ಬೀದರ: ನಗರದ ಕರ್ನಾಟಕ ಮಹಾವಿದ್ಯಾಲಯ ಇತಿಹಾಸ ವಿಭಾಗದ ವಿದ್ಯಾರ್ಥಿಗಳನ್ನು ಬೀದರ್ ಜಿಲ್ಲೆಯ ಸ್ಥಳೀಯ ಇತಿಹಾಸ ಪರಿಚಯ ಮಾಡಿಕೊಡಲು ಕರ್ನಾಟಕ ಮಹಾವಿದ್ಯಾಲಯದಿಂದ ಇಲ್ಲಿನ ಯುವಾ ಎನ್‌ಜಿಒ ಸಂಸ್ಥೆ ಸಹಯೋಗದೊಂದಿಗೆ ಪಾರಂಪರಿಕ ನಡಿಗೆಯನ್ನು ಸೋಮವಾರ ಏರ್ಪಡಿಸಲಾಗಿತ್ತು.
ಸ್ಥಳೀಯ ಕ್ಷೇತ್ರ ಭೇಟಿಯಲ್ಲಿ ಒಟ್ಟು 80 ಇತಿಹಾಸದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ನಡಿಗೆಯನ್ನು ಮಹಾವಿದ್ಯಾಲಯದ ಆವರಣದಿಂದ ಆರಂಭಿಸಲಾಯಿತು. ಕರಾಶಿ ಸಂಸ್ಥೆ ಕಾರ್ಯದರ್ಶಿ ಸಿದ್ರಾಮ್ ಪಾರಾ, ಸದಸ್ಯ ಸಿದ್ಧರಾಜ ಪಾಟೀಲ ಮತ್ತು ಪ್ರಾಂಶುಪಾಲರಾದ ಡಾ| ಮಲ್ಲಿಕಾರ್ಜುನ ಚಲ್ಪಾ ಚಾಲನೆ ನೀಡಿ, ಈ ನಡಿಗೆಗೆ ಶುಭ ಹಾರೈಸಿದರು.
ವಿದ್ಯಾರ್ಥಿಗಳೊಂದಿಗೆ ಇತಿಹಾಸ ವಿಭಾಗದ ಉಪನ್ಯಾಸಕರಾದ ಲಕ್ಷ್ಮೀ ಎನ್. ಕುಂಬಾರ, ಡಾ| ಆಶಾ ಮುದ್ದಾ, ಡಾ| ದಿಲೀಪ್ ಕುಮಾರ್, ಆನಂದ್ ಮತು ಐಸಿಐಸಿ ಸಹಾಯಕ ಸಂಯೋಜಕ ರಾಜಮೋಹನ್ ಪರದೇಶಿ ಭಾಗಿಯಾಗಿದ್ದರು. ಕಾಲೇಜಿನ ಆವರಣದಿಂದ ಆರಂಭವಾದ ಈ ನಡಿಗೆಯು ನೌಬಾದ್ ಹತ್ತಿರದ ಅಲಿಯಾಬಾದ್ ಸುರಂಗ ಬಾವಿಗೆ ಯುವ ಟೀಮ್‌ನ ಸಂಚಾಲಕರಾದ ವಿನಯ್ ಮಾಳಗೆ ಮತ್ತು ಅವರ ತಂಡದ ನೇತೃತ್ವದಲ್ಲಿ ಭೇಟಿ ನೀಡಲಾಯಿತು.
ವಿನಯ್ ಮಾಳಗೆ ಅವರು ಅಲಿಯಾಬಾದ್ ಸುರಂಗ ಬಾವಿಯ ವ್ಯವಸ್ಥಿತ ನಿರ್ಮಾಣ, ಮಹತ್ವ ಮತ್ತು ಇಂದಿನ ಅನುಕೂಲತೆಗಳನ್ನು ಕುರಿತು ವಿವರಿಸಿ, ಈ ನೈಸರ್ಗಿಕ ನೀರಿನ ಆಧಾರವಾಗಿರುವ ಸುರಂಗ ಬಾವಿಯು ಸುಮಾರು 14ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಇಂದಿಗೂ ಈ ಬಾವಿಯಲ್ಲಿನ ನೀರಿನ ಒಳ ಹರಿವು ನಿಂತು ಹೋಗಿಲ್ಲ ಎಂಬುದು ವಿಶೇಷ ಮತ್ತು ಐತಿಹಾಸಿಕ ಮಾಹಿತಿಯನ್ನು ವಿದ್ಯಾರ್ಥಿಗಳು ಅರಿತುಕೊಂಡರು.
ಅಲ್ಲಿಂದ 2ನೇ ಕಿಲೋ ಮೀಟರ್ ಅಂತರದಲ್ಲಿರುವ ಮದರ ವೆಲ್ ಬಾವಿಗೆ ಭೇಟಿ ನೀಡಲಾಯಿತು. ಈ ಬಾವಿಯಿಂದ ಉಳಿದ ಎಲ್ಲ ಸುರಂಗ ಬಾವಿಗಳಿಗೆ ನೀರು ಪೂರೈಕೆ ಆಗುವುದರ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು.