ಬೆಂಗಳೂರು: ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳ ಪ್ರೇರಣೆಯಿಂದ ಜ್ಯೋತಿಷಿಯೊಬ್ಬರ ಪುತ್ರನನ್ನು ಅಪಹರಿಸಿದ ಯುವಕನನ್ನು ಕೇವಲ ಮೂರು ಗಂಟೆಯಲ್ಲೇ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ಅರ್ಜುನ್(19) ಬಂಧಿತ. ಆರೋಪಿ ಶನಿವಾರ ಜ್ಯೋತಿಷಿ ಮಣಿವಾಸನ್ ಎಂಬುವರ ಪುತ್ರ ಜಯಸೂರ್ಯ ಎಂಬಾತನನ್ನು ಅಪಹರಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಪೊಲೀಸರು ಹೇಳಿದರು.
ಸಿನಿಮಾ, ವೆಬ್ ಸಿರೀಸ್‌ಗಳ ಪ್ರೇರಣೆ: ತುಮಕೂರು ಗ್ರಾಮಾಂತರ ಮೂಲದ ಅರ್ಜುನ್, ಪಿಯುಸಿ ವ್ಯಾಸಂಗ ಮಾಡಿದ್ದು, ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ಇಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡು, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದ. ಈ ಮಧ್ಯೆ ಬೆಂಗಳೂರಿನಲ್ಲಿಯೇ ಏನಾದರು ಸಾಧಿಸಬೇಕು. ಬೇಗನೇ ಶ್ರೀಮಂತನಾಗಬೇಕು ಎಂದು ನಿರ್ಧರಿಸಿದ್ದ, ಆರೋಪಿ, ಕೆಲವೊಂದು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳನ್ನು ವೀಕ್ಷಿಸಿ, ಪ್ರೇರಣೆಗೊಂಡಿದ್ದಾನೆ. ಬಳಿಕ ಯಾರನ್ನಾದರೂ ಅಪಹರಣಕ್ಕೆ ಸಂಚು ರೂಪಿಸಿದ್ದ. ಅದೇ ವೇಳೆ ಜ್ಯೋತಿಷಿ ಪುತ್ರ ಜಯಸೂರ್ಯ ನೀಟ್ ಪರೀಕ್ಷೆಗಾಗಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಕೋಚಿಂಗ್ ಸೆಂಟರ್‌ಗೆ ಬುಲೆರೊ ವಾಹನದಲ್ಲಿ ಹೋಗುವ ಮಾಹಿತಿ ಪಡೆದುಕೊಂಡು, ಸುಮಾರು ಒಂದೂವರೆ ತಿಂಗಳ ಕಾಲ ಜಯಸೂರ್ಯನ ಚಟುವಟಿಕೆಗಳ ಬಗ್ಗೆ ನಿಗಾವಹಿಸಿದ್ದಾನೆ.
ಜಯಸೂರ್ಯ ಶನಿವಾರ ಕೋಚಿಂಗ್ ಸೆಂಟರ್‌ಗೆ ಹೋಗಿ, ವಾಪಸ್ ಮನೆಗೆ ಹೋಗುತ್ತಿದ್ದ. ಈ ವೇಳೆ ತುರ್ತು ಕಾರ್ಯವಿದೆ ದಯವಿಟ್ಟು ಡ್ರಾಪ್ ಮಾಡುವಂತೆ ಆರೋಪಿ ಕೋರಿದ್ದಾನೆ. ಅದಕ್ಕೆ ಸ್ಪಂದಿಸಿದ ಜಯಸೂರ್ಯ, ಆರೋಪಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು, ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ನಿಲ್ಲಿಸಿದ್ದಾನೆ. ಆ ನಂತರ ಅರ್ಜುನ್, ತಿಲಕನಗರ ಕಡೆ ಹೋಗಬೇಕಿದೆ, ಡ್ರಾಪ್ ಮಾಡುವಂತೆ ಕೋರಿದ್ದಾನೆ. ಆಗ ಜಯಸೂರ್ಯ ಸಾಧ್ಯವಿಲ್ಲ ಎಂದಾಗ, ಗನ್ ತೋರಿಸಿ ಬೆದರಿಸಿದ್ದಾನೆ. ಅಲ್ಲದೆ, ‘ನಿನ್ನನ್ನು ಅಪಹರಣ ಮಾಡಿದ್ದೇನೆ. ಕೂಡಲೇ ನಿಮ್ಮ ತಂದೆ-ತಾಯಿಗೆ ಕರೆ ಮಾಡಿ 5 ಲಕ್ಷ ರೂ. ತಂದು ಕೊಡುವಂತೆ ಹೇಳು’ ಎಂದು ವಿಡಿಯೋ ಕರೆ ಮಾಡಿಸಿದ್ದಾನೆ. ಅದರಿಂದ ಗಾಬರಿಗೊಂಡ ಜ್ಯೋತಿಷಿ ಮಣಿವಾಸನ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮತ್ತೂಂದೆಡೆ ಅವರ ಪತ್ನಿ, ಹಣದ ಬದಲಿಗೆ ಚಿನ್ನಾಭರಣ ತಂದು ಕೊಡುತ್ತೇವೆ ಎಂದು ಮನೆಯಿಂದ ಹೊರಟ್ಟಿದ್ದಾರೆ.
ಈ ಮಧ್ಯೆ ದೂರಿನ ಮೇರೆಗೆ ಕ್ಷೀಪ್ರ ಕಾರ್ಯಾಚರಣೆ ಆರಂಭಿಸಿದ ಎಚ್‌ಎಸ್‌ಆರ್ ಲೇಔಟ್ ಪೊಲೀಸರು, ವಿಡಿಯೋ ಕಾಲ್ ಆಧರಿಸಿ ಘಟನೆ ನಡೆದ ಮೂರು ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿ, ಜಯಸೂರ್ಯನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.