Advertisement

ವಿದ್ಯಾರ್ಥಿಗಳ ಕನಸು ನನಸಾದ ಸಾರ್ಥಕ ಸಮಯ

05:46 AM Mar 16, 2019 | |

ಕಲಬುರಗಿ: ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ಶುಕ್ರವಾರ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಕನಸು ನನಸಾದ ಸಾರ್ಥಕತೆ, ಧನ್ಯತಾ ಭಾವದ ಚಿನ್ನದ ಹಕ್ಕಿಗಳು ಮತ್ತು ನಿರಂತರ ಶ್ರಮ ಪಟ್ಟ ಓದಿಗೆ ಸಂದ ಪದವಿ ಪಡೆದ ಸಂಶೋಧಕರು ಖುಷಿಯಲ್ಲಿ ತೇಲಾಡಿದರು.

Advertisement

ಶುಕ್ರವಾರ ನಡೆದ ವಿಶ್ವವಿದ್ಯಾಲಯದ 37ನೇ ಘಟಿಕೋತ್ಸವ ಇಂತಹದೊಂದು ವಾತಾವರಣಕ್ಕೆ ಸಾಕ್ಷಿಯಾಗಿತ್ತು. ಎತ್ತ ನೋಡಿದರೂ ಗೌನು, ಕ್ಯಾಪ್‌ ತೊಟ್ಟು ಮೊಗದಲ್ಲಿ ಮಂದಹಾಸ ಬೀರುತ್ತಿದ್ದ ವಿದ್ಯಾರ್ಥಿಗಳು. ಮಕ್ಕಳ ಸಾಧನೆ, ಖುಷಿಯನ್ನು ಕಣ್ತುಂಬಿಕೊಳ್ಳುವ ತವಕದಲ್ಲಿದ್ದ ಕುಟುಂಬ ವರ್ಗದವರೇ ಕಾಣುತ್ತಿದ್ದರು. 

ಘಟಿಕೋತ್ಸವ ವೇದಿಕೆಯಲ್ಲಿ ಗಣ್ಯರಿಂದ ಪದಕ, ಪದವಿ ಪಡೆದು ವೇದಿಕೆ ಇಳಿಯುತ್ತಿದ್ದಂತೆ ಕುಟುಂಬದವರು, ಸಹಪಾಠಿಗಳು ಆತ್ಮೀಯವಾಗಿ ಅಭಿನಂದಿಸಿದರು. ಚಿನ್ನದ ಪದಕ ಕೊರಳಿಗೇರಿಸಿಕೊಂಡ ಮಕ್ಕಳನ್ನು ನೋಡುತ್ತಿದ್ದಂತೆ ಪೋಷಕರು ಆನಂದಭಾಷ್ಪ ಸುರಿಸಿ ತಮ್ಮ ಶ್ರಮ ಸಾರ್ಥಕವಾಯಿತು ಎಂಬ ಭಾವನೆ ಹೊಂದಿದರು. ಇವರ ಮಧ್ಯೆ ಗೆಳೆಯ, ಗೆಳತಿಯರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವ ಚಿತ್ರಣ ರಾರಾಜಿಸಿತು. ಇಬ್ಬರು ಮಕ್ಕಳ ತಾಯಿ, ಕಂಡಕ್ಟರ್‌, ಟೇಲರ್‌ ಮತ್ತು ಚಹಾ ಮಾರುವತಾನ ಮಗಳು, ಕೂಲಿಕಾರನ ಮಗ, ಹೀಗೆ ಎಲ್ಲ ಸ್ಥರ, ವರ್ಗದ ಮಕ್ಕಳು ಚಿನ್ನದ ನಗೆ ಬೀರಿದ್ದು ವಿಶೇಷ ಕಳೆ ತುಂಬಿತು. ಘಟಿಕೋತ್ಸವದಲ್ಲಿ ಒಟ್ಟಾರೆ 29,183 ವಿದ್ಯಾರ್ಥಿಗಳು ವಿವಿಧ ಪದವಿ ಪಡೆದರು. ಇದರಲ್ಲಿ 13,907 ಪುರುಷ ಹಾಗೂ 15,276 ಮಹಿಳಾ ವಿದ್ಯಾರ್ಥಿಗಳು ಸೇರಿದ್ದರು. 237 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆದರು. 76 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ಕಿರು ನಗೆ ಬೀರಿದರೆ, ಒಂಭತ್ತು ವಿದ್ಯಾರ್ಥಿಗಳು ನಗದು ಬಹುಮಾನ ಸ್ವೀಕರಿಸಿದರು.

ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಶೈಲಜಾ ಶರಣಗೌಡ ಮತ್ತು ಮ್ಯಾನೇಜ್‌ಮೆಂಟ್‌ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಅಂಕಿತಾ ತಲಾ ಎಂಟು ಚಿನ್ನದ ಪದಕಗಳನ್ನು ಪಡೆದು ಅತಿ ಹೆಚ್ಚು ಚಿನ್ನದ ಪದಕ ಗಳಿಸಿದವರು ಎಂಬ ಹೆಗ್ಗಳಿಗೆ ಪಾತ್ರರಾದರು.

ಇಬ್ಬರು ಮಕ್ಕಳ ತಾಯಿಗೆ ಎಂಟು ಚಿನ್ನದ ಪದಕ ಕನ್ನಡ ಅಧ್ಯಯನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಎಂಟು ಚಿನ್ನದ ಪದಕಗಳನ್ನು ಪಡೆದ ಶೈಲಜಾ ಶರಣಗೌಡ ಇಬ್ಬರು ಮಕ್ಕಳ ತಾಯಿ ಎನ್ನುವುದು ವಿಶೇಷ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಲ್ಲಾ (ಬಿ)ಗ್ರಾಮದ ಶೈಲಜಾ ಅಪ್ಪಟ ಗ್ರಾಮೀಣ ಪ್ರತಿಭೆ. ರೈತ ಕುಟುಂಬದ ಶರಣಗೌಡ ತಾಯಿ ಮಹಾದೇವಿ ದಂಪತಿಯ ಪುತ್ರಿಯಾದ ಇವರಿಗೆ ಆರು ಮತ್ತು ನಾಲ್ಕು ವರ್ಷದ ಮಕ್ಕಳಿದ್ದಾರೆ. ಪತಿ ಚಂದ್ರಕಾಂತ ರೆಡ್ಡಿ ಫೈನಾನ್ಸರ್‌ ಆಗಿದ್ದು, ಇವರ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರಾಧ್ಯಾಪಕಿ ಇಲ್ಲವೇ ಕೆಎಎಸ್‌ ಅಧಿ ಕಾರಿ ಆಗುವಾಸೆ ಕಂಡಿರುವ ಶೈಲಜಾ ಶರಣಗೌಡ ಈಗಾಗಲೇ ಪಿಎಚ್‌ಡಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಪೋಷಕರ ಆರ್ಶೀವಾದ ಹಾಗೂ ಪತಿ ಮತ್ತು ಪತಿ ಕುಟುಂಬದವರ ಸಹಕಾರ, ಶಿಕ್ಷಕರ ಮಾರ್ಗದರ್ಶನ, ಸಹಕಾರದೊಂದಿಗೆ ಮನೆಯಲ್ಲಿ ಓದಲು ಉತ್ತಮವಾದ ವಾತಾವರಣವೇ ತಮ್ಮ ಈ ಸಾಧನೆಗೆ ಕಾರಣ ಎನ್ನುತ್ತಾರೆ ಶೈಲಜಾ.

Advertisement

ಮ್ಯಾನೇಜ್‌ಮೆಂಟ್‌ನಲ್ಲಿ ಕಂಡಕ್ಟರ್‌ ಮಗಳ ಸಾಧನೆ ಮ್ಯಾನೇಜ್‌ಮೆಂಟ್‌ ಅಧ್ಯಯನ ವಿಭಾಗದಲ್ಲಿ ಎಂಟು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ ಅಂಕಿತಾ ಬಸ್‌ ಕಂಡಕ್ಟರ್‌ ಮಗಳು. ಮೂಲತಃ ಸೊಲ್ಲಾಪುರದವರಾದ ರಾಮಚಂದ್ರ ಜಿಬರೆ ಪುತ್ರಿಯಾಗಿರುವ ಅಂಕಿತಾ ಕಲಬುರಗಿಯ ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಮ್ಯಾನೇಜ್‌ಮೆಂಟ್‌ ಅಧ್ಯಯನದಲ್ಲಿ ಹೆಚ್ಚಿನ ಅಂಕ ಪಡೆದು ಎಂಟು ಚಿನ್ನದ ಪದಕಗಳೊಂದಿಗೆ ಚಿನ್ನದ ನಗೆ ಬೀರಿದ್ದಾರೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಆರ್ಥಿಕ ವಿಶ್ಲೇಷಕಿಯಾಗಿ ಕೆಲಸ ಮಾಡುವ ಕನಸು ಕಂಡಿರುವ ಅಂಕಿತಾ, ಹೈದ್ರಾಬಾದ್‌ನಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಬಾಲ್ಯದಿಂದಲೂ ಟಾಪರ್‌ ಆಗಿರುವ ಅಂಕಿತಾ ಅವರ ಈ ಸಾಧನೆಗೆ ಅಪ್ಪ-ಅಮ್ಮನ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು.

ಗುಲಬರ್ಗಾ ವಿವಿ ನನ್ನನ್ನು ಗುರುತಿಸಿ ಗೌರವ ಡಾಕ್ಟರೇಟ್‌ ಪದವಿ ನೀಡಿದ ಸದ್ಭಾವನೆಗೆ ಕೃತಜ್ಞನಾಗಿದ್ದೇನೆ. ಈ ಗೌರವ ಪದವಿಯನ್ನು ಕನ್ನಡಿಗರ, ಭಾರತೀಯರ ಸರ್ವೋದಯಕ್ಕಾಗಿ ತ್ಯಾಗ, ಹೋರಾಟ ಮಾಡಿ ಪ್ರಾಣತೆತ್ತ ಜೀವಗಳಿಗೆ ಅರ್ಪಿಸುತ್ತೇನೆ.

 ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಗೌರವ ಡಾಕ್ಟರೇಟ್‌ ಪುರಸ್ಕೃತರು ನಾನು ಯಾವುದೇ ಕೆಲಸ, ಕಾರ್ಯಗಳನ್ನು ಪ್ರಶಸ್ತಿಗೋಸ್ಕರ ಮಾಡುವುದಿಲ್ಲ. ವಿವಿ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದ್ದು ಸಂತೋಷವಾಗಿದೆ. ಕಳೆದ ತಿಂಗಳು ಅಮೃತ ಮಹೋತ್ಸವ ಆಚರಿಸಿಕೊಂಡ ಬೆನ್ನಲ್ಲೆ ಗೌರವ ಸಂದಿದ್ದು ನೆನೆಪಿನಲ್ಲಿ ಉಳಿಯುವಂತಾಗಿದೆ.

 ಶಿವಕುಮಾರ ಮಹಾಸ್ವಾಮೀಜಿ, ಗೌರವ ಡಾಕ್ಟರೇಟ್‌ ಪುರಸ್ಕೃತರು ವಿಶ್ವವಿದ್ಯಾಯಲವು ಸಮಾಜದ ಬೇರೆ-ಬೇರೆ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಖುಷಿಯ ಸಂಗತಿ. ನಾನು 70 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಈಗ ಗೌರವ ಡಾಕ್ಟರೇಟ್‌ ಪದವಿ ಪ್ರದಾನದಿಂದ ಮತ್ತಷ್ಟು ಪ್ರೋತ್ಸಾಹ ದೊರೆತಂತಾಗಿದೆ. 
  ಪಂ. ವೀರಭದ್ರಪ್ಪ ಗಾದಗೆ, ಗೌರವ ಡಾಕ್ಟರೇಟ್‌ ಪುರಸ್ಕೃತರು 

Advertisement

Udayavani is now on Telegram. Click here to join our channel and stay updated with the latest news.

Next