ಮದ್ದೂರು: ಸಮರ್ಪಕವಾದ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ,ವಿದ್ಯಾಥಿಗಳು ಹಾಗೂ ಗ್ರಾಮಸ್ಥರು ಕೊಪ್ಪ-ಮದ್ದೂರು ಮಾರ್ಗದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಚಾಮನಹಳ್ಳಿ ಗ್ರಾಮದ ಕೊಪ್ಪ ರಸ್ತೆಯಲ್ಲಿ ಜಮಾವಣೆಗೊಂಡ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಸಮರ್ಪಕವಾದ ಬಸ್ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳ ಹಿತ ಕಾಯಬೇಕು ಎಂದು ಆಗ್ರಹಿಸಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಪ್ರತಿಭಟನೆಯಿಂದ ಈ ಮಾರ್ಗದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಶಾಲೆ, ಕಾಲೇಜಿಗೆ ತೆರಳಲು ಕಷ್ಟ: ಕೊರೊನಾದಿಂದ ಕಳೆದ ಹತ್ತು ತಿಂಗಳಿಂದಲೂ ಶಾಲೆ, ಕಾಲೇಜುಗಳು ಆರಂಭವಾಗದೆ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದರು.
ಸರ್ಕಾರದ ಮಾರ್ಗಸೂಚಿ ಪ್ರಕಾರ ಪ್ರೌಢಶಾಲೆ ಹಾಗೂ ಕಾಲೇಜುಗಳು ಪ್ರಾರಂಭಗೊಂಡಿದ್ದು, ಬಸ್ ಸಂಚಾರ ಇಲ್ಲದ ಕಾರಣ ಶಾಲೆ, ಕಾಲೇಜುಗಳಿಗೆ ತೆರಳಲು ಕಷ್ಟವಾಗಿದೆ ಎಂದು ದೂರಿದರು. ಕೂಡಲೇ ಕ್ರಮ ಕೈಗೊಳ್ಳಿ: ಮಂಡ್ಯ, ಮೈಸೂರು, ಭಾರತಿನಗರ, ಮದ್ದೂರು, ಚನ್ನಪಟ್ಟಣ, ರಾಮನಗರ, ಬೆಸಗರಹಳ್ಳಿ ಸೇರಿದಂತೆ ಇನ್ನಿತರ ಶಾಲೆ, ಕಾಲೇಜುಗಳಿಗೆ ತೆರಳಲು ಈ ಮಾರ್ಗದ ಬಸ್‌ಗಳನ್ನೇ ಅವಲಂಭಿಸಿದ್ದು, ವಿದ್ಯಾರ್ಥಿಗಳ ಪಾಸ್ ಇದ್ದರೂ ಕೆಲ ಬಸ್ ಚಾಲಕರು ನಿಲ್ಲಿಸದೆ ತೆರಳುತ್ತಿದ್ದಾರೆ. ಸ್ಥಳೀಯ ಗ್ರಾಮಸ್ಥರಿಗೂ ವ್ಯಾಪಾರ ವಹಿವಾಟಿಗೆ ತೆರಳಲು ತೊಂದರೆ ಉಂಟಾಗಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ :ಹೇಮಾವತಿ ನದಿ ನೀರು ಕಲುಷಿತ
ಪ್ರತಿಭಟನೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಮೇಲಧಿಕಾರಿಗಳ ಗಮನಕ್ಕೆ ತಂದು ಸಮರ್ಪಕವಾದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಮುಖಂಡರಾದ ಪ್ರಕಾಶ್, ವಿಶ್ವಾಸ್, ಪುಟ್ಟರಾಮು, ವಸಂತರಾಜು, ಶಿವಪ್ರಸಾದ್, ವಿನಯ್, ವಿಕಾಸ್, ಹರೀಶ್, ರಾಹುಲ್, ಕಿರಣ್, ಮಹೇಶ್ ಹಾಜರಿದ್ದರು.