ಲಿ ದಾಖ ಲಾಗಿರುತ್ತದೆ. ಹೆಸರು, ವಿಶೇಷತೆಗಳ ಬಗ್ಗೆ ಕನ್ನಡ, ಇಂಗ್ಲಿಷ್, ಹಿಂದಿ ಮೂರು ಭಾಷೆಗಳಲ್ಲಿ ಲಭ್ಯವಿದೆ. ಡಯಾಬಿಟೀಸ್, ಕ್ಯಾನ್ಸರ್ ಸಹಿತ ಹಲವಾರು ಕಾಯಿಲೆ ನಿವಾರಿಸುವಂತಹ ಗಿಡಗಳೂ ಲಭ್ಯ ವಿರುವುದು ಇಲ್ಲಿನ ವಿಶೇಷ.