ಉಡುಪಿ: ವಿದ್ಯಾರ್ಥಿಗಳು ಸಾಧನೆ ಮಾಡಲು ಡಾ| ಬಿ.ಆರ್. ಅಂಬೇಡ್ಕರ್ ಆದರ್ಶಗಳು ಸ್ಫೂರ್ತಿಯಾಗಲಿ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಪುರಭವನದಲ್ಲಿ ಶುಕ್ರವಾರ ನಡೆದ ಡಾ| ಬಿ.ಆರ್. ಅಂಬೇಡ್ಕರ್ ರಾಜ್ಯಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತ ನಾಡಿದರು.
ಅಸ್ಪೃಶ್ಯತೆ ಕಾರಣದಿಂದ ಬಾಲ್ಯದಲ್ಲಿ ಶಾಲೆಯ ಹೊಸ್ತಿಲಲ್ಲಿ ಕುಳಿತು ವಿದ್ಯಾಭ್ಯಾಸ ಮಾಡಿದ ಅಂಬೇಡ್ಕರ್ ಅನಂತರ ಕೊಲಂಬಿಯ ವಿ.ವಿ.ಯಿಂದ ಡಾಕ್ಟರೇಟ್ ಸಹಿತ ಹಲವು ಡಿಗ್ರಿಗಳನ್ನು ಪಡೆದರು. ರಾಷ್ಟ್ರದ ಕಾನೂನುಸಚಿವರಾಗಿ ದುರ್ಬಲರು, ಶೋಷಿತರು,ಮಹಿಳೆಯರ ಪರವಾಗಿ ಹಲವು ಕಾನೂನು ರೂಪಿಸಲು ಶ್ರಮಿಸಿದ್ದರು. ಕಾರ್ಮಿಕ ಕಾನೂನು, ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡುವ ಕುರಿತು ಪ್ರಥಮವಾಗಿ ಪ್ರಯತ್ನಿಸಿದ್ದರು. ಅಂಬೇಡ್ಕರ್ ಅವರನ್ನು ದಲಿತರ ಪ್ರತಿನಿಧಿಯಾಗಿ ಪ್ರತಿ ಬಿಂಬಿಸುವುದು ಸರಿಯಲ್ಲ, ಅವರು ಇಡೀ ಭಾರತಕ್ಕೆ ಮತ್ತು ವಿಶ್ವಕ್ಕೆ ಸೇರಿದ ಅಸಾಮಾನ್ಯ ವ್ಯಕ್ತಿ ಎಂದರು.
ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ಅಪರ ಜಿಲ್ಲಾದಿಕಾರಿ ಜಿ. ಅನುರಾಧಾ, ಮಹಿಳಾ ಸರಕಾರಿ ಪ್ರ. ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ಜಗದೀಶ ರಾವ್, ಚಿಂತಕ ಬೆಂಗಳೂರಿನ ಶಿವಸುಂದರ್, ಮಂಗಳೂರು ವಿ.ವಿ.ಯ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಪ್ರೊ| ವಿನಿತಾ ರೈ ಉಪಸ್ಥಿತರಿದ್ದರು.ರಾಜ್ಯ ಎನ್ನೆಸ್ಸೆಸ್ ಅಧಿಕಾರಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಪದ ನಿಮಿತ್ತ ಸರಕಾರದ ಜಂಟಿ ಕಾರ್ಯದರ್ಶಿ ಡಾ| ಗಣನಾಥ ಎಕ್ಕಾರು ಸ್ವಾಗತಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
“ಎನ್ನೆಸ್ಸೆಸ್, ಕ್ರೀಡೆ: ಗುರಿ-ಅನುದಾನ ಹೆಚ್ಚಳ’
ತಾನು ಸಚಿವನಾಗಿದ್ದಾಗ ರಾಜ್ಯದಲ್ಲಿ 3.5 ಲಕ್ಷ ಎನ್ನೆಸ್ಸೆಸ್ ಸ್ವಯಂ ಸೇವಕರಿದ್ದು, ಆದನ್ನು 10 ಲಕ್ಷಕ್ಕೆ ಏರಿಸಬೇಕೆಂದು ಸೂಚನೆ ಕೊಟ್ಟಿದ್ದೆ. ಪ್ರಸ್ತುತ 4.75 ಲಕ್ಷ ಸ್ವಯಂಸೇವಕರಿದ್ದು, 1 ವರ್ಷದೊಳಗೆ 10 ಲಕ್ಷ ಗುರಿ ಮುಟ್ಟಲು ಶ್ರಮಿಸಲಾಗುವುದು. ರಾಜ್ಯದ ಬಜೆಟ್‌ನಲ್ಲಿ ನನ್ನ ಶಿಫಾರಸಿನ ಮೇರೆಗೆ ಎನ್ನೆಸ್ಸೆಸ್‌ಗೆ ನೀಡುವ ಅನುದಾನವನ್ನು 5 ಕೋ.ರೂ.ಯಿಂದ 13 ಕೋ. ರೂ. ಹಾಗೂ ಕ್ರೀಡಾ ಇಲಾಖೆಗೆ 145 ಕೋ. ರೂ.ಯಿಂದ 285 ಕೋ. ರೂ.ಗಳಿಗೆ ಹೆಚ್ಚಿಸಲಾಗಿದೆ. ಎನ್ನೆಸ್ಸೆಸ್ ಅನ್ನು ಬಲಪಡಿಸಲು ಹಾಗೂ ವಿದ್ಯಾರ್ಥಿಗಳನ್ನು ಆಕರ್ಷಿಸಲು ಅನೇಕ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.