Advertisement

ಭಾರತಕ್ಕೆ ತನ್ನನ್ನೇ ನಿವೇದಿಸಿಕೊಂಡ ಸೋದರಿ

07:47 PM Nov 11, 2019 | Sriram |

ಸ್ವಾಮಿ ವಿವೇಕಾನಂದರು ದೀರ್ಘ‌ ವಿದೇಶ ಪ್ರವಾಸದ ನಂತರ ಭಾರತಕ್ಕೆ ಮರಳುತ್ತಾರೆ. ಹಡಗಿಳಿದು ಭಾರತವನ್ನು ಮುಟ್ಟಿದ ಕೂಡಲೇ, ನೆಲಕ್ಕೆ ನಮಸ್ಕರಿಸಿ, ಮಣ್ಣನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. 4 ವರ್ಷಗಳ ಕಾಲ ಭೋಗಭೂಮಿ ವಿದೇಶದಲ್ಲಿ ಓಡಾಡಿದ ನಂತರ, ಭಾರತ ಬರೀ ಪವಿತ್ರ ಮಾತ್ರವಲ್ಲ, ಇಲ್ಲಿನ ಕಣಕಣವೂ ಪವಿತ್ರವೆಂದು ನನಗೆ ಅರ್ಥವಾಗಿದೆ ಎಂದು ವಿವೇಕಾನಂದರು ಹೇಳುತ್ತಾರೆ. ಆ ವೇಳೆ ಅವರನ್ನು ಯುವಕರು ತಮ್ಮ ಹೆಗಲಮೇಲೆ ಹೊತ್ತುಕೊಂಡು ಹೋಗುತ್ತಾರೆ. ಅವರು ಕೂತಿದ್ದ ರಥಕ್ಕೆ ಕಟ್ಟಿದ್ದ ಕುದುರೆಯನ್ನು ಬಿಚ್ಚಿ, ತಾವೇ ಎಳೆಯುತ್ತಾರೆ.

Advertisement

ಇಡೀ ದೇಶದಲ್ಲಿ ವಿವೇಕಾನಂದರು ಅಂತಹ ಸಂಚಲನ ಸೃಷ್ಟಿಸುತ್ತಾರೆ. ಆಗ ಬ್ರಿಟಿಷರ ದಾಸ್ಯದಲ್ಲಿದ್ದ ಭಾರತಕ್ಕೆ, ಕೆಲವು ಶತಮಾನಗಳ ಕಾಲ ಬರೀ ನಿರಾಶೆಯೇ ನಿತ್ಯಾನುಭವವಾಗಿತ್ತು. ಭಾರತೀಯರ ಆತ್ಮಗೌರವವನ್ನು ಬಡಿದೆಬ್ಬಿಸಬಲ್ಲ ಸಂಗತಿಗಳ ಸದ್ದೇ ಇಲ್ಲವಾಗಿತ್ತು. ಅಂತಹ ಹೊತ್ತಿನಲ್ಲಿ ವಿವೇಕಾನಂದರು ವಿದೇಶಕ್ಕೆ ತೆರಳಿದರು. ಯಾವ ದೇಶ ತನ್ನನ್ನು ಆಳುತ್ತಿತ್ತೋ, ಆ ದೇಶದ ಜನರ ಗೌರವಕ್ಕೆ ಪಾತ್ರರಾದರು. ಅದೇ ದೇಶದ ಜನರು ಭಾರತದ ಸೇವೆಗೆಂದು ಧಾವಿಸಿ ಬಂದರು. ಈ ಕ್ರಿಯೆಯಲ್ಲಿ ಬ್ರಿಟಿಷ್‌ ಆಡಳಿತಗಾರರು ತಮ್ಮದೇ ಜನರ ವಿರುದ್ಧ ಸಿಟ್ಟಾಗುವ ಪರಿಸ್ಥಿತಿ ಬಂತು. ಯಾರು ತಮ್ಮನ್ನು ಆಳುತ್ತಿದ್ದರೋ, ಅವರಿಂದಲೇ ಸೇವೆ ಮಾಡಿಸಿಕೊಳ್ಳುವ ವಾತಾವರಣವನ್ನು ನಿರ್ಮಾಣ ಮಾಡಿದ್ದು ಸ್ವಾಮಿ ವಿವೇಕಾನಂದರ ಆತ್ಮಶಕ್ತಿ. ಅಗಾಧ ಪ್ರಮಾಣದಲ್ಲಿ ಕಷ್ಟಗಳನ್ನು ಎದುರಿಸಿ, ವಿವೇಕಾನಂದರು ವಿದೇಶದಲ್ಲಿ ಮೂಡಿಸಿದ ಛಾಪು, ಭಾರತೀಯರೆದೆಯಲ್ಲಿ ಬೆಂಕಿ ಹಚ್ಚಿತು. ಅಲ್ಲಿಯವರೆಗೆ ತಣ್ಣಗಿದ್ದ ಈ ನೆಲದ ಮಕ್ಕಳು ಸಿಡಿದೆದ್ದರು. ಅಲ್ಲಿಂದಲೇ ಭಾರತೀಯರ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಪರಿವರ್ತನೆ, ತೀವ್ರತೆ ಕಂಡುಬಂದಿತ್ತು. ಸ್ವಾತಂತ್ರ್ಯ ಹೋರಾಟದ ಬಗ್ಗೆ ಎಲ್ಲೂ ಒಂದೂ ಮಾತನಾಡದ ವಿವೇಕಾನಂದರು, ಸ್ವಾತಂತ್ರ್ಯ ಹೋರಾಟಕ್ಕೆ ತಿರುವುಕೊಟ್ಟ ರೀತಿ ಅತ್ಯಂತ ರೋಚಕ.

ವಿವೇಕಾನಂದರು ಇಂಗ್ಲೆಂಡ್‌ಗೆ ಭೇಟಿಯಿತ್ತಾಗ ಹಲವಾರು ವ್ಯಕ್ತಿಗಳು ಅವರ ಅನುಯಾಯಿಗಳಾದರು. ಅಲ್ಲಿಂದ ಭಾರತಕ್ಕೆ ಬಂದ ಅನಘÂìರತ್ನ ಸೋದರಿ ನಿವೇದಿತಾ ಅಥವಾ ಮಾರ್ಗೆರೆಟ್‌ ನೊಬೆಲ್‌. ಐರ್ಲೆಂಡ್‌ಗೆ ಸೇರಿದ ಈಕೆ ಭಾರತಕ್ಕೆ ತಾನು ಬರುತ್ತೇನೆಂದು ವಿವೇಕಾನಂದರಿಗೆ ಹೇಳುತ್ತಾರೆ. ಆದರೆ ವಿವೇಕಾನಂದರು ಅದಕ್ಕೆ ಒಪ್ಪುವುದಿಲ್ಲ. ಅವರ ತಲೆಯಲ್ಲಿ ನೂರೆಂಟು ವಿಚಾರಗಳು ಓಡುತ್ತಿರುತ್ತವೆ. ಮೊದಲನೆಯದಾಗಿ ಭಾರತೀಯರು ಈ ವಿದೇಶೀಯರನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಪ್ರಶ್ನೆ. ಎರಡನೆಯದಾಗಿ, ಭಾರತವನ್ನು ಈಕೆ ಹೇಗೆ ಪರಿಗಣಿಸುತ್ತಾಳೆ ಎನ್ನುವ ಪ್ರಶ್ನೆ. ಭಾರತದ ಬಗ್ಗೆ ವಿದೇಶದಲ್ಲಿ ವಿವೇಕಾನಂದರು ನೀಡಿದ್ದ ಚಿತ್ರಣ ಅದ್ಭುತವಾಗಿತ್ತು. ಅಂತಹ ಮಾತುಗಳನ್ನು ಕೇಳಿಸಿಕೊಂಡು ಪ್ರಭಾವಿತರಾಗಿ; ಭಾರತಕ್ಕೆ ಬರುವ ವಿದೇಶೀಯರು, ಇಲ್ಲಿನ ಕಷ್ಟ-ಬಡತನ-ದೈನ್ಯದ ಸ್ಥಿತಿಯನ್ನು ನೋಡಿ ಅಸಹ್ಯಪಟ್ಟುಕೊಂಡರೆ?

ನಿವೇದಿತಾ ಸತತವಾಗಿ ಪ್ರಾರ್ಥಿಸಿದ ನಂತರ ವಿವೇಕಾನಂದರು ಭಾರತಕ್ಕೆ ಬರಲು ಒಪ್ಪಿದರು, ಅದೂ ಷರತ್ತಿನ ಮೇಲೆ. ಆಕೆ ಭಾರತಕ್ಕೆ ಕಲಿಸಲು ಬರುವ ಅಗತ್ಯವಿಲ್ಲ, ಕಲಿಯಲು ಬರಬೇಕು. ಇಲ್ಲಿನ ಜನರನ್ನು ಅಗೌರವದಿಂದ ಕಾಣದೇ ಅವರ ಸೇವೆ ಮಾಡಲು ಬರುವುದಾದರೆ ಬಾ ಎಂದರು. ಮುಂದೆ ಈ ಗುರು-ಶಿಷ್ಯರು ಮಾಡಿದ ಕೆಲಸ ಒಂದೆರಡಲ್ಲ. ಸೋದರಿ ನಿವೇದಿತಾ ಎಂದೇ ಖ್ಯಾತರಾದ ಆಕೆ ವಿವೇಕಾನಂದರ ಮಹಾಸಮಾಧಿಯ ವೇಳೆ ಅದ್ಭುತ ಅನುಭವವೊಂದನ್ನು ಪಡೆಯುತ್ತಾರೆ. ಮಹಾಸಂತನ ಚಿತೆ ಧಗಧಗ ಹತ್ತಿ ಉರಿಯುತ್ತಿರುತ್ತದೆ. ದೂರದಲ್ಲಿ ಆಕೆ ನಿಂತುಕೊಂಡು, ಸ್ವಾಮೀಜಿ ತನಗೆ ಕಡೆಯದಾಗಿ ಏನನ್ನು ಕೊಡಲಿಲ್ಲವಲ್ಲ ಎಂದು ಒಳಗೊಳಗೆ ಕೊರಗುತ್ತಿರುತ್ತಾರೆ. ಆಗ ವಿವೇಕಾನಂದರ ಚಿತೆಯಿಂದ ಕಾವಿ ವಸ್ತ್ರದ ತುಂಡೊಂದು ತಟ್ಟನೆ ಹಾರಿಕೊಂಡು ಬಂದು ನಿವೇದಿತಾ ಮೈಮೇಲೆ ಬೀಳುತ್ತದೆ! ಕಾವಿ ಅಂದರೆ ಸನ್ಯಾಸ, ಹಾಗೆಂದರೆ ತ್ಯಾಗ, ಹಾಗೆಂದರೆ ಸೇವೆ. ತಮ್ಮ ಮಹಾಸಮಾಧಿಯ ವೇಳೆ ಆ ಮಹಾತ್ಮ ನಿವೇದಿತಾಗೆ ಸೇವೆಯ, ಸನ್ಯಾಸದ, ತ್ಯಾಗದ ದೀಕ್ಷೆ ಕೊಟ್ಟು ನಿರ್ಗಮಿಸುತ್ತಾರೆ. ಪ್ರೇಮದ ಮತ್ತೂಂದು ಅಸದೃಶ ನಿದರ್ಶನವಿದು.

-ನಿರೂಪ

Advertisement
Advertisement

Udayavani is now on Telegram. Click here to join our channel and stay updated with the latest news.

Next