ಬೀದರ: ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಕ್ಲೀನ್ ಇಂಡಿಯಾ ಅಭಿಯಾನ ಭಾಗವಾಗಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿನಿಯರು ನಗರದ ಜನವಾಡ ರಸ್ತೆಯ ಬಸ್ ತಂಗುದಾಣಕ್ಕೆ ಹೊಸ ಸ್ವರೂಪ ನೀಡಿದ್ದಾರೆ. ಆವರಣ ಗೋಡೆಗಳಿಗೆ ಬಣ್ಣ ಬಳಿದು ಅಂದಗೊಳಿಸಿದ್ದಾರೆ.
ಅವುಗಳ ಮೇಲೆ ಮಹಾತ್ಮ ಗಾಂಧಿಧೀಜಿ, ಸ್ವಚ್ಛ ಭಾರತ ಅಭಿಯಾನ ಜಾಗೃತಿ ಚಿತ್ರಗಳನ್ನು ಬಿಡಿಸಿ ಪ್ರಯಾಣಿಕರ ಗಮನ ಸೆಳೆಯುವಂತೆ ಮಾಡಿದ್ದಾರೆ. ಆವರಣದಲ್ಲಿನ ಕಸ, ಕಡ್ಡಿಗಳನ್ನು ಸಂಗ್ರಹಿಸಿ ಬೇರೆಡೆ ಸ್ಥಳಾಂತರಿಸಿದ್ದಾರೆ. ಆಸನಗಳನ್ನು ಶುಚಿಗೊಳಿಸಿದ್ದಾರೆ. ನೀರಿನ ಟ್ಯಾಂಕ್ ತರಿಸಿ ದೂಳು ಏಳದಂತೆ ಆವರಣದಲ್ಲಿ ನೀರು ಚಿಮ್ಮಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜಾ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಉಪ ವಿಭಾಗಾಧಿಕಾರಿಗಳಾದ ಗರಿಮಾ ಪನ್ವಾರ್, ಭುವನೇಶ ಪಾಟೀಲ ನಿಲ್ದಾಣಕ್ಕೆ ಭೇಟಿ ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಟೀಂ ಯುವಾ, ಆರ್ಟ್ ಬೀಟ್ಸ್ ತಂಡ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರ ವತಿಯಿಂದ ನಗರದಲ್ಲಿ ಒಂದು ತಿಂಗಳ ಅವಧಿಯಲ್ಲಿ ರೈಲ್ವೆ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ಪಾಪನಾಶ ಕೆರೆ, ಧಾರ್ಮಿಕ, ಸಾರ್ವಜನಿಕ ಸ್ಥಳ, ಶಾಲಾ-ಕಾಲೇಜುಗಳಲ್ಲಿ ಸ್ವತ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ| ವಿದ್ಯಾ ಪಾಟೀಲ ಹೇಳಿದ್ದಾರೆ.
ಜನವಾಡ ರಸ್ತೆಯ ಬಸ್ ತಂಗುದಾಣ ಶುಚಿಗೊಳಿಸಿ, ಬಣ್ಣ ಬಳಿದು, ಅದಕ್ಕೆ ನವೀನ ಕಳೆ ನೀಡಿದ್ದಕ್ಕೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಧಿಕಾರಿಗಳು ಕೂಡ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಹೀಗಾಗಿ ಸಂಘ ಸಂಸ್ಥೆಗಳು ಮತ್ತು ವಿದ್ಯಾರ್ಥಿನಿಯರ ಶ್ರಮ ಸಾರ್ಥಕವಾಗಿದೆ ಎಂದು ತಿಳಿಸಿದರು.
ಮಹಿಳಾ ಕಾಲೇಜು ಪ್ರಾಚಾರ್ಯ ಪ್ರೊ| ರಾಜಪ್ಪ ಬಬಚೇಡಿ, ಉಪನ್ಯಾಸಕರಾದ ಪ್ರೊ| ಮನೋಹರ ಮೇತ್ರೆ, ಪ್ರೊ| ಮನೋಜಕುಮಾರ, ಪ್ರೊ| ಶ್ರೀನಿವಾಸ ರೆಡ್ಡಿ, ಪ್ರೊ| ಸಂಜೀವ ಅಪ್ಪೆ ಮತ್ತು ವೈಜಿನಾಥ ಇದ್ದರು.