Advertisement

ಸರಕು ಸಾಗಾಟ ವಾಹನಗಳಲ್ಲಿ ವಿದ್ಯಾರ್ಥಿಗಳ ಸಂಚಾರ ನಿಷೇಧ

10:13 PM Sep 22, 2019 | Team Udayavani |

ವಿಶೇಷ ವರದಿ-ಸುಳ್ಯ : ಶಾಲೆ, ಕ್ರೀಡಾಕೂಟ, ಸಭೆ, ಸಮಾರಂಭ ಮೊದಲಾದ ಶಾಲಾ ಸಂಬಂಧಿತ ಚಟುವಟಿಕೆಗಳಿಗೆ ತೆರಳುವ ವಿದ್ಯಾರ್ಥಿಗಳನ್ನು ಸರಕು ಸಾಗಾಣಿಕ ವಾಹನಗಳಲ್ಲಿ ಕರೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Advertisement

ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘಿಸಿ ಸುರಕ್ಷಿತವಲ್ಲದ ರೀತಿಯಲ್ಲಿ ಸಂಚರಿಸುವ ಕಾರಣ ಅಪಘಾತ ಪ್ರಕರಣ ಹೆಚ್ಚಾಗಿ ಮಕ್ಕಳ ಜೀವಕ್ಕೆ ಕುತ್ತು ಉಂಟಾಗುವ ಹಿನ್ನೆಲೆಯಲ್ಲಿ ಸರಕು ಸಾಗಣೆ ವಾಹನಗಳನ್ನು ಮಕ್ಕಳ ಸಂಚಾರಕ್ಕೆ ಬಳಸದಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ಸುತ್ತೋಲೆ ರವಾನೆ
ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಈ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಕಳುಹಿಸಿದೆ. ಪ್ರತಿಭಾ ಕಾರಂಜಿ, ದಸರಾ ಕ್ರೀಡಾಕೂಟ, ಶಿಕ್ಷಣ ಇಲಾಖೆ ಕ್ರೀಡಾಕೂಟ, ಪ್ರವಾಸಗಳಿಗೆ ಬೇರೆ ಬೇರೆ ಕಡೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಕಾರಣ ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಈ ಆದೇಶ ಮಹತ್ವ ಪಡೆದಿದೆ.

ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯಸ್ಥರಿಗೆ ಶಾಲಾ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ಸರಕು ಸಾಗಾಣೆ ವಾಹನಗಳಲ್ಲಿ ಸುರಕ್ಷಿತವಲ್ಲದ ರೀತಿಯಲ್ಲಿ ಕಾರ್ಯಾಚರಣೆ ಮಾಡುವುದನ್ನು ತಡೆಗಟ್ಟಿ, ಇಲಾಖೆಯ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಲಕ ಮಾಹಿತಿ ರವಾನಿಸಲಾಗಿದೆ. ಆದೇಶ ಉಲ್ಲಂಘಿಸಿ, ಕ್ರಮ ವಹಿಸದೆ ಇರುವ ಶಾಲೆಗಳ ವಿರುದ್ಧ ಜಿಲ್ಲಾ ಶಿಕ್ಷಣ ನಿಯಂತ್ರಣಾ ಪ್ರಾಧಿಕಾರದಲ್ಲಿ ದೂರು ದಾಖಲಿಸಿ ಕ್ರಮ ಜರಗಿಸಲು ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ಆಡಳಿತ ಮಂಡಳಿ ಜವಾಬ್ದಾರಿ
ದೂರದ ಊರಿನಿಂದ ಬರುವ ಮಕ್ಕಳಿಗೆ ವಾಹನ ಸೌಲಭ್ಯವನ್ನು ಶಾಲಾ ಆಡಳಿತ ಮಂಡಳಿ ಕಡ್ಡಾಯವಾಗಿ ಒದಗಿಸಬೇಕು. ಕೆಎಸ್‌ಆರ್‌ಟಿಸಿ ರಿಯಾಯಿತಿ ದರದಲ್ಲಿನ ಬಸ್‌ ಪಾಸ್‌ ಸೌಲಭ್ಯ ಪಡೆದುಕೊಳ್ಳಲು ವಿದ್ಯಾರ್ಥಿಗಳ ಪೋಷಕರಿಗೆ ಮನವರಿಕೆ ಮಾಡುವುದು ಇತ್ಯಾದಿ ಸೂಚನೆಗಳನ್ನು ನೀಡಲಾಗಿದೆ. ತಪ್ಪಿದರೆ ಮುಂದೆ ಅನಾಹುತ ಸಂಭವಿಸಿದ ಸಂದರ್ಭ ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲಾ ಆಡಳಿತ ಮಂಡಳಿ ವಿರುದ್ಧ ಕಾನೂನು ರೀತಿ ಕ್ರಮ ಜರಗಿಸುವಂತೆ ತಿಳಿಸಲಾಗಿದೆ.

Advertisement

ಸ್ವಂತ ವಾಹನ ಸೌಲಭ್ಯ ಹೊಂದಿರದ ಶಾಲೆಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಾಲಾ ಮಕ್ಕಳ ಸಾಗಾಣಿಕೆಗಾಗಿ ವಿಶೇಷ ರಿಯಾಯಿತಿ ದರದಲ್ಲಿ ಶಾಲೆಗಳಿಗೆ ಒಪ್ಪಂದದ ಮೇರೆಗೆ ಬಸ್‌ ಒದಗಿಸುತ್ತಿದೆ. ಅರ್ಹ ಶಾಲೆಗಳು ಆಡಳಿತ ಮಂಡಳಿ ಮೂಲಕ ಈ ಸೌಲಭ್ಯ ಪಡೆದುಕೊಳ್ಳಲು ಶಿಕ್ಷಣ ಸೂಚನೆ ನೀಡಿದೆ. ಸಕ್ಷಮ ಪ್ರಾಧಿಕಾರ ಅನುಮತಿ ನೀಡದ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕರೆ ತರದಂತೆ ಶಾಲಾ ಆಡಳಿತ ಮಂಡಳಿಯು ಹೆತ್ತವರ ಸಭೆ ಕರೆದು ಮಾಹಿತಿ ನೀಡು ವಂತೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.

ಮಾಹಿತಿ ನೀಡಲಾಗಿದೆ
ಸರಕು ಸಾಗಾಣಿಕೆ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಶಾಲೆ, ಕ್ರೀಡಾಕೂಟ, ಸಭೆ ಮೊದಲಾದ ಶಾಲಾ ಸಂಬಂಧಿತ ಚಟುವಟಿಕೆಗಳಿಗೆ ಕರೆದು ಕೊಂಡು ಹೋಗುವಂತಿಲ್ಲ. ಈ ಬಗ್ಗೆ ಶಿಕ್ಷಣ ಕಚೇರಿ, ಪೊಲೀಸ್‌ ಇಲಾಖೆ, ತಾ.ಪಂ. ಮೂಲಕ ಶಾಲಾ ಮುಖ್ಯಸ್ಥರಿಗೆ, ಆಡಳಿತ ಮಂಡಳಿಗೆ ಸಭೆ ನಡೆಸಿ ಮಾಹಿತಿ ನೀಡಲಾಗಿದೆ.
– ಮಹಾದೇವ
ಕ್ಷೇತ್ರ ಶಿಕ್ಷಣಾಧಿಕಾರಿ, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next