Advertisement

ರೂಂಮೇಟ್‌ ಎಂಬ ಹಾರ್ಟ್‌ಬೀಟ್‌

07:30 AM Apr 03, 2018 | |

ಪುರಾಣಕಾಲದಲ್ಲಿ ದೇವರುಗಳು ಕಾಲಕ್ಕೆ ತಕ್ಕ ಹಾಗೆ ಅನೇಕ ರೂಪಗಳಲ್ಲಿ ಅವತರಿಸುತ್ತಿದ್ದದ್ದು ನಿಮಗೆಲ್ಲರಿಗೂ ಗೊತ್ತೇ ಇರುತ್ತೆ. ಅದೇ ರೀತಿ ಕಾಲೇಜು ಜೀವನದಲ್ಲಿ ಅನೇಕ ಅವತಾರಗಳನ್ನು ಎತ್ತಿ ಆಪತಾºಂಧವರಾಗುತ್ತಿದ್ದವರು ರೂಂ ಮೇಟ್‌ಗಳು! ಸ್ನೇಹಿತರಾಗಿ, ಮಾರ್ಗದರ್ಶಕರಾಗಿ, ಟೀಚರ್‌ ಆಗಿ, ಅಲಾರಂ ಗಡಿಯಾರವಾಗಿ, ಕೀಟಲೆ-ಕ್ವಾಟಲೆಗಳಲ್ಲಿ ಭಾಗೀದಾರರಾಗಿ ರೂಮ್‌ಮೇಟ್‌ ನಿರ್ವಹಿಸುವ ಪಾತ್ರಗಳು ಅನೇಕ. ಅಂಥ ರೂಂಮೇಟ್‌ಗಳು ಎಲ್ಲರ ವಿದ್ಯಾರ್ಥಿಜೀವನದಲ್ಲೂ ಸಿಗಲೇಬೇಕು ಏಕೆಂದರೆ…

Advertisement

1. ಸೋಮಾರಿತನ ಇರೋಲ್ಲ 
ರೂಮ್‌ನಲ್ಲಿ ಒಬ್ಬ ಚಟುವಟಿಕೆಯ ಹುಡುಗ ಇದ್ದರೆ ಎಂಥ ಸೋಮಾರಿಯೂ ಬದಲಾಗುತ್ತಾನೆ. ಬೆಳಗ್ಗೆ ಬೇಗ ಏಳುವ, ಅವತ್ತಿನ ಕೆಲಸವನ್ನು ಅವತ್ತೇ ಮುಗಿಸುವ, ಸಮಯಕ್ಕೆ ಸರಿಯಾಗಿ ತನ್ನ ಪಾಲಿನ ಎಲ್ಲ ಕೆಲಸಗಳನ್ನು ಮಾಡಿ ಮುಗಿಸುವ ರೂಮ್‌ಮೇಟ್‌ನಿಂದಾಗಿ ರೂಮಿನ ಇತರ ಸದಸ್ಯರು ಕೂಡ ಸಮಯಪಾಲನೆ ಕಲಿತುಕೊಳ್ಳುತ್ತಾರೆ. 

2. ಜಿಮ್‌ ಪಾರ್ಟ್‌ನರ್‌
“ಯಾರೋ ಹೇಳಿದ್ರು ದಿನಾ ಬೆಳಗ್ಗೆ ಬೇಗ ಎದ್ದು ಜಿಮ್‌ಗೆ ಹೋಗ್ತಿàನಿ ಅಂತಾ…’, “ಲೇ, ಹೊಟ್ಟೆ ಅನ್ನೋದು ಊದಿದ ಬಲೂನ್‌ ಥರಾ ಆಗ್ತಿದೆ ಕಣೇ. ನಾಳೆಯಿಂದ ಜಾಗಿಂಗ್‌ ಮಾಡಿ ಫಿಗರ್‌ ಉಳಿಸ್ಕೊಳ್ಳೋಣ..’ ಎಂದೆಲ್ಲಾ ನೀವು ಮರೆತ ನಿಮ್ಮ ವರ್ಕ್‌ ಔಟ್‌ ಪ್ಲಾನ್‌ಗಳನ್ನು ನೆನಪಿಸೋಕೆ ಒಬ್ಬ ರೂಮ್‌ಮೇಟ್‌ ಬೇಕಲ್ವಾ?

3. ಸಮಸ್ಯೆಯೆಲ್ಲಾ ಸಲೀಸು 
ಬ್ರೇಕಪ್ಪೇ ಆಗಲಿ, ಕ್ಲಾಸಲ್ಲಿ ಕಡಿಮೆ ಅಂಕಗಳೇ ಬರಲಿ, ಊರಿಂದ ಬಂದ ಅಪ್ಪ ಚೆನ್ನಾಗಿ ಬೈದು ಹೋದರು ಎಂಬ ಸಂಕಟವೇ ಇರಲಿ, ಆಗೆಲ್ಲಾ ರೂಮ್‌ಮೇಟ್‌ನಿಂದ ಮಾತ್ರ ನಿಮ್ಮ ಬೇಜಾರನ್ನು ದೂರ ಮಾಡಲು ಸಾಧ್ಯ. ಆತನ ಬಳಿ ಎಲ್ಲ ಸಮಸ್ಯೆಗಳಿಗೂ ಉತ್ತರವಿರುತ್ತದೆ. ಕೆಲವೊಮ್ಮೆ ರೂಮ್‌ಮೇಟ್‌, ಜಗತ್ತಿನ ಸಮಸ್ಯೆಗಳನ್ನೆಲ್ಲ ಚಿಟಿಕೆ ಹೊಡೆದು ಸರಿಮಾಡಬಲ್ಲ ಮಾಂತ್ರಿಕನಂತೆ ಆಡುತ್ತಾನೆ/ಳೆ. “ಹೋಗ್ಲಿ ಬಿಡೋ ಏನಾಗಲ್ಲ’ ಅನ್ನೋ ಅವನ/ಳ ಮಾತಿನಲ್ಲಿ ಏನೋ ಭರವಸೆಯಿರುತ್ತದೆ. 

4. ಟ್ಯೂಷನ್‌ಗೆ ಹೋಗ್ಬೇಕಿಲ್ಲ
ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಬುದ್ಧಿವಂತ ರೂಮ್‌ಮೇಟ್‌ ಸಿಗುತ್ತಾನೆ/ಳೆ. ಅರ್ಥವೇ ಆಗಲ್ಲ ಅನ್ನುವ ಸೈನ್ಸು, ನೀವು ಕಷ್ಟ ಕಷ್ಟ ಅನ್ನುವ ಗಣಿತ, ಅವನಿಗೆ ನೀರು ಕುಡಿದಷ್ಟೇ ಸುಲಭ. ವರ್ಷವಿಡೀ ಓದಿದಾಗಲೂ ನಿಮಗೆ ಅರ್ಥವಾಗದಿದ್ದ ಸಂಗತಿಗಳನ್ನು, ಪರೀಕ್ಷೆಯ ಹಿಂದಿನ ರಾತ್ರಿ ನಿಮಗೆ ಸುಲಭವಾಗಿ ಅರ್ಥ ಮಾಡಿಸುತ್ತಾನೆ/ಳೆ. 

Advertisement

5. ಜೀವಂತ ಅಲಾರಾಂ ಕ್ಲಾಕ್‌
ಬೆಳಗ್ಗೆ ಐದಕ್ಕೆ ಸೆಟ್‌ ಮಾಡಿದ್ದ ಅಲಾರಾಂ ಗಡಿಯಾರ ಬೇಕಾದರೆ ಕೈ ಕೊಡಬಹುದು. ಆದರೆ, “ಪ್ಲೀಸ್‌ ನಾಳೆ ಬೆಳಗ್ಗೆ ಐದಕ್ಕೆ ಎಬ್ಬಿಸ್ತೀಯ? ಎಕ್ಸಾಂಗೆ ಏನೂ ಓದಿಲ್ಲ’ ಅಂತ ಹೇಳಿದರೆ, ರೂಮ್‌ಮೇಟ್‌ ಮರೆಯುವುದೇ ಇಲ್ಲ. ನಾಲ್ಕೂ ಮುಕ್ಕಾಲಿಗೇ ನಿಮ್ಮನ್ನು ಎಬ್ಬಿಸಿ ಓದಲು ಕೂರಿಸುತ್ತಾನೆ. 

6. ಗೆಳೆಯರ ಬಳಗ
ನೀವು ಮತ್ತು ನಿಮ್ಮ ರೂಮ್‌ಮೇಟ್‌ ಬೇರೆ ಬೇರೆ ತರಗತಿಯವರಾದರೆ ಬಹಳ ಬೇಗ ನಿಮ್ಮ ಗೆಳೆಯರ ಬಳಗ ದೊಡ್ಡದಾಗುತ್ತದೆ. ಅವರ ಫ್ರೆಂಡ್ಸ್‌ಗಳನ್ನೆಲ್ಲಾ ಆತ ನಿಮಗೆ ಪರಿಚಯಿಸಿ, ನಿಮ್ಮ ಫ್ರೆಂಡ್ಸ್‌ಗಳೆಲ್ಲಾ ಅವನಿಗೆ ಗೆಳೆಯರಾಗಿ ಒಂದು ದೊಡ್ಡ ಫ್ರೆಂಡ್ಸ್‌ ಸರ್ಕಲ್‌ ಹುಟ್ಟಿಕೊಳ್ಳುತ್ತೆ.

7. “ಹೊಸರುಚಿ’ ಬೇಟೆ
ಒಬ್ಬರೇ ಊಟ ಮಾಡುವುದು, ಒಬ್ಬರೇ ಹೋಟೆಲ್‌ಗೆ ಹೋಗುವುದು ಎಷ್ಟಾದರೂ ಬೋರು. ಊಟದ ಬಗ್ಗೆ ಆಸಕ್ತಿ ಇರುವಾತ ರೂಮ್‌ಮೇಟ್‌ ಆಗಿ ಸಿಕ್ಕಿದರೆ ರೂಂನಲ್ಲಿಯೇ “ಹೊಸರುಚಿ’ ಪ್ರಯೋಗ ಮಾಡಬಹುದು. ಜೊತೆಗೆ, ಒಳ್ಳೆಯ ಊಟ ತಿಂಡಿ ಎಲ್ಲಿ ಸಿಗುತ್ತದೆ, ಯಾವ ಹೋಟೆಲ್‌ನಲ್ಲಿ ಏನು ಸ್ಪೆಷಲ್‌ ಅಂತ ಸುಲಭವಾಗಿ ಗೊತ್ತಾಗುತ್ತೆ.

8. ಲವ್‌ ಗುರು
ಯಾವುದೋ ಹುಡುಗಿಯನ್ನೋ/ ಹುಡುಗರನ್ನೋ ಇಂಪ್ರಸ್‌ ಮಾಡೋಕೆ ಪ್ಯಾದೆಯಂತೆ ಹೊರಟ ನಿಮಗೆ ಫ್ಯಾಷನ್‌ನ ಪಾಠ ಹೇಳಬಲ್ಲವನೇ ಒಳ್ಳೆಯ ರೂಮ್‌ಮೇಟ್‌. ನಿಮಗೆ ಯಾವ ಕಲರ್‌ ಚೆನ್ನಾಗಿ ಒಪ್ಪುತ್ತೆ, ಯಾವ ಹೇರ್‌ ಸ್ಟೈಲ್‌ ಚೆನ್ನ? ಹೇಗೆ ವರ್ತಿಸಬೇಕು ಎಂಬಿತ್ಯಾದಿಗಳ ಬಗ್ಗೆ ಅವನಿಂದ ಪ್ರಾಮಾಣಿಕ ಟಿಪ್ಸ್‌ ಸಿಗುತ್ತದೆ. “ನನ್ನ ಈ  ಡ್ರೆಸ್‌ ನಿನಗೇ ಸಖತ್ತಾಗಿ ಕಾಣುತ್ತೆ ಕಣೇ. ಅದನ್ನೇ ಹಾಕ್ಕೊಂಡ್‌ ಹೋಗು, ನಿನ್ನ ಹುಡುಗನಿಗೆ/ಹುಡುಗಿಗೆ ಇಷ್ಟ ಆಗುತ್ತೆ’ ಅನ್ನುವ ಧಾರಾಳಿ ರೂಮ್‌ಮೇಟ್‌ ಸಿಕ್ಕರಂತೂ ನಿಮ್ಮದೇ ಅದೃಷ್ಟ ಬಿಡಿ!

9. ಬೆಸ್ಟ್‌ ಫ್ರೆಂಡ್‌
ದಿನದ ಹೆಚ್ಚಿನ ಸಮಯವನ್ನು ನಿಮ್ಮ ಜೊತೆ ಕಳೆಯುವ ರೂಮ್‌ಮೇಟ್‌ಗೆ ನಿಮ್ಮ ಇಷ್ಟ ಕಷ್ಟಗಳ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಅತ್ತಾಗ ಸಮಾಧಾನ ಮಾಡುವ, ನಗುವಾಗ ಜೊತೆ ಸೇರಿಕೊಳ್ಳುವ, ನಿಮ್ಮ ಹುಟ್ಟಿದಹಬ್ಬಕ್ಕೆ ದೊಡ್ಡ ಸರ್‌ಪ್ರೈಸ್‌ ಕೊಡುವ ರೂಮ್‌ಮೇಟ್‌ಗಿಂತ ಬೆಸ್ಟ್‌ ಫ್ರೆಂಡ್ಸ್‌ ಬೇರೆ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next