ಬೀದರ: ಅನ್ನದಾತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ರಾಜ್ಯದಲ್ಲಿಜಾರಿಗೆ ತಂದಿರುವ “ಮುಖ್ಯಮಂತ್ರಿ ರೈತ ವಿದ್ಯಾ ನಿಧಿ’ ಯೋಜನೆಗೆ ಗಡಿ ನಾಡು ಬೀದರನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲೆಯಲ್ಲಿ ಕೇವಲ ಮೂರು ತಿಂಗಳಲ್ಲಿ 3722 ವಿದ್ಯಾರ್ಥಿಗಳು 1.02 ಕೋಟಿ ರೂ. ಸ್ಕಾಲರ್‌ಶಿಪ್ ಪಡೆದಿದ್ದಾರೆ.
ಸದಾ ಪ್ರಕೃತಿ ವಿಕೋಪದ ಹೊಡೆತಕ್ಕೆ ಸಿಲುಕಿ ರೈತ ವರ್ಗ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಹಿನ್ನೆಲೆ ಅವರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಕೃಷಿಕರಿಗೆ ನೆರವಾಗಲು ಬಸವರಾಜ ಬೊಮ್ಮಾಯಿ ಅವರು ಸಿಎಂಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ “ವಿದ್ಯಾ ನಿಧಿ’ ಮಹತ್ವಕಾಂಕ್ಷಿ ಯೋಜನೆಯನ್ನು ಘೋಷಿಸಿದ್ದು, ಸೆ.5ರಂದು ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರಿಂದ ಚಾಲನೆ ದೊರೆತಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ರೈತರ ಮಕ್ಕಳು ಮುಂದಿನ ವಿದ್ಯಾಭ್ಯಾಸದ ಕನಸು ಕೈಗೂಡಲು ಪ್ರತಿ ವರ್ಷ ಶಿಷ್ಯವೇತನ ಒದಗಿಸುವ ನೆರವಿನ ಕಾರ್ಯಕ್ರಮ ಇದಾಗಿದ್ದು, ವಾರ್ಷಿಕ ಶಿಷ್ಯವೇತನವನ್ನು ರೈತರ ಮಕ್ಕಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಜಮೆ ಮಾಡಲಾಗುತ್ತಿದೆ. ಯೋಜನೆಯ ಲಾಭ ಪಡೆಯಬೇಕಾದರೆ ಎಲ್ಲ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆಗೆ ಜೋಡಣೆ ಮಾಡಿಸುವುದು ಕಡ್ಡಾಯವಾಗಿದೆ.
ಈ ಮಹತ್ವಕಾಂಕ್ಷಿ ಯೋಜನೆಯಡಿ ರಾಜ್ಯದ 17 ಲಕ್ಷ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಅಗತ್ಯ ಅನುದಾನ ಮೀಸಲಿಟ್ಟಿದೆ. ಬೀದರ ಜಿಲ್ಲೆಯಲ್ಲಿ ಈವರೆಗೆ 5328 ರೈತರ ಮಕ್ಕಳು ಅರ್ಜಿಹಾಕಿದ್ದು,ಅದರಲ್ಲಿ3722ಮಕ್ಕಳಿಗೆ1.02ಕೋಟಿ ರೂ. ಸ್ಕಾಲರ್‌ಶಿಪ್ ಪಡೆದಿದ್ದಾರೆ. ಬೀದರ ತಾಲೂಕಿನಲ್ಲಿ ಅತಿ ಹೆಚ್ಚು 1188 ಮಕ್ಕಳಿಗೆ 32.27 ಲಕ್ಷ ರೂ. ಹಣ ಬಿಡುಗಡೆ ಆಗಿದೆ. ಇನ್ನುಳಿದಂತೆ ಭಾಲ್ಕಿ ತಾಲೂಕಿನಲ್ಲಿ 963 ಮಕ್ಕಳಿಗೆ26.66 ಲಕ್ಷ ರೂ. ಬಸವಕಲ್ಯಾಣದ 662 ವಿದ್ಯಾರ್ಥಿಗಳಿಗೆ 18.38 ಲಕ್ಷ ರೂ., ಹುವåನಾಬಾದ್ ನಲ್ಲಿ 641 ಮಕ್ಕಳಿಗೆ 18.04 ಲಕ್ಷ ರೂ. ಮತ್ತು ಔರಾದ ತಾಲೂಕಿನಲ್ಲಿ 267 ವಿದ್ಯಾರ್ಥಿಗಳಿಗೆ 7.52 ಲಕ್ಷ ರೂ. ಬ್ಯಾಂಕ್ ಖಾತೆಗೆ ಜಮೆ ಆಗಿದೆ. “ವಿದ್ಯಾರ್ಥಿ ನಿಧಿ’ ಕಾರ್ಯಕ್ರಮ ನಿಯಮಗಳಿಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ.
ಮಕ್ಕಳು ಬೇರೆ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರೂ ಸಹ ಈ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ. ಇದಕ್ಕಾಗಿ ಜಾತಿ ಅಥವಾ ಆದಾಯದ ಮಿತಿ ಇಲ್ಲ. ಎಲ್ಲ ವರ್ಗದವರಿಗೂ ಅನ್ವಯವಾಗಲಿದೆ. ಆದರೆ, ವಿದ್ಯಾರ್ಥಿ ತಂದೆ ಅಥವಾ ತಾಯಿ ಹೆಸರಿನಲ್ಲಿ ನಿರ್ದಿಷ್ಟ ಕೃಷಿ ಜಮೀನು ಹೊಂದಿದ್ದರೆ ಮಾತ್ರ ಅವರ ಮಕ್ಕಳು ವಿದ್ಯಾ ನಿಧಿ ಪಡೆಯಲು ಅರ್ಹರೆಂಬ ಷರತ್ತು ವಿದ್ಯಾರ್ಥಿಗಳಗೆ ಸಂಕಷ್ಟ ತಂದೊಡ್ಡಿದೆ.
ಯಾರಿಗೆ ಎಷ್ಟು ವೇತನ?
ಪಿಯುಸಿ, ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2,500 ರೂ. ಮತ್ತು ವಿದ್ಯಾರ್ಥಿನಿಯರಿಗೆ 3 ಸಾವಿರ ರೂ., ಇನ್ನು ಪದವೀಧರ ವಿದ್ಯಾರ್ಥಿಗಳಿಗೆ 5 ಸಾವಿರ ರೂ, ವಿದ್ಯಾರ್ಥಿನಿಯರಿಗೆ 5,500 ರೂ., ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್, ಬಿ-ಫಾರ್ಮ್, ನರ್ಸಿಂಗ್, ವೃತ್ತಿಪರಕೋರ್ಸ್ ಗಳ ವಿದ್ಯಾರ್ಥಿಗಳಿಗೆ 7,500 ರೂ. ನೀಡಿದರೆ, ವಿದ್ಯಾರ್ಥಿನಿಯರಿಗೆ 8 ಸಾವಿರ ರೂ.ಹಣವನ್ನು ರಾಜ್ಯ ಸರ್ಕಾರ ನೀಡುತ್ತದೆ. ಜತೆಗೆ ಎಂಬಿಬಿಎಸ್, ಬಿಇ, ಬಿ.ಟೆಕ್ ಸ್ನಾತಕೋತ್ತರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 10 ಸಾವಿರ ಮತ್ತು ವಿದ್ಯಾರ್ಥಿನಿಯರಿಗೆ 11,000 ರೂ. ಶಿಷ್ಯವೇತನ ನೀಡಲಾಗುತ್ತಿದೆ. ರಾಜ್ಯದಲ್ಲಿ ನೋಂದಣಿಯಾದ ಯಾವುದೇ ಶಿಕ್ಷಣಸಂಸ್ಥೆಗಳಲ್ಲಿ ಪ್ರವೇಶ ಪಡೆದವರಿಗೆ ಯೋಜನೆಯ ಲಾಭ ದೊರೆಯಲಿದೆ.
-ಶಶಿಕಾಂತ ಬಂಬುಳಗೆ