ಬೆಳ್ತಂಗಡಿ: ನೆರೆಯಿಂದ ನಲುಗಿದ ಊರಲ್ಲಿ ಇಂದು ಬಾಯಾರಿದೆ. ನದಿ, ತೊರೆ, ಬಾವಿಗಳು ಬತ್ತುವ ಹಂತದಲ್ಲಿದೆ. ನೀರಿಗಾಗಿ ಮಾರುದ್ದ ಮನೆಮಂದಿ ನಡೆಯುವುದನ್ನು ಕಂಡ ಪುಟಾಣಿ ಮಕ್ಕಳು ತಾವೇ ಶ್ರಮದಲ್ಲಿ ಭಗೀರತರಾದ ವಿಶೇಷ ವರದಿ ಇಲ್ಲಿದೆ.
ಲಾಕ್ ಡೌನ್ ನಿಂದ ಶಾಲೆ ಕಾಲೇಜಿಗೆ ರಜೆಯಾದ್ದರಿಂದ ಮಕ್ಕಳು ಆಟವಾಡುತ್ತ ಕಾಲಕಳೆಯದೆ ತಾವೇ ಮನೆಮುಂದೆ ಬಾವಿ ಕೊರೆದ ಫಲಕ್ಕೆ ಗಂಗೆಯೇ ಒಲಿದಿದ್ದಾಳೆ.
ಮಿತ್ತಬಾಗಿಲು ಗ್ರಾಮದ ಕುಕ್ಕಾವು ಕೊಪ್ಪದ ಗುಂಡಿ ಚಿದಾನಂದ ಎಂಬುವರ ಬಾವಿ ಬತ್ತಿತ್ತು. ತಕ್ಷಣ ಚಿದಾನಂದ ಅವರ ಮಗ ಮತ್ತು ತನ್ನ ಸಹಪಾಠಿಗಳು ಸೇರಿ ಬಾವಿ ಕೊರೆಯುವ ಅಲ್ಲಿ ಕೊರೆಯುವ ಸಾಹಸಕ್ಕೆ ಮುಂದಾಗಿದ್ದರು. ಮನೆ ಮಂದಿ ಮಕ್ಕಳು ಆಟವಾಡುತ್ತಾರೆ ಎಂದು ಮನೆಮಂದಿಯೂ ಸುಮ್ಮನಿದ್ದರು. ಆದರೆ ನೋಡು ನೋಡುತ್ತಲೆ ಮಕ್ಕಳು ನಾಲ್ಕೇ ದಿನದಲ್ಲಿ 12 ಅಡಿ ಬಾವಿ ತೋಡಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಬಾಗಿಲು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕಾವು ಶಾಲೆಯಲ್ಲಿ ಕಲಿಯುತ್ತಿರುವ ಧನುಷ್ 9ನೇ ತರಗತಿ, ಸಹಪಾಠಿ ಪುಷ್ಪರಾಜ್ 9ನೇ ತರಗತಿ, ಪ್ರಸನ್ನ 6 ನೇ ತರಗತಿ, ಗುರುರಾಜ್ 6 ನೇ ತರಗತಿ, ಶ್ರೇಯಸ್ 5 ನೇ ತರಗತಿ, ಭವಿನೀಶ್ 4 ನೇ ತರಗತಿ ಸೇರಿ ತೋಟದಲ್ಲಿ ಬಾವಿ ತೆಗೆದಿದ್ದಾರೆ. 12 ಅಡಿ ಉದ್ದ 4 ಅಡಿ ಅಗಲದ ಬಾವಿ ಕೊರೆದ ಫಲವಾಗಿ 10 ಅಡಿಯಲ್ಲೇ 2 ಅಡಿ ಪರಿಶುದ್ಧ ನೀರು ಶೇಖರಣೆಗೊಳ್ಳುವ ಮೂಲಕ ಸುತ್ತಮುತ್ತ ಮಂದಿಗೆ ಬೆರಗು ಮೂಡಿಸಿದ್ದಾರೆ. ಸುತ್ತಮುತ್ತ ಎಲ್ಲೆಡೆ ನೀರು ಬತ್ತಿರುವಾಗ ಮಕ್ಕಳ ಶ್ರಮಕ್ಕೆ ಗಂಗೆಯೇ ಕೃಪೆ ತೋರಿರುವ ಸಂತೋಷದಲ್ಲಿ ಮಕ್ಕಳ ಹೆತ್ತವರು ಪ್ರೋತ್ಸಾಹ ನೀಡಿದ್ದಾರೆ.
ರಜೆಯಲ್ಲಿ ಮೊಬೈಲ್, ಟಿ.ವಿ. ನೋಡುತ್ತಾ ಕಾಲಕಳೆಯುವ ಕೆಲ ಮಕ್ಕಳಿಗೆ ಇದೊಂದು ಆದರ್ಷವೇ ಸರಿ.
– ಚೈತ್ರೇಶ್ ಇಳಂತಿಲ