Advertisement

ಐಸಿಸ್‌ಗೆ ಎಂಟೆಕ್‌ ವಿದ್ಯಾರ್ಥಿ

06:45 AM Sep 25, 2017 | |

ತಿರುವನಂತಪುರಂ: ಕೇರಳದ ಮಳಪ್ಪುರಂನ ಎಂಟೆಕ್‌ ವಿದ್ಯಾರ್ಥಿಯೊಬ್ಬ ಐಸಿಸ್‌ ಉಗ್ರ ಸಂಘಟನೆಗೆ ಸೇರಿರುವ ಶಂಕೆ ವ್ಯಕ್ತವಾಗಿದೆ. ವಿಐಟಿ ವೆಲ್ಲೂರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ನಜೀಬ್‌ ಆಗಸ್ಟ್‌ 15ರಿಂದ ನಾಪತ್ತೆಯಾಗಿದ್ದು, ಆತ ತನ್ನ ತಾಯಿಗೆ ಕಳುಹಿಸಿರುವ ಟೆಲಿಗ್ರಾಂ ಸಂದೇಶವು ಆತ ಐಸಿಸ್‌ಗೆ ಸೇರ್ಪಡೆಯಾಗಿದ್ದಾನೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

Advertisement

ಮಗನ ನಾಪತ್ತೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ನಜೀಬ್‌ ತಾಯಿ, ಮಗ ಕಳುಹಿಸಿರುವ ಸಂದೇಶದ ಕುರಿತೂ ಮಾಹಿತಿ ನೀಡಿದ್ದಾರೆ. “ನನ್ನನ್ನು ಹುಡುಕಬೇಕಾದ ಅಗತ್ಯವಿಲ್ಲ. ನಾನು ನನ್ನ ಗುರಿಯನ್ನು ತಲುಪಿದ್ದೇನೆ. ಈ ಜಾಗಕ್ಕಿಂತ ಅತ್ಯುತ್ತಮ ಪ್ರದೇಶ ಇನ್ನೊಂದಿಲ್ಲ. ಪೊಲೀಸರ ಬಳಿ ಹೋಗಬೇಡಿ. ಅದರಿಂದ ನಿಮಗೇ ತೊಂದರೆ. ಇದು ನನ್ನ ಕೊನೆಯ ಸಂದೇಶ. ಇನ್‌ಶಾ ಅಲ್ಲಾಹ್‌’ ಎಂದು ನಜೀಬ್‌ ಸಂದೇಶ ಕಳುಹಿಸಿದ್ದಾನೆ. ಆತ ಐಸಿಸ್‌ ಸೇರ್ಪಡೆಯಾಗಿರುವ ಸಾಧ್ಯತೆಯಿದೆ ಎಂದು ತಾಯಿಯೇ ಪೊಲೀಸರಿಗೆ ತಿಳಿಸಿರುವುದಾಗಿ ಮಳಪ್ಪುರಂ ಎಸ್‌ಐ ಬಿನು ಬಿ.ಶ್ರೀಧರನ್‌ ತಿಳಿಸಿದ್ದಾರೆ. 

ಅಬು ಬಶೀರ್‌ ಎಂಬ ಹೆಸರಿನಲ್ಲಿ ನಜೀಬ್‌ ತನ್ನ ತಾಯಿಗೆ ಸಂದೇಶ ಕಳುಹಿಸಿದ್ದ. ಇದು ಐಸಿಸ್‌ಗೆ ಸೇರ್ಪಡೆಗೊಳ್ಳುವವರಿಗೆ ಉಗ್ರ ಸಂಘಟನೆ ನೀಡುವ ಹೆಸರು. ಈ ಹಿಂದೆ ಕೇರಳದಿಂದ ಹೋಗಿ ಐಸಿಸ್‌ಗೆ ಸೇರ್ಪಡೆ ಯಾದವರು ಕಳುಹಿಸಿದ್ದ ಸಂದೇಶದ ಮಾದರಿಯಲ್ಲೇ ನಜೀಬ್‌ ಸಂದೇಶವೂ ಇರುವ ಕಾರಣ, ಆತ ಐಸಿಸ್‌ ಸೇರಿರುವ ಶಂಕೆ ಬಲವಾಗಿದೆ ಎಂದಿದ್ದಾರೆ ಶ್ರೀಧರನ್‌.

Advertisement

Udayavani is now on Telegram. Click here to join our channel and stay updated with the latest news.

Next