ಸಿಡ್ನಿ: ಆಸ್ಟ್ರೇಲಿಯದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ವಿರೋಧಿಸಿದ ನಂತರ ಖಲಿಸ್ತಾನ್ ಬೆಂಬಲಿಗರು 23 ವರ್ಷದ ಭಾರತೀಯ ವಿದ್ಯಾರ್ಥಿಯ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಸಿಡ್ನಿಯ ಪಶ್ಚಿಮ ಉಪನಗರವಾದ ಮೆರ್ರಿಲ್ಯಾಂಡ್ಸ್‌ನಲ್ಲಿ ಈ ದಾಳಿ ನಡೆದಿದ್ದು, ದುಷ್ಕರ್ಮಿಗಳು “ಖಲಿಸ್ತಾನ್ ಜಿಂದಾಬಾದ್” ಎಂದು ಘೋಷಣೆ ಕೂಗುತ್ತಾ ವಿದ್ಯಾರ್ಥಿಯನ್ನು ಗುರಿಯಾಗಿಟ್ಟುಕೊಂಡು ಕೆಲಸಕ್ಕೆ ಹೋಗುತ್ತಿದ್ದರು ಎಂದು ದಿ ಆಸ್ಟ್ರೇಲಿಯಾ ಟುಡೇ ಶುಕ್ರವಾರ ವರದಿ ಮಾಡಿದೆ.
ಚಾಲಕನಾಗಿ ಕೆಲಸ ಮಾಡುವ ಮತ್ತು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಯು ಘಟನೆಯನ್ನು ವಿವರಿಸುತ್ತಾ, “ಬೆಳಗ್ಗೆ 5.30 ಕ್ಕೆ, ನಾನು ಕೆಲಸಕ್ಕೆ ಹೋಗುತ್ತಿದ್ದಾಗ, ಕೆಲವು 4-5 ಖಲಿಸ್ತಾನ್ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿದರು” ಎಂದು ಹೇಳಿದ್ದಾರೆ.
ವಾಹನವನ್ನು ಹತ್ತುತ್ತಿದ್ದಂತೆ ದಾಳಿಕೋರರು ಇದ್ದಕ್ಕಿದ್ದಂತೆ ಎಲ್ಲಿಂದಲೋ ಕಾಣಿಸಿಕೊಂಡರು.ಎಡಭಾಗದ ಬಾಗಿಲನ್ನು ತೆರೆದರು ಮತ್ತು ಎಡಗಣ್ಣಿನ ಕೆಳಗೆ ಕೆನ್ನೆಯ ಮೂಳೆಯ ಮೇಲೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ.ನಂತರ ಬಲವಂತವಾಗಿ ವಾಹನದಿಂದ ಹೊರಗೆಳೆದು ಕಬ್ಬಿಣದ ರಾಡ್‌ಗಳಿಂದ ಥಳಿಸಿದ್ದಾರೆ. ದಾಳಿಕೋರರಲ್ಲಿ ಇಬ್ಬರು ಕೂಡ ಹಲ್ಲೆಯನ್ನು ವಿಡಿಯೋ ಮಾಡಿದ್ದಾರೆ.
5 ನಿಮಿಷದಲ್ಲಿ ಎಲ್ಲವೂ ನಡೆದಿದ್ದು, ಖಲಿಸ್ತಾನ್ ವಿಚಾರವನ್ನು ವಿರೋಧಿಸಿದ್ದಕ್ಕೆ ನಿನಗೆ ಇದು ಪಾಠವಾಗಬೇಕು, ಇಲ್ಲದೇ ಹೋದರೆ ಈ ರೀತಿಯ ಇನ್ನಷ್ಟು ಪಾಠಗಳನ್ನು ಕಲಿಸಲು ಸಿದ್ಧ ಎಂದು ಹೇಳಿ ಹೊರಟು ಹೋದರು ಎಂದು ಸಂತ್ರಸ್ತ ಹೇಳಿದ್ದಾನೆ.
ಘಟನೆಯನ್ನು ನ್ಯೂ ಸೌತ್ ವೇಲ್ಸ್ (NSW) ಪೊಲೀಸರಿಗೆ ವರದಿ ಮಾಡಲಾಗಿದ್ದು, ಅವರು ಗಾಯಗೊಂಡ ಭಾರತೀಯ ವಿದ್ಯಾರ್ಥಿಯನ್ನು ವೆಸ್ಟ್‌ಮೀಡ್ ಆಸ್ಪತ್ರೆಗೆ ಸಾಗಿಸಿದ್ದಾರೆ. ವಿದ್ಯಾರ್ಥಿಯ ತಲೆ, ಕಾಲು ಮತ್ತು ಕೈಗೆ ಗಂಭೀರ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.