Advertisement
ಕೊರೊನಾ ಕಾರಣದಿಂದ 2020-21ನೇ ಸಾಲಿನಲ್ಲಿ ಪ್ರಥಮ ಪಿಯುಸಿ ಪರೀಕ್ಷೆ ನಡೆಸಿಲ್ಲ. ನೇರವಾಗಿ ಎಲ್ಲರನ್ನೂ ದ್ವಿತೀಯ ಪಿಯುಸಿಗೆ ತೇರ್ಗಡೆ ಮಾಡಲಾಗಿತ್ತು. ಜತೆಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಶೇ.30ರಷ್ಟು ಪಠ್ಯ ಕಡಿತ ಮಾಡಲಾಗಿತ್ತು. ಶೇ.70ರಷ್ಟು ಪಠ್ಯವನ್ನೂ ಪೂರ್ಣ ಪ್ರಮಾಣ ದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲು ಅಥವಾ ವಿದ್ಯಾರ್ಥಿಗಳು ಅದನ್ನು ಅಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಈ ವರ್ಷ ಪಠ್ಯ ಕಡಿತದ ಚಿಂತನೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಿಲ್ಲ. ಕಳೆದ ವರ್ಷದಲ್ಲಿ ಕಲಿಯಲು ಸಾಧ್ಯವಾಗದ ವಿಷಯಗಳಿಗೆ ಬ್ರಿಡ್ಜ್ ಕೋರ್ಸ್ ಕೂಡ ರೂಪಿಸಿಲ್ಲ. ಹೀಗಾಗಿ ಕಲಿಕೆಯ ನಿರಂತರತೆ ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
Related Articles
Advertisement
ಯಾವುದೇ ಸೂಚನೆ ಬಂದಿಲ್ಲ :
ಈ ವರ್ಷ ಪಠ್ಯ ಕಡಿತ ಸಂಬಂಧಿಸಿ ಯಾವುದೇ ಸೂಚನೆ ಬಂದಿಲ್ಲ. ಬದಲಾಗಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಠ್ಯಕ್ರಮಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಯಾವ ತಿಂಗಳಲ್ಲಿ ಯಾವ ಪಾಠ ಮಾಡಬೇಕು ಎಂಬುದನ್ನು ಸೂಚಿಸಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾದ ಪೂರ್ಣ ಅಂಶಗಳ ಬೋಧನೆ ಸಾಧ್ಯವಿಲ್ಲ. ಕೇವಲ ಪರೀಕ್ಷೆಗೆ ಬೇಕಾದಷ್ಟು ಅಂಶಗಳನ್ನು ಬೋಧಿಸಲು ಮಾತ್ರ ಸಾಧ್ಯವಿದೆ. ಬ್ರಿಡ್ಜ್ ಕೋರ್ಸ್ ಬಗ್ಗೆಯೂ ಯಾವುದೇ ಸೂಚನೆ ಬಂದಿಲ್ಲ. ಈ ವರ್ಷ ಸಿಗಬಹುದಾದ ಅವಧಿಗೆ ಅನು ಗುಣವಾಗಿ ಪಾಠ ಮಾಡುವ ಬಗ್ಗೆ ಸೂಚನೆ ಬಂದಿದೆ ಎಂದು ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.
ಪಠ್ಯ ಸಿದ್ಧವಿದೆ :
ಈ ವರ್ಷ ಪಠ್ಯ ಕಡಿತದ ಚಿಂತನೆ ಇಲ್ಲ. 2021-22ನೇ ಸಾಲಿನ ಪಠ್ಯದ ಸಂಪೂರ್ಣ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ. ವಿದ್ಯಾರ್ಥಿಗಳು ಹಾಗೂ ಬೋಧಕರು ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಬ್ರಿಡ್ಜ್ ಕೋರ್ಸ್ ಅಧಿಕೃತವಾಗಿ ರೂಪಿಸಿಲ್ಲ. ಬದಲಾಗಿ ಉಪನ್ಯಾಸಕರು ತಮ್ಮ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ಹಿಂದಿನ ತರಗತಿಗಳ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡಿ, ಈ ವರ್ಷದ ಕಲಿಕೆಗೆ ಅನುಕೂಲವಾಗುವಂತೆ ಸಜ್ಜುಗೊಳಿಸಲು ಅವಕಾಶವಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
– ರಾಜು ಖಾರ್ವಿ ಕೊಡೇರಿ