Advertisement

Hunsur: ಬಸ್‌ ವ್ಯವಸ್ಥೆಗಾಗಿ ವಿದ್ಯಾರ್ಥಿಗಳಿಂದ ರಸ್ತೆ ತಡೆದು ಪ್ರತಿಭಟನೆ

01:25 PM Dec 05, 2023 | Team Udayavani |

ಹುಣಸೂರು: ಸಕಾಲದಲ್ಲಿ ಬಸ್ ವ್ಯವಸ್ಥೆ ಇಲ್ಲದೆ ಶಾಲಾ-ಕಾಲೇಜಿಗೆ ತೆರಳಲು ತೊಂದರೆಯಾಗುತ್ತಿದೆ ಎಂದು ಹುಣಸೂರು-ಎಚ್.ಡಿ.ಕೋಟೆ ಹೆದ್ದಾರಿಯ ತಾಲೂಕಿನ ಹೊಸೂರು ಗೇಟ್‌ನಲ್ಲಿ ವಿದ್ಯಾರ್ಥಿಗಳು ದಿಢೀರ್ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

Advertisement

200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಚ್.ಡಿ.ಕೋಟೆ ಹಾಗೂ ಹುಣಸೂರು ಕಡೆಯಿಂದ ಬರುತ್ತಿದ್ದ ಆರು ಬಸ್‌ಗಳನ್ನು ತಡೆದು ರಸ್ತೆತಡೆ ನಡೆಸಿ, ಸಾರಿಗೆ ಸಂಸ್ಥೆ ವಿರುದ್ದ ಘೋಷಣೆ ಮೊಳಗಿಸಿ, ಸ್ಥಳಕ್ಕೆ ಡಿಪೋ ಮ್ಯಾನೇಜರ್ ಬಂದು ಬಸ್‌ಗಳನ್ನು ಓಡಿಸುವ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ವಿಷಯ ತಿಳಿದ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಮುನಿಸ್ವಾಮಿ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮನವೊಲಿಸಿದರಾದರೂ ಡಿಪೊ ಮ್ಯಾನೇಜರ್ ಬರುವವರೆಗೆ ಪ್ರತಿಭಟನೆ ಹಿಪಡೆಯುವುದಿಲ್ಲವೆಂದು ಪಟ್ಟು ಹಿಡಿದರು.

ಹೆಚ್ಚುವರಿ ಬಸ್‌ಗೆ ಆಗ್ರಹ:

ಈ ವೇಳೆ ವಿದ್ಯಾರ್ಥಿಗಳು, ಈ ಮಾರ್ಗದಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗಾಗಿ ಹುಣಸೂರಿಗೆ ಬರಬೇಕಿದೆ. ಆದರೆ ಇಲ್ಲಿರುವ ಬಸ್‌ಗಳು ಸಾಲುತ್ತಿಲ್ಲ. ಅಲ್ಲದೆ ಬಸ್‌ನಲ್ಲಿ ಪ್ರಯಾಣಿಕರು ತುಂಬಿರುತ್ತಾರೆ. ವಿದ್ಯಾರ್ಥಿಗಳು ಬಾಗಿಲಿನಲ್ಲಿ ನೇತಾಡಿಕೊಂಡು ಬರುವ ಸ್ಥಿತಿ ಇದೆ. ಸಕಾಲದಲ್ಲಿ ಬಸ್‌ಗಳಿಲ್ಲದೆ ನಿತ್ಯ  ಕ್ಲಾಸ್ ಮಿಸ್ ಆಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಪ್ರತಿಭಟನೆ ಹಾದಿ ಹಿಡಿದಿದ್ದೇವೆ. ಡಿಪೋ ಮ್ಯಾನೇಜರ್ ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಿ. ಅಲ್ಲಿಯವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದರು.

Advertisement

ಡಿಪೋ ಮ್ಯಾನೇಜರ್ ಭರವಸೆ:  

ನಂತರ ಪೊಲೀಸರು ಡಿಪೋ ಮ್ಯಾನೇಜರ್ ಸುಬ್ರಮಣ್ಯ ಅವರನ್ನು ಸ್ಥಳಕ್ಕೆ ಕರೆಸಿದರು. ಈ ವೇಳೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ಡಿಪೋ ಮ್ಯಾನೇಜರ್ ಡಿಪೋದಲ್ಲಿ ಬಸ್‌ಗಳ ಕೊರತೆ ಇದೆ. ಆದರೂ ಬೆಳಗ್ಗೆ 8.30ಕ್ಕೆ ಮಂಗಳವಾರದಿಂದಲೇ ಹುಣಸೂರು ಡಿಪೋದಿಂದ ಗುರುಪುರದ ವರೆಗೆ ಹೆಚ್ಚುವರಿ ಬಸ್ ಓಡಿಸಲಾಗುವುದು. ಆದರೆ ಸಂಜೆ ವೇಳೆಗೆ ತಕ್ಷಣಕ್ಕೆ ಬಸ್ ಓಡಿಸಲು ಕಷ್ಟವಾಗುತ್ತಿದ್ದು, ಹೊಸ ಬಸ್ ಬಂದ ನಂತರ ಸಂಜೆ ಬಸ್ ಬಿಡಲು ಕ್ರಮವಹಿಸಲಾಗುವುದೆಂಬ ಭರವಸೆ ಮೇರೆಗೆ ವಿದ್ಯಾರ್ಥಿಗಳು ರಸ್ತೆ ತಡೆ ಹಿಂಪಡೆದರು.

ಪೊಲೀಸರ ಎಚ್ಚರಿಕೆ:

ಈ ವೇಳೆ ಪೊಲೀಸರಿಗೆ ಮಾಹಿತಿ ನೀಡದೆ ಪ್ರತಿಭಟನೆ ನಡೆಸುವಂತಿಲ್ಲವೆಂದು  ಇನ್ಸ್ ಪೆಕ್ಟರ್ ಮುನಿಸ್ವಾಮಿಯವರ ಎಚ್ಚರಿಕೆಗೆ ನಾವು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗದ ಪರಿಣಾಮ ಅನಿವಾರ್ಯವಾಗಿ ಬಸ್ ತಡೆದಿದ್ದೇವೆಂದು ವಿದ್ಯಾರ್ಥಿಗಳು ಸ್ಪಷ್ಟನೆ ನೀಡಿ, ಮುಂದೆ ಎಚ್ಚರಿಕೆ ವಹಿಸುವುದಾಗಿ ವಿದ್ಯಾರ್ಥಿಗಳು ತಿಳಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆಗೆ ಪೋಷಕರು ಹಾಗೂ ಗ್ರಾಮಸ್ಥರು ಸಾಥ್ ನೀಡಿದ್ದರು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಡೆಸಿದ ರಸ್ತೆ ತಡೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next