Advertisement

ವಿದ್ಯಾರ್ಥಿನಿಯರ ವೀಡಿಯೋ ಪ್ರಕರಣ: CID ತನಿಖೆ ಚುರುಕು: SPಭೇಟಿ

12:19 AM Aug 10, 2023 | Team Udayavani |

ಉಡುಪಿ: ಉಡುಪಿಯ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯರ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕು ಗೊಳಿಸಿದ್ದಾರೆ. ಬುಧವಾರ ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ ಸಹಿತ ಡಿವೈಎಸ್‌ಪಿ ಹಾಗೂ ತನಿಖಾಧಿಕಾರಿ ಅಂಜುಮಾಲಾ ನಾಯಕ್‌ ಮತ್ತು ಸಿಬಂದಿ ಘಟನೆ ನಡೆದ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಸಂತ್ರಸ್ತ ವಿದ್ಯಾರ್ಥಿಗಳೂ ಜತೆಗಿದ್ದು, ಹೇಳಿಕೆ ನೀಡಿದ್ದಾರೆ.

Advertisement

ದಾಖಲೆ ಸಂಗ್ರಹ
ಘಟನ ಸ್ಥಳಕ್ಕೆ ಬೆಂಗಳೂರಿನಿಂದ ನ್ಯಾಯ ವಿಜ್ಞಾನ ಪ್ರಯೋಗಾಲಯ ಸಂಚಾರಿ ವಿಜ್ಞಾನ ಪ್ರಯೋಗಾಲಯ (ಮೊಬೈಲ್‌ ಫಾರೆನ್ಸಿಕ್‌ ಸೈನ್ಸ್‌ ಲ್ಯಾಬೊರೇಟರಿ) ವಾಹನ ಆಗಮಿಸಿದೆ. ಘಟನೆ ನಡೆದ ಸ್ಥಳದ ಬೆರಳಚ್ಚು ಸಂಗ್ರಹವನ್ನು ಪಡೆದುಕೊಳ್ಳಲಾಗಿದೆ. ತಜ್ಞರ ಮೂಲಕ ಇಲ್ಲಿಯೇ ಪರಿಶೀಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಐಡಿ ಅಧಿಕಾರಿಗಳ ಜತೆಗೆ ಮಹಿಳಾ ಪೊಲೀಸರು ಉಪಸ್ಥಿತರಿದ್ದರು. ಈ ವೇಳೆ ಕಾಲೇಜಿನ ಸಿಬಂದಿಗಳನ್ನೂ ವಿಚಾರಣೆಗೊಳಪಡಿಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು.

ವಿದ್ಯಾರ್ಥಿಗಳಿಗೆ ರಕ್ಷಣೆ
ಸಂತ್ರಸ್ತ ವಿದ್ಯಾರ್ಥಿಗಳೂ ಘಟನ ಸ್ಥಳದಲ್ಲಿದ್ದ ಕಾರಣ ಅವರ ಮುಖಚಹರೆ ತಿಳಿಯಬಾರದೆಂಬ ಕಾರಣಕ್ಕೆ ಮುಖಗವಸು ಹಾಕಲಾಗಿತ್ತು. ಸ್ಥಳದಲ್ಲಿ ಸಿಐಡಿ ಅಧಿಕಾರಿಗಳು, ಸಿಬಂದಿ ಹಾಗೂ ಮೊಬೈಲ್‌ ಫೋರೆನ್ಸಿಕ್‌ ಸೈನ್ಸ್‌ ಲ್ಯಾಬೊರೇಟರಿಯ ಸಿಬಂದಿ, ಇಲಾಖೆಯ ಫೋಟೋ, ವೀಡಿಯೋ ಗ್ರಾಫ‌ರ್‌ಗಳು ಉಪಸ್ಥಿತರಿದ್ದರು. ಮಲ್ಪೆ ಠಾಣೆಯ ಪೊಲೀಸ್‌ ಸಿಬಂದಿ ಕಾಲೇಜು ಆವರಣದಲ್ಲಿ ಬಂದೋಬಸ್ತ್ ನಿರ್ವಹಿಸಿದರು.

ಇಂದು ಸಿಐಡಿ ಎಡಿಜಿಪಿ ಭೇಟಿ
ಆ. 10ರಂದು ಸಿಐಡಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಮನೀಶ್‌ ಖರ್ಬೀಕ್‌ ಉಡುಪಿಗೆ ಆಗಮಿಸಿ ತನಿಖೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಾತ್ಯಕ್ಷಿಕೆಗೆ ಪ್ಲಾಸ್ಟಿಕ್‌ ಗೊಂಬೆ ಬಳಕೆ
ಘಟನೆಯನ್ನು ಮರು ಸೃಷ್ಟಿಗೊಳಿಸುವ ನಿಟ್ಟಿನಲ್ಲಿ ಸಿಐಡಿ ಅಧಿಕಾರಿಗಳು ಯುವತಿಯಂತಿರುವ ಪ್ಲಾಸ್ಟಿಕ್‌ ಗೊಂಬೆಯನ್ನು ಬಳಕೆ ಮಾಡಿದ್ದಾರೆ. ಪೊಲೀಸ್‌ ವಾಹನದಲ್ಲಿಯೇ ಇದನ್ನು ತರಲಾಯಿತು. ಪ್ರಸ್ತುತ ಇದನ್ನು ಘಟನೆ ನಡೆದ ಕಾಲೇಜಿನಲ್ಲಿಯೇ ಇರಿಸಲಾಗಿದೆ. ಗುರುವಾರ ಇದರ ಮೂಲಕ ಘಟನೆಯನ್ನು ಮರುಸೃಷ್ಟಿಸುವ ಸಾಧ್ಯತೆಗಳಿವೆ. ಬುಧವಾರ ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ತನಿಖಾ ಪ್ರಕ್ರಿಯೆ ಮಧ್ಯಾಹ್ನ 2 ಗಂಟೆಯವರೆಗೂ ಮುಂದುವರಿಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next