Advertisement

ಕಲಿತದ್ದನ್ನೇ ಮತ್ತೆ ಕಲಿಯುತ್ತಿದ್ದಾರೆ ಲಕ್ಷಾಂತರ ವಿದ್ಯಾರ್ಥಿಗಳು !

03:39 AM Feb 15, 2019 | |

ಮಣಿಪಾಲ: ರಾಜ್ಯ ಪಠ್ಯಕ್ರಮದ 8ನೇ ತರಗತಿಯಲ್ಲಿ ಕಲಿತ ವಿಷಯಗಳನ್ನೇ 9ನೇ ತರಗತಿಯಲ್ಲೂ ಎನ್‌ಸಿಇಆರ್‌ಟಿ ಪಠ್ಯಕ್ರಮದ ಹೆಸರಿನಲ್ಲಿ ಕಲಿಯಬೇಕಾದ ಅನಿವಾರ್ಯತೆಗೆ ವಿದ್ಯಾರ್ಥಿಗಳು ಸಿಲುಕಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

Advertisement

ಈಗಾಗಲೇ ಈ ಶೈಕ್ಷಣಿಕ ವರ್ಷ ಮುಗಿಯುವ ಹಂತದಲ್ಲಿದೆ. ಒಂದುವೇಳೆ ಕೂಡಲೇ ಸರಿಪ ಡಿಸ ದಿದ್ದರೆ ಮುಂದಿನ ವರ್ಷದ ವಿದ್ಯಾರ್ಥಿ ಗಳೂ ಇದೇ ಅನಿವಾರ್ಯತೆಯನ್ನು ಎದುರಿಬೇಕಿದೆ. ಇದರೊಂದಿಗೆ ಶಿಕ್ಷಕರೂ ಕಲಿಸಿದ್ದನ್ನೇ ಮತ್ತೆ ಕಲಿಸುವ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಗಣಿತ ಮತ್ತು ರಸಾಯನಶಾಸ್ತ್ರಕ್ಕೆ ಹೋಲಿಸಿದರೆ ಭೌತಶಾಸ್ತ್ರದಲ್ಲಿ ಈ ಪುನರಾವರ್ತನೆ ಹೆಚ್ಚು. 

ಭೌತಶಾಸ್ತ್ರದ 4 ಅಧ್ಯಾಯಗಳಲ್ಲಿ ಒಂದೇ ವಿಷಯವನ್ನು 8 ಮತ್ತು 9ನೇ ತರಗತಿಯಲ್ಲಿ ಕಲಿಯಬೇಕಿದೆ. 9ನೇ ತರಗತಿಯ ಪಠ್ಯದಲ್ಲಿ ಅಭ್ಯಾಸ ಸಂಬಂಧಿ ಅಂಶಗಳಿಗೆ ಕೊಂಚ ಹೆಚ್ಚು ಒತ್ತು ನೀಡಿರುವುದು ಬಿಟ್ಟರೆ ಉಳಿದ ಪಠ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ರಸಾಯನಶಾಸ್ತ್ರ ಮತ್ತು ಗಣಿತದಲ್ಲೂ ಕೆಲವು ವಿಷಯಗಳು ಪುನರಾವರ್ತನೆ ಆಗಿವೆ. ಭೌತಶಾಸ್ತ್ರಕ್ಕೆ ಹೋಲಿಸಿದರೆ ಈ ಪ್ರಮಾಣ ಕಡಿಮೆ ಎಂಬುದೇ ಸಮಾಧಾನ ಎನ್ನುತ್ತಾರೆ ಶಿಕ್ಷಕರೊಬ್ಬರು.

ಭೌತಶಾಸ್ತ್ರದಲ್ಲೇ ಹೆಚ್ಚು 
ಭೌತಶಾಸ್ತ್ರದಲ್ಲಿ 9ನೇ ತರಗತಿಯಲ್ಲಿ 8ನೇ ಅಧ್ಯಾಯ ಚಲನೆ ಎಂದಿದ್ದರೆ 8ನೇ ತರಗತಿಯಲ್ಲಿ 8ನೇ ಅಧ್ಯಾಯ ಚಲನೆಯ ವಿವರಣೆ ಎಂದಿದೆ. 9ನೇ ತರಗತಿಯ 9ನೇ ಅಧ್ಯಾಯದಲ್ಲಿ ಬಲ ಮತ್ತು ಚಲನೆಯ ನಿಯಮಗಳು ಎಂದಿದ್ದರೆ 8ನೇ ತರಗತಿಯಲ್ಲೂ ಅದೇ ಪಾಠವಿದೆ. 8ನೇ ತರಗತಿಯ 10ನೇ ಅಧ್ಯಾಯದಲ್ಲಿ ಶಕ್ತಿ ಮತ್ತು ಅದರ ರೂಪಗಳು ಎಂದಿದೆ. 9ನೇ ತರಗತಿ ಯಲ್ಲಿ ಕೆಲಸ ಮತ್ತು ಶಕ್ತಿ ಎಂಬ ಅಧ್ಯಾಯ ಇದೆ. 9ನೇ ತರಗತಿಗೆ ಶಬ್ದ ಎಂಬ ಅಧ್ಯಾಯ  ಇದ್ದರೆ 8ನೇ ತರಗತಿಗೆ ಶಬ್ದ ಜಗತ್ತು ಎಂದಿದ್ದು; ಪ್ರತಿಧ್ವನಿ ಮತ್ತು ಅಲ್ಟ್ರಾಸೌಂಡ್‌ ವಿಷಯ ಬಿಟ್ಟರೆ ಬೇರೆ ಎಲ್ಲವೂ ಒಂದೇ. ಈ ಎಲ್ಲ ಅಧ್ಯಾಯಗಳಲ್ಲಿ ವಿಷಯ ಒಂದೇ. 9ನೇ ತರಗತಿಗೆ ಹೆಚ್ಚುವರಿ ಅಭ್ಯಾಸ ಮತ್ತು ಉದಾಹರಣೆ ಹೆಚ್ಚಿವೆ. ರಸಾಯನಶಾಸ್ತ್ರದಲ್ಲಿ ಅಣು- ಪರಮಾಣುಗಳು ಮತ್ತು ಪರಮಾಣು ರಚನೆ ವಿಷಯ 8 ಮತ್ತು 9ನೇ ತರಗತಿಗೆ ಒಂದೇ ರೀತಿ ಇವೆ. ಗಣಿತದಲ್ಲಿ ಗ್ರಾಫ್ 8 ಮತ್ತು 9ನೇ ತರಗತಿಗೆ ಒಂದೇ ತೆರನಾಗಿದ್ದರೆ, ತ್ರಿಭುಜಗಳ ಸರ್ವಸಮತೆ, ತ್ರಿಭುಜ ರಚನೆ, ಸರಾಸರಿ, ಮಧ್ಯಾಂಕ, ರೂಢಿ ಬೆಲೆ, ಪ್ರಮೇಯಗಳು ಪುನರಾವರ್ತನೆಯಾಗಿವೆ. 

ಹೊಸ ವಿಷಯವಿಲ್ಲ
ಇಂಥ ಪ್ರಮಾದಗಳಿಂದ ಹೊಸ ವಿಷಯಗಳನ್ನು ಕಲಿಯುವ ಅವಕಾಶದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಹೆಚ್ಚುವರಿ ವಿಷಯದ ಕಲಿಕೆಯೂ ಇಲ್ಲದೆ; ಕಲಿತದ್ದನ್ನೇ ಕಲಿಯುವುದರಿಂದ ಪ್ರಯೋಜನವಿಲ್ಲ  ಎನ್ನುತ್ತಾರೆ ಮತ್ತೂಬ್ಬ ವಿಜ್ಞಾನ ಶಿಕ್ಷಕರು.

Advertisement

10ನೇ ತರಗತಿಗೆ ಕಷ್ಟ 
ಗಣಿತ ಪಾಠಕ್ಕೆ ಸಂಬಂಧಿಸಿದಂತೆ 10ನೇ ತರಗತಿಯಲ್ಲಿ ನೇರವಾಗಿ ಹೆಚ್ಚು ಹೊಸ ವಿಷಯಗಳನ್ನು ಕಲಿಯಬೇಕಾಗಿರುವುದರಿಂದ ನಮ್ಮ ಮೇಲೆ ಅನಗತ್ಯ ಒತ್ತಡ ಹೆಚ್ಚಾಗಲಿದೆ. ವಿಷಯ ಪುನರಾವರ್ತನೆ ಬದಲಿಗೆ ಎಂಟನೇ ತರಗತಿಯಿಂದಲೇ ಹೊಸ ವಿಷಯಗಳನ್ನು ಪರಿಚಯಿಸಿದ್ದರೆ ಅನುಕೂಲವಾಗುತ್ತಿತ್ತು ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ. 

ಹೊಸತೇನೂ ಅಲ್ಲ
ಕಳೆದ ವರ್ಷ ಎನ್‌ಸಿಇಆರ್‌ಟಿ ಪಠ್ಯಕ್ರಮಕ್ಕೆ 9ನೇ ತರಗತಿ ಪಾಠ ಬದಲಾಗಿತ್ತು. ಹೊಸ ಪಠ್ಯಕ್ರಮ ಎಂದು ಹೇಳಲಾಗಿತ್ತಾದರೂ ಇದು 2005ರ ಪಠ್ಯಕ್ರಮವನ್ನು ಹೋಲುತ್ತಿದೆ. 2011ರಲ್ಲಿ ಮೇಲ್ದರ್ಜೆಗೇರಿಸಲ್ಪಟ್ಟ ಪಠ್ಯಕ್ರಮವನ್ನು ಬೋಧಿಸಲಾಗುತ್ತಿತ್ತು. ಈಗ ಎನ್‌ಸಿಇಆರ್‌ಟಿ ನೆಪದಲ್ಲಿ 2005ರ ಪಠ್ಯಕ್ರಮಕ್ಕೆ ಹಿಂದಿರುಗಿದಂತಾಗಿದೆ. ಜೈವಿಕ ಅನಿಲ ಸ್ಥಾವರ ಪಾಠ ಹಳೆಯ ಪಠ್ಯಕ್ರಮದಲ್ಲಿದ್ದು ಬಳಿಕ ಹೊಸತರಲ್ಲಿ ತೆಗೆಯಲಾಗಿತ್ತು.ಈಗ ಮತ್ತೆ ಪಾಠವನ್ನು ಅಳವಡಿಸಲಾಗಿದೆ. ಇಂದಿನ ಜಾಗತಿಕ ಅಗತ್ಯವಾದ ಜೈವಿಕ ಇಂಧನದ ಬಗೆಗಿನ ಪಾಠವನ್ನು ತೆಗೆದುಹಾಕಲಾಗಿದೆ.  

ಪರಿಹಾರ ಏನು?
ಎಂಟನೇ ತರಗತಿಗೆ ರಾಜ್ಯ ಪಠ್ಯಕ್ರಮವಿದ್ದು ಒಂಬತ್ತನೇ ತರಗತಿಗೆ ಎನ್‌ಸಿಇಆರ್‌ಟಿ ಪಠ್ಯಕ್ರಮ ಇರುವುದರಿಂದ ವಿಷಯಗಳ ಮರುಕಳಿಕೆ ಆಗುತ್ತಿದೆ. ಎಂಟನೇ ತರಗತಿಗೂ ಶೀಘ್ರ ತತ್ಸಮಾನ ಪಠ್ಯಕ್ರಮ ಅಳವಡಿಸಿದಲ್ಲಿ ಸಮಸ್ಯೆ ಪರಿಹಾರವಾಗಲಿದೆ. ಶೀಘ್ರ ಕ್ರಮ ಕೈಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ನಷ್ಟ ಉಂಟಾಗುವುದನ್ನು ತಪ್ಪಿಸಬಹುದು ಎನ್ನುತ್ತಾರೆ ಕೆಲವು ಶಿಕ್ಷಕರು. 

ಇಲಾಖೆಯ ಗಮನಕ್ಕೆ 
ಹಂತಹಂತವಾಗಿ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಅಳವಡಿಸಲಾಗುತ್ತಿದೆ. ಪಠ್ಯ ಪುನರಾವರ್ತನೆ ಬಗ್ಗೆ ಪರಿಶೀಲನೆ ನಡೆಸಿ ಇಲಾಖೆಯ ಗಮನಕ್ಕೆ ತರಲಾಗುವುದು.
ಶೇಷಶಯನ ಕಾರಿಂಜ, ಡಿಡಿಪಿಐ ಉಡುಪಿ ಜಿಲ್ಲೆ

ಸ್ಪೈರಲ್‌  ಅಪ್ರೋಚ್‌ ಅಲ್ಲ
ವಿಷಯ ಪುನರಾವರ್ತನೆ ಸ್ಪೈರಲ್‌ ಅಪ್ರೋಚ್‌ ಅಲ್ಲ. ವಿಷಯ ವಸ್ತು ಒಂದೇ ಆಗಿದ್ದು, ಉದಾಹರಣೆ ಮತ್ತು ಅಭ್ಯಾಸ ಹೆಚ್ಚಿದ್ದ ಮಾತ್ರಕ್ಕೆ ಅದನ್ನು ಹೆಚ್ಚು ಹೆಚ್ಚು ಕಲಿಯುತ್ತ ಹೋಗುವ ಸ್ಪೈರಲ್‌ ಅಪ್ರೋಚ್‌ಗೆ ಹೋಲಿಸಲು ಸಾಧ್ಯವಿಲ್ಲ.
ವಿಜ್ಞಾನ ಶಿಕ್ಷಕರು, ಮಣಿಪಾಲ 

Advertisement

Udayavani is now on Telegram. Click here to join our channel and stay updated with the latest news.

Next