ಕುಂಬಳೆ: ಪೊಲೀಸರು ಹಿಂಬಾಲಿಸಿದುದರಿಂದ ತೀವ್ರ ವೇಗದಲ್ಲಿ ಸಂಚರಿಸಿದ ಕಾರು ಮಗುಚಿ ಬಿದ್ದು ವಿದ್ಯಾರ್ಥಿ ಸಾವಿಗೀಡಾದ ಘಟನೆಗೆ ಸಂಬಂಧಿಸಿ ಕುಂಬಳೆ ಠಾಣೆಯ ಎಸ್‌ಐ ರಜಿತ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ದೀಪು, ರಂಜಿತ್ ಅವರನ್ನು ಕಾಂಞಂಗಾಡ್ ಹೈವೇ ಪೊಲೀಸ್ ವಿಭಾಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ವೈಭವ್ ಸಕ್ಸೇನಾ ವರ್ಗಾಯಿಸಿದ್ದಾರೆ.
ವಿದ್ಯಾರ್ಥಿಯ ಸಾವಿಗೆ ಕಾರಣವಾದ ಅಪಘಾತದ ಕುರಿತು ಡಿಸಿಬಿ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಇದೇ ವೇಳೆ ವಿದ್ಯಾರ್ಥಿ ಮೃತಪಟ್ಟ ಘಟನೆಯಲ್ಲಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕೊಲೆ ಕೃತ್ಯ ಕೇಸು ದಾಖಲಿಸಬೇಕೆಂದು ವಿದ್ಯಾರ್ಥಿಯ ಕುಟುಂಬದವರು ಒತ್ತಾಯಿಸಿದ್ದಾರೆ.
ಆ. 25ರಂದು ಕಳತ್ತೂರು ಪಳ್ಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಮುಹಮ್ಮದ್ ಫರ್ಹಾಸ್ (17) ಆ. 29ರಂದು ಸಾವಿಗೀಡಾಗಿದ್ದರು.
ತೀವ್ರ ವೇಗದಲ್ಲಿ ಕಾರನ್ನು ಚಲಾಯಿಸಿದ್ದರಿಂದ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಹಿಂಬಾಲಿಸಿದುದರಿಂದ ನಿಯಂತ್ರಣ ತಪ್ಪಿ ಕಾರು ಮಗುಚಲು ಕಾರಣವಾಗಿದೆಯೆಂದು ಕುಟುಂಬ ಸದಸ್ಯರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.
ಠಾಣೆ ಮುಂದೆ ಲೀಗ್ ಧರಣಿ : ಮುಹಮ್ಮದ್ ಫರ್ಹಾಸ್ ಸಾವಿಗೆ ಕಾರಣಕರ್ತರಾದ ಪೊಲೀಸರ ವಿರುದ್ಧ ಕೊಲೆ ಕೃತ್ಯಕ್ಕೆ ಕೇಸು ದಾಖಲಿಸಬೇಕೆಂದು ಒತ್ತಾಯಿಸಿ ಕುಂಬಳೆ ಠಾಣೆ ಮುಂದೆ ಮುಸ್ಲಿಂ ಲೀಗ್ ನೇತೃತ್ವದಲ್ಲಿ ಧರಣಿ ನಡೆಯಿತು. ಧರಣಿ ನಡೆಸಿದ ಮುಸ್ಲಿಂ ಲೀಗ್ ನೇತಾರರ ಸಹಿತ 45 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಮುಸ್ಲಿಂ ಲೀಗ್, ಯೂತ್‌ಲೀಗ್ ನೇತಾರರಾದ ಅಬ್ದುಲ್ ಮಜೀದ್, ಯೂಸಫ್ ಉಳುವಾರು, ಅಸೀಸ್ ಕಳತ್ತೂರು, ಸಿದ್ದಿಕ್, ನೌಫಲ್, ಇಲ್ಯಾಸ್, ಅಬ್ಟಾಸ್, ಜಸೀರ್, ಮುಸ್ತಫ, ಇಕ್ಬಾಲ್, ಹನೀಫ, ಸವಾದ್ ಸಹಿತ ಕಂಡರೆ ಪತ್ತೆಹಚ್ಚಬಹುದಾದ 45 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.