Advertisement

ರಾಜ್ಯದ 300 ಶಾಲೆಗಳಲ್ಲಿ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಯೋಜನೆ

10:06 AM Aug 02, 2019 | keerthan |

ಉಡುಪಿ: ಪ್ರೌಢಶಾಲಾ ಮಕ್ಕಳಲ್ಲಿ ಸ್ವಯಂಶಿಸ್ತು ಅಳವಡಿಸಲು ಪ್ರೇರಕವಾಗುವ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸಲು ರಾಜ್ಯ ಸರಕಾರ ಯೋಜಿಸಿದೆ.

Advertisement

ನವ ನಾಗರಿಕ ಸಮಾಜದ ಸುಧಾರಣೆಗೆ ನಾಯಕತ್ವ, ನಾಗರಿಕ ಜ್ಞಾನ, ಕಾನೂನು, ಸ್ವಯಂ ಶಿಸ್ತು, ಧೈರ್ಯ, ಪರಾನುಭೂತಿ, ನೈತಿಕತೆ, ಮೌಲ್ಯ, ಸಾಮಾಜಿಕ ದುಷ್ಪರಿಣಾಮಗಳಿಗೆ ಪ್ರತಿರೋಧದಂತಹ ಸಕಾರಾತ್ಮಕ ಚಿಂತನೆಗಳ ದಾರಿ ತೋರುವ ತರಬೇತಿ ನೀಡಲಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರಕಾರಿ ಶಾಲೆಗಳ 8, 9ನೇ ತರಗತಿ ವಿದ್ಯಾರ್ಥಿಗಳನ್ನು ಯೋಜನೆಗೆ ಸೇರಿಸಿಕೊಳ್ಳಲಾಗುತ್ತಿದೆ. ಮಂಗಳೂರು ಕೆಎಸ್‌ಆರ್‌ಪಿ ಸಿಬಂದಿ ಸಹಕಾರದಲ್ಲಿ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಮಂಗಳೂರಿ ನಲ್ಲಿ 10 ಪಿಸಿ, ಎಚ್‌ಸಿಗಳಿಗೆ ತರಬೇತಿ ನೀಡಿ ಪ್ರತಿ ಶಾಲೆಗೆ ಒಬ್ಬರಂತೆ ತರಬೇತಿ ನೀಡಲು ನಿಯೋಜಿಸಲಾಗಿದೆ. ತಿಂಗಳಲ್ಲಿ 3 ವಾರಗಳಂತೆ ಶನಿವಾರ ಅಪರಾಹ್ನ ಒಳಾಂಗಣ, ಹೊರಾಂಗಣ ಮತ್ತು ಕ್ಷೇತ್ರ ಭೇಟಿ ವಿಷಯಗಳನ್ನು ಬೋಧಿಸಲಾಗು ವುದು. ಕೆಎಸ್‌ಆರ್‌ಪಿ ಕಮಾಂಡೆಂಟ್‌ ಜನಾರ್ದನ ಆರ್‌. ಅವರು ದ.ಕ., ಉಡುಪಿ, ಉ.ಕ. ಜಿಲ್ಲೆಗಳ ನೋಡಲ್‌ ಅಧಿಕಾರಿಯಾಗಿದ್ದಾರೆ.

ದ.ಕ. ಜಿಲ್ಲೆಯ ಶಾಲೆಗಳು
ಮಂಗಳೂರು ಬೈಕಂಪಾಡಿಯ ಕೇಂದ್ರೀಯ ವಿದ್ಯಾಲಯ, ಪುತ್ತೂರು ಕೊಂಬೆಟ್ಟಿನ ಸ.ಪ.ಪೂ. ಕಾಲೇಜು, ಬಂಟ್ವಾಳದ ಮಂಚಿ ಕೊಲಾ°ಡು ಸರಕಾರಿ ಪ್ರೌಢ ಶಾಲೆ, ಕುರ್‍ನಾಡು ಸ.ಪ.ಪೂ. ಕಾಲೇಜು, ಮಂಗಳೂರು ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯ ನಂಬರ್‌ 2, ಸುಳ್ಯ ತಾಲೂಕಿನ ಎಲಿಮಲೆ ಸರಕಾರಿ ಪ್ರೌಢಶಾಲೆ, ಬೆಳ್ಳಾರೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್‌, ಸವಣೂರು ಸ.ಪ.ಪೂ. ಕಾಲೇಜು, ಗುತ್ತಿಗಾರು ಸ.ಪ.ಪೂ. ಕಾಲೇಜು ಮತ್ತು ಮೂಡುಬಿದಿರೆಯ ಅಳಿಯೂರು ಸರಕಾರಿ ಪ್ರೌಢ ಶಾಲೆ.

ಉಡುಪಿ ಜಿಲ್ಲೆಯ ಶಾಲೆಗಳು
ಹೆಬ್ರಿ ಚಾರದ ಜವಾಹರ ನವೋದಯ ವಿದ್ಯಾಲಯ, ಉಡುಪಿ ಅಲೆವೂರು ಪ್ರಗತಿ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ, ಗೋಳಿಯಂಗಡಿ ಸರಕಾರಿ ಪ.ಪೂ. ಕಾಲೇಜು, ಆವರ್ಸೆ ಸರಕಾರಿ ಪ್ರೌಢಶಾಲೆ, ಕಾರ್ಕಳ ತಾಲೂಕು ಪೆರ್ವಾಜೆಯ ಸರಕಾರಿ ಪ್ರೌಢ ಶಾಲೆ, ಉಪ್ಪುಂದ ಸ.ಪ.ಪೂ. ಕಾಲೇಜು, ಬಸೂರು ಸರಕಾರಿ ಪ್ರೌಢಶಾಲೆ, ಹಿರಿಯಡಕ ಸರಕಾರಿ  ಪ್ರೌಢಶಾಲೆ, ತಲ್ಲೂರು ಸರಕಾರಿ ಪ್ರೌಢಶಾಲೆ ಮತ್ತು ಕೋಟೇಶ್ವರ ಕರ್ನಾಟಕ ಪಬ್ಲಿಕ್‌ ಸ್ಕೂಲ್‌.

Advertisement

ನಾಳೆ ಚಾಲನೆ
ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಕಲ್ಪನೆಯನ್ನು ಮೊದಲು ಜಾರಿಗೊಳಿಸಿದ ರಾಜ್ಯ ಕೇರಳ, 2010ರಲ್ಲಿ. ಕಳೆದ ವರ್ಷ ರಾಜ್ಯದ 87 ಶಾಲೆಗಳಲ್ಲಿ ಆರಂಭಿಸಲಾಯಿತು. ಈ ವರ್ಷ ಎಲ್ಲ ಜಿಲ್ಲೆಗಳ 10 ಶಾಲೆಗಳಂತೆ ರಾಜ್ಯದ 300 ಶಾಲೆಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಆ. 3ರಂದು ಉಡುಪಿಯ ಮಣಿಪಾಲ ಅಲೆವೂರು ಪ್ರಗತಿನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಬೆಳಗ್ಗೆ 11.30ಕ್ಕೆ ಮತ್ತು ಮಂಗಳೂರು ಎಕ್ಕೂರು ಕೇಂದ್ರೀಯ ವಿದ್ಯಾಲಯದಲ್ಲಿ ಬೆಳಗ್ಗೆ 10ಕ್ಕೆ ಉದ್ಘಾಟಿಸಲಾಗುತ್ತದೆ. ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಕಲಾಂ ಕಲ್ಪನೆ
ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಕಲ್ಪನೆ ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್‌ ಕಲಾಂ ಅವರದು. ಚಿಕ್ಕ ಮಕ್ಕಳಲ್ಲಿ ಸ್ವಯಂ ಶಿಸ್ತು ಮೂಡಿಸುವುದು, ಭವಿಷ್ಯದ ಉತ್ತಮ ನಾಗರಿಕರನ್ನು ಪ್ರೌಢಶಾಲಾ ಹಂತದಲ್ಲಿಯೇ ಬೆಳೆಸುವುದು ಅವರ ಗುರಿ. ಇದಕ್ಕಾಗಿ ಈ ಬಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಹತ್ತು ಸರಕಾರಿ ಶಾಲೆಗಳನ್ನು ಆಯ್ದುಕೊಳ್ಳಲಾಗಿದೆ.
ಮುರಳಿ ಮತ್ತು ಪ್ರಮೋದ್‌ ಕುಮಾರ್‌ ಕೆಎಸ್‌ಆರ್‌ಪಿ ಅಧಿಕಾರಿಗಳು, ಉಡುಪಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next