Advertisement

ಪಾರ್ಟ್‌ ಟೈಮ್‌ ಬಾಳೆ ಬೆಳೆಗಾರ ಸ್ಟೂಡೆಂಟ್‌ ರೈತ

06:55 PM Jan 12, 2020 | Sriram |

ಬಿ.ಕಾಂ ಓದುತ್ತಿರುವ ಹನುಮಂತರಾಯ ಗೌಡ, ಪಾರ್ಟ್‌ ರೈತನೂ ಹೌದು. ಕಾಲೇಜಿನ ಬಿಡುವಿನ ವೇಳೆಯಲ್ಲಿ ಬಾಳೆ ಬೆಳೆದು ಯಶ ಕಂಡಿರುವ ಆತನಿಗೆ, ಕೃಷಿಕನಾಗಿ ಸಾಧನೆ ಮಾಡಬೇಕೆನ್ನುವ ಹುಮ್ಮಸ್ಸಿದೆ.

Advertisement

ಬಾಳೆಯ ಉಗಮಸ್ಥಾನ ಭಾರತ. ದೇಶದ ಬಹುತೇಕ ರಾಜ್ಯಗಳಲ್ಲಿ ಬಾಳೆ ಬೆಳೆಯನ್ನು ಬೆಳೆಯುತ್ತಾರೆ. ವಿಜಯಪುರ ಜಿಲ್ಲೆಯ, ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರಿನ ಕೃಷಿಕರಲ್ಲಿ ಅನೇಕರು ಹೂ, ತರಕಾರಿ, ವಿವಿಧ, ಧಾನ್ಯಗಳನ್ನು ಬೆಳೆಯುತ್ತಾರೆ. ಆದರೆ ಇಲ್ಲಿನ ರೈತ ಯುವಕ ಹನುಮಂತರಾಯ ಗೌಡರ ಅವರನ್ನು ಅನುಸರಿಸದೆ ತಮ್ಮ 4 ಎಕರೆ ಜಮೀನಿನಲ್ಲಿ ಬಾಳೆ ಮತ್ತು ಈರುಳ್ಳಿ ಬೆಳೆ ಬೆಳೆದು ಯಶ ಕಂಡಿದ್ದಾರೆ. ಅಂದಹಾಗೆ, ಬಿ.ಕಾಂ ಓದುವುದರ ಜೊತೆ ಜೊತೆಗೇ ಅವರು ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.

ಬಾಳೆ ಬೆಳೆಯೊಂದಿಗೆ ಈರುಳ್ಳಿ ನಾಟಿ
ಇವರು 1 ಎಕರೆ ಜಮೀನಿನಲ್ಲಿ ಬಾಳೆ ಮತ್ತು ಈರುಳ್ಳಿ ಬೆಳೆದು ಸೈ ಎನಿಸಿಕೊಡಿದ್ದಾರೆ. ಬಾಳೆ, ಅಂದಾಜು 13 ತಿಂಗಳ ಬೆಳೆ. ಒಂದು ಸಸಿಗೆ 12 ರೂ.ನಂತೆ 15 ಸಾವಿರ ಸಸಿಗಳನ್ನು ಖರೀದಿಸಿದ್ದರು. ಸಸಿಯಿಂದ ಸಸಿಗೆ ನಾಲ್ಕು ಅಡಿ, ಸಾಲಿನಿಂದ ಸಾಲಿಗೆ 5 ಅಡಿ ಅಂತರದಲ್ಲಿ ನಾಟಿಮಾಡಿದರು. ಒಂದೂವರೆ ತಿಂಗಳ ನಂತರ ಬಾಳೆ ಸಸಿಗಳ ಮಧ್ಯದ ಸಾಲಿನಲ್ಲಿ ಕೇವಲ 3 ತಿಂಗಳ ಅಲ್ಪಾವಧಿ ಬೆಳೆಯಾದ ಈರುಳ್ಳಿಯನ್ನು ನಾಟಿ ಮಾಡಿದರು. ಅದಕ್ಕೆ, ಕೊಟ್ಟಿಗೆ ಗೊಬ್ಬರ ಮತ್ತು ಕುರಿ ಗೊಬ್ಬರವನ್ನು ಬಳಕೆ ಮಾಡಿ ಬಂಪರ್‌ ಬೆಳೆ ಬೆಳೆದು ಅಧಿಕ ಲಾಭ ಗಳಿಸಿದ್ದಾರೆ.

ಅಧ್ಯಯನ ಪ್ರವಾಸ ಸಹಕಾರಿ
ಹನುಮಂತರಾಯಪ್ಪ, ಗ್ರಾಮೀಣಾಭಿವೃದ್ಧಿ ಯೋಜನೆಯ ಭೂಮಿತಾಯಿ ಪ್ರಗತಿಬಂಧು ಸಂಘದ ಸದಸ್ಯರೊಡನೆ ಕೃಷಿ ಅಧ್ಯಯನ ಪ್ರವಾಸಕ್ಕೂ ತೆರಳಿದ್ದರು. ಇತರೆಡೆಗಳಲ್ಲಿ ಬಹು ಬೆಳೆಗಳನ್ನು ಬೆಳೆದಿದ್ದು ನೋಡಿ ಅವರಿಗೂ ಮಿಶ್ರ ಕೃಷಿ ಮಾಡುವ ಯೋಚನೆ ಬಂದಿತು. ಕುಟುಂಬಸ್ಥರ ನೆರವಿನಿಂದ ಬಾಳೆ, ಚೆಂಡು ಹೂ, ಗಲಾಟಿ ಹೂ, ಟೊಮೆಟೊ, ಮೆಣಸು, ಈರುಳ್ಳಿ, ಮೆಂತೆಸೊಪ್ಪು, ಗಜ್ಜರಿ ಹೀಗೆ ತರಹೇವಾರಿ ಬೆಳೆಯಿಂದ ಸಾಕಷ್ಟು ಲಾಭ ಗಳಿಸಿದ್ದಾರೆ.

ಬಿಡುವಿನ ವೇಳೆಯನ್ನು ಕೃಷಿಗಾಗಿ ಮೀಸಲಿಟ್ಟಿದ್ದೇನೆ. ಪ್ರತಿ ವರ್ಷ ತೋಟಗಾರಿಕಾ ಇಲಾಖೆ ಆಯೋಜಿಸುವ ಕೃಷಿ ಮೇಳದಲ್ಲಿ ಪಾಲ್ಗೊಳ್ಳುತ್ತೇನೆ. ಅಲ್ಲಿ ತಜ್ಞರಿಂದ ಮಾಹಿತಿ ಪಡೆದುಕೊಂಡು ಅಳವಡಿಸಿಕೊಳ್ಳುತ್ತೇನೆ. ಅವರ ಸಹಾಯದಿಂದಲೇ ಇಂದು ಇಷ್ಟೆಲ್ಲ ಲಾಭ ಗಳಿಸಲು ಸಾಧ್ಯವಾಗಿದೆ.
-ಹನುಮಂತರಾಯ ಗೌಡರ, ರೈತ, ವಿದ್ಯಾರ್ಥಿ

Advertisement

ಹೆಚ್ಚಿನ ಮಾಹಿತಿಗೆ: 9380404493

– ಪ್ರಶಾಂತ ಜಿ. ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next