ಕೋಲಾರ ನಗರದ ಜನತೆಗೆ ಯಾವುದೇ ಸೀಸನ್‌ನಲ್ಲಿ ಸಂಜೆಯ ವೇಳೆ ಬಿಸಿಬಿಸಿ ವಡೆ , ಬೋಂಡಾ ಸಿಗುವುದು ಇಲ್ಲಿ. ನಲವತ್ತೈದು ವರ್ಷಗಳ ಹಿಂದೆ ವಿದ್ಯಾರ್ಥಿ ಭವನ್ ಆಗಿದ್ದ ಪುಟ್ಟ ಹೋಟೆಲ್ ಈಗ ಪಂಚವಟಿಯಾಗಿ ಬದಲಾಗಿದೆ.
Advertisement
ಆದರೂ, ರುಚಿ-ಶುಚಿ ಗ್ರಾಹಕರ ವಿಶ್ವಾಸಾರ್ಹತೆಯಲ್ಲಿ ಇಂದಿಗೂ ಅದೇ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ. 55 ವರ್ಷಗಳ ಹಿಂದೆ ಕೇರಳದ ತ್ರಿಶ್ಯೂರ್‌ನಿಂದ ಕೋಲಾರಕ್ಕೆ ಬಂದವರು ಪರಮೇಶ್ವರಯ್ಯರ್. ಅರ್ಚಕ ನಂಬೂದರಿ ಕುಟುಂಬದರಾಗಿದ್ದರೂ ಅವರು ರೈಲ್ವೆಯಲ್ಲಿ ಅಡುಗೆ ಮಾಡುತ್ತಿದ್ದರು. ಕೋಲಾರಕ್ಕೆ ಬಂದಾಗ ಇದೇ ಕಾಲೇಜು ವೃತ್ತದ ಪುಟ್ಟ ಕಟ್ಟಡದಲ್ಲಿ ವಿದ್ಯಾರ್ಥಿ ಭವನ್ ಹೋಟೆಲ್ ಆರಂಭಿಸಿದರು.
Related Articles
Advertisement
ಹತ್ತು ಪೈಸೆಗೆ ಒಂದು ಇಡ್ಲಿ ಮಾರಾಟದ ಕೇಂದ್ರವಾಗಿ ಹೋಟೆಲ್ ಆರಂಭವಾಯಿತು. ಇಡ್ಲಿಯ ಜೊತೆಗೆ ಮಸಾಲೆ ವಡೆ ಮತ್ತು ಚಿತ್ರಾನ್ನ ಸೇರಿಕೊಂಡಿತು. ಬೆಳಗ್ಗಿನಿಂದ ವಿದ್ಯಾರ್ಥಿ ಭವನ್ ಹೋಟೆಲ್, ಸಂಜೆ ಯಥಾ ಪ್ರಕಾರ ವಡೆ ಬೋಂಡಾ ವ್ಯಾಪಾರ. ಪರಮೇಶ್ವರಯ್ಯರ್ ಏಳೆಂಟು ವರ್ಷಗಳ ಹಿಂದೆ ನಿಧನರಾದರು. ಆನಂತರ ಹೋಟೆಲ್ ಮತ್ತು ವಡೆ ಬೋಂಡಾ ಅಂಗಡಿಯ ಸಂಪೂರ್ಣ ಜವಾಬ್ದಾರಿಯನ್ನು ಹಿರಿಯ ಪುತ್ರ ಉನ್ನಿಕೃಷ್ಣನ್ ಹೊತ್ತುಕೊಂಡಿದ್ದಾರೆ.
ನಲವತ್ತೈದು ವರ್ಷಗಳಿಂದಲೂ ಸತತವಾಗಿ ಉನ್ನಿಕೃಷ್ಣನ್ ವಡೆ, ಬೋಂಡಾ ಹಾಕುತ್ತಿದ್ದಾರೆ. ಉನ್ನಿಕೃಷ್ಣನ್‌ಗೆ ಸಹೋದರರಾದ ಗೋಪಾಲಕೃಷ್ಣ ಹಾಗೂ ರಾಧಾಕೃಷ್ಣ ಮತ್ತವರ ಕುಟುಂಬದ ಸದಸ್ಯರು ಸಾಥ್ ನೀಡುತ್ತಿದ್ದಾರೆ. ವಿದ್ಯಾರ್ಥಿ ಭವನ್‌ನ ಇಡ್ಲಿ, ಸಾಂಬಾರ್ ತುಂಬಾ ಜನಪ್ರಿಯ. ಕೊಂಚ ಖಾರ ಹತ್ತಿಸುವಂಥ ಸಾಂಬಾರ್‌ನಲ್ಲಿ ಎರಡು ಇಡ್ಲಿಯನ್ನು ಸಂಪೂರ್ಣ ಮುಳುಗಿಸಿ,
ಸಾಂಬಾರ್‌ನಲ್ಲಿ ಇಡ್ಲಿಯನ್ನು ಕಲೆಸುತ್ತಾ ಜೊತೆಗೆ ಉದ್ದಿನ ವಡೆಯನ್ನು ನೆಂಚಿಕೊಂಡು ತಿನ್ನುವುದರ ಮಜವೇ ಬೇರೆ. ಬೆಳಗ್ಗೆ ಆರು ಗಂಟೆಯಿಂದಲೇ ಆರಂಭವಾಗುವ ಇಡ್ಲಿ ಸಾಂಬಾರ್ ಸೇವೆಯನ್ನು ಚಪ್ಪರಿಸಿಕೊಂಡು ಎರಡೆರಡು ಸಲ ಸಾಂಬಾರ್ ಹಾಕಿಸಿಕೊಂಡು ತಿನ್ನುವ ದೊಡ್ಡ ಗ್ರಾಹಕ ವರ್ಗವೇ ಇದೆ. ಕೋಲಾರವನ್ನು ಹೋರಾಟಗಳ ಜಿಲ್ಲೆ ಎಂದೇ ಕರೆಯುತ್ತಾರೆ. ಈ ಹೋರಾಟಗಳ ಪೈಕಿ ಬಹುತೇಕ ಹೋರಾಟಗಳು ವಿದ್ಯಾರ್ಥಿ ಭವನ್‌ದ ಟೇಬಲ್‌ಗಳ ಸುತ್ತ ನಡೆದ ಪೂರ್ವಭಾವಿ ಚರ್ಚೆಗಳ ಮೂಲಕವೇ ಆರಂಭವಾಗಿದೆ.
ಮಾಹಿತಿಗೆ: 9008172735
* ಕೆ.ಎಸ್.ಗಣೇಶ್