Advertisement

ಪ್ರಧಾನಿ ಮೋದಿಗೆ ವಿದ್ಯಾರ್ಥಿನಿ ಬರೆದ ಪತ್ರಕ್ಕೆ ಸ್ಪಂದನೆ

02:26 PM Oct 07, 2019 | Suhan S |

ಹೊಸನಗರ: ಹದಗೆಟ್ಟ ರಸ್ತೆಯಿಂದ ಸಂಪರ್ಕಕ್ಕೆ ಕಷ್ಟವಾಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರಕ್ಕೆ ಕೊನೆಗೂ ಸ್ಪಂದನೆ ಸಿಕ್ಕಿದೆ.

Advertisement

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆರೋಡಿ-ಮಂಡ್ರಳ್ಳಿ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕರ್ನಾಟಕ ನೀರಾವರಿ ನಿಗಮದಡಿ ಒಂದು ಕೋಟಿ ರೂ. ಬಿಡುಗಡೆ ಮಾಡಿದೆ. ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿರುವ, ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಕೊಡಸೆ ಗ್ರಾಮದ ಅಶ್ವಿ‌ನಿ ಜಿ. ಎರಡು ಕಿಮೀ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದು ಕೂಡಲೇ ಅಭಿವೃದ್ಧಿ ಮಾಡಿಸುವಂತೆ ಪತ್ರ ಬರೆದಿದ್ದಳು.

ಐಶ್ವರ್ಯ ಪಿಯುಸಿ ಓದುತ್ತಿದ್ದ ವೇಳೆ ಈ ಪತ್ರ ಬರೆದಿದ್ದು, ಪ್ರಧಾನಿ ಕಚೇರಿ ಕೂಡಲೇ ಸ್ಪಂದಿಸಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನಿಸಿತ್ತು. ಅಲ್ಲಿಂದ ಶಿವಮೊಗ್ಗ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಪತ್ರ ರವಾನಿಸಿತ್ತು. ಆದರೆ ನಂತರ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ.

ಸಂಸದರ ಸ್ಪಂದನೆ: ಐಶ್ವರ್ಯ ಪ್ರಸ್ತುತ ಬಿಎ ಓದುತ್ತಿದ್ದು, ಆಕೆ ಪಿಯುಸಿಯಲ್ಲಿರುವಾಗ ಪತ್ರ ಬರೆದಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಇದನ್ನು ಅರಿತ ಜಿಪಂ ಸದಸ್ಯ ಸುರೇಶ ಸ್ವಾಮಿರಾವ್‌ ಆರೋಡಿಗೆ ಭೇಟಿ ನೀಡಿ ರಸ್ತೆ ಪರಿಶೀಲಿಸಿದ್ದರು. ಇದರಿಂದ ಉತ್ಸಾಹ ಪಡೆದ ಐಶ್ವರ್ಯ ಸಂಸದ ಬಿ.ವೈ. ರಾಘವೇಂದ್ರ ಮತ್ತು ಶಾಸಕ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಸಂಸದರು, ಶಾಸಕರ ಸಹಕಾರದೊಂದಿಗೆ ರಾಜ್ಯ ಸರ್ಕಾರದ ಗಮನ ಸೆಳೆದು ಕರ್ನಾಟಕ ನೀರಾವರಿ ನಿಗಮದಿಂದ ಒಂದು ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ಧಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಐಶ್ವರ್ಯ ಕೇಳಿದ್ದು ಕೇವಲ ಎರಡು ಕಿಮೀ ರಸ್ತೆ ಅಭಿವೃದ್ಧಿ ; ಆದರೆ ಐದು ಕಿ.ಮೀ. ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಇದರಿಂದ ಸುಮಾರು 80 ಕುಟುಂಬಗಳಿಗೆ ಸಹಕಾರಿಯಾಗಲಿದೆ. ಅಲ್ಲದೇ ತೀರ್ಥಹಳ್ಳಿ ಸಂಪರ್ಕ ಇನ್ನಷ್ಟು ಹತ್ತಿರವಾಗಲಿದೆ. ಒಟ್ಟಾರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯ ಕಾಳಜಿಗೆ ಪ್ರತಿಫಲ ದೊರಕಿದಂತಾಗಿದೆ. ಸಂಸದರು-ಶಾಸಕರ ವಿಶೇಷ ಪ್ರಯತ್ನದಿಂದ ನನೆಗುದಿಗೆ ಬಿದ್ದಿದ್ದ ರಸ್ತೆಗೆ ಮರುಜೀವ ಬಂದಿದೆ. ಐಶ್ವರ್ಯ ಕಾಳಜಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ.

Advertisement

ಪಿಯುಸಿ ಓದುವಾಗ ಪತ್ರ ಬರೆದಿದ್ದೆ. ಅದು ಈಗ ಫಲ ಕೊಟ್ಟಿದೆ. ಇದಕ್ಕೆ ಮಾಧ್ಯಮದ ಸಹಕಾರ ಪ್ರಮುಖ ಕಾರಣ. ಅಲ್ಲದೇ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಮತ್ತು ಜಿಪಂ ಸದಸ್ಯರು ಸ್ಪಂದಿಸಿದ್ದು ಅವರಿಗೆ ಚಿರರುಣಿ.-ಐಶ್ವರ್ಯ, ದ್ವಿತೀಯ ಬಿಎ ವಿದ್ಯಾರ್ಥಿನಿ

 

-ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next