Advertisement

ಪೆಪ್ಪರ್ ಸ್ಪ್ರೇ ಹೊಡೆದು ಅಪಹರಿಸಲು ಯತ್ನಿಸಿದವನಿಂದ ಪಾರಾದ ವಿದ್ಯಾರ್ಥಿನಿ

04:08 PM Jul 29, 2023 | Vishnudas Patil |

ಪಣಜಿ(ಮಾಪ್ಸಾ):  ಘಟೇಶ್ವರನಗರ ಖೋರ್ಲಿಯಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನನ್ನು ಅಪಹರಿಸಲು ಯತ್ನಿಸಿದ ಶಂಕಿತನನ್ನು ಪೆಪ್ಪರ್ ಸ್ಪ್ರೇ ಹೊಡೆದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಆರೋಪದ ಮೇಲೆ ಮಾಪ್ಸಾ ಪೊಲೀಸರು ಆರೋಪಿ ಯೂಸುಫ್ ಶೇಖ್ ನನ್ನು ಬಂಧಿಸಿದ್ದಾರೆ.

Advertisement

ಶುಕ್ರವಾರ ಮಧ್ಯಾಹ್ನ 1.45ರ ಸುಮಾರಿಗೆ ಘಟೇಶ್ವರನಗರದಲ್ಲಿ ಈ ಘಟನೆ ನಡೆದಿದೆ. ಮಾಪ್ಸಾ ಪೊಲೀಸರು ಶಂಕಿತ ಯೂಸುಯ್ ಶೇಖ್‍ನನ್ನು ರಾತ್ರಿ 10 ಗಂಟೆಗೆ ಬಂಧಿಸಿದ್ದಾರೆ. ಯೂಸುಫ್ ಮಧ್ಯಾಹ್ನ ಸಂತ್ರಸ್ತೆಯನ್ನು ಭೇಟಿಯಾಗಲು ಬಂದಿದ್ದ ಮತ್ತು ತನ್ನೊಂದಿಗೆ ಬರುವಂತೆ ಒತ್ತಾಯಿಸಲು ಪ್ರಾರಂಭಿಸಿದ್ದ. ಸಂತ್ರಸ್ತೆ ನಿರಾಕರಿಸಿದಾಗ, ಅವನು ಅವಳನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸಿದ. ಆಕೆ ತನ್ನ ಬ್ಯಾಗ್‍ನಿಂದ ಪೆಪ್ಪರ್ ಸ್ಪ್ರೇ ತೆಗೆದು ಕಣ್ಣಿಗೆ ಹೊಡೆಯುವ ಮೂಲಕ ವಿರೋಧಿಸಿದ್ದು, ಅವನ ಮೇಲೂ ಹಲ್ಲೆ ನಡೆಸಿದ್ದಾಳೆ.

ಸಂತ್ರಸ್ತೆಯ ಕೋಪ ಮತ್ತು ಪ್ರತಿರೋಧವನ್ನು ಕಂಡು, ಶಂಕಿತನು ತನ್ನ ಕಾರು ಮತ್ತು ಮೊಬೈಲ್ ಫೋನ್ ಅನ್ನು ಅಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಮುಖ್ಯರಸ್ತೆಯಲ್ಲೇ ಈ ಘಟನೆ ನಡೆದಿದೆ. ರಸ್ತೆಯುದ್ದಕ್ಕೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾಕಷ್ಟು ಜನರು ನಡೆದುಕೊಂಡು ಹೋಗುತ್ತಿದ್ದರು. ಆದರೆ ಅವರು ಕೇವಲ ವೀಕ್ಷಕರಾಗಿಯೇ ಉಳಿದು ಸಂಪೂರ್ಣ ಘಟನೆಯನ್ನು ನಿರ್ಲಕ್ಷಿಸಿದರು. ಇನ್ನೂ ಕೆಲವರು ಈ ಘಟನೆಯನ್ನು ಮೊಬೈಲ್ ಫೋನ್‍ಗಳಲ್ಲಿ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ.

ಸಂತ್ರಸ್ತೆಯನ್ನು ಶಂಕಿತನ ಹಿಡಿತದಿಂದ ರಕ್ಷಿಸಲು ಯಾರೂ ಮಾನವೀಯತೆ ತೋರಲಿಲ್ಲ. ಘಟನೆಯ ಮಾಹಿತಿ ಲಭ್ಯವಾದ ನಂತರ ಪೊಲೀಸರು ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಡಿಸ್ಚಾರ್ಜ್ ಆದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪೋಲಿಸರಿಂದ ಲಭ್ಯವಾಗಿರುವ  ಮಾಹಿತಿಯ ಪ್ರಕಾರ ಬಂಧಿತ ಸಂತ್ರಸ್ತೆಯ ಮನೆಯ ಪಕ್ಕದಲ್ಲೇ ವಾಸವಾಗಿದ್ದ. ಅವರು ನೆರೆಹೊರೆಯವರಾಗಿರುವುದರಿಂದ ಪರಸ್ಪರ ಪರಿಚಯವಿತ್ತು ಮತ್ತು ಅಪಹರಿಸಲು ಈ ಪರಿಚಯವನ್ನೇ ದುರುಪಯೋಗ ಪಡೆದುಕೊಂಡಿದ್ದಾನೆ ಎನ್ನಲಾಗಿದೆ.

Advertisement

ಕೆಲ ದಿನಗಳ ಹಿಂದೆ ಸಂತ್ರಸ್ತೆಯ ದ್ವಿಚಕ್ರ ವಾಹನ ಹಾಳಾಗಿತ್ತು. ದ್ವಿಚಕ್ರ ವಾಹನ ದುರಸ್ಥಿಗಾಗಿ ಶೋರೂಮ್‍ಗೆ ಹೋಗಿದ್ದಳು. ಆ ಸಮಯದಲ್ಲಿ ಆರೋಪಿ ಯೂಸುಫ್ ಶೇಖ್ ದ್ವಿಚಕ್ರ ವಾಹನ ರಿಪೇರಿಗೆ ಇಲ್ಲಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತೆ ಎಂದು ಸಂತ್ರಸ್ತೆಯನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಕೆಲವು ದ್ವಿಚಕ್ರ ವಾಹನಗಳ ಭಾಗಗಳನ್ನು ಬದಲಾಯಿಸಬೇಕಾಗುತ್ತದೆ ಎಂದು ಮೆಕ್ಯಾನಿಕ್ ಸೂಚಿಸಿದ್ದರು.

ಬಿಡಿಭಾಗಗಳನ್ನು ಪಡೆಯುವ ನೆಪದಲ್ಲಿ ಸಂತ್ರಸ್ತೆಯನ್ನು ತನ್ನ ಕಾರಿನಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಕಾರಿನಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆಯ ನಂತರ, ಸಂತ್ರಸ್ತೆಯನ್ನು ಮನೆಗೆ ಕರೆತಂದಿದ್ದಾನೆ. ಇದು ಸಂತ್ರಸ್ತೆಯ ಮನಸ್ಸಿನಲ್ಲಿ ಆತನ ಅಸಮಾಧಾನ ಮತ್ತು ದ್ವೇಷವನ್ನು ಸೃಷ್ಟಿಸಿತ್ತು.

ಘಟನೆಯ ನಂತರ, ಸಂತ್ರಸ್ತೆ ತನ್ನ ಮೊಬೈಲ್ ಫೋನ್‍ನಿಂದ ಆತನ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾಳೆ. ಶುಕ್ರವಾರ ಮಧ್ಯಾಹ್ನ ಸಂತ್ರಸ್ತೆ ಕಾಲೇಜಿಗೆ ತೆರಳುತ್ತಿದ್ದಾಗ ಆರೋಪಿ ಸ್ಥಳಕ್ಕೆ ಬಂದು ಕಿರುಕುಳ ನೀಡಲಾರಂಭಿಸಿದ್ದಾನೆ, ಆಗ ಸಂತ್ರಸ್ಥೆಯು ಕೋಪಗೊಂಡು ಆರೋಪಿಯ ಕಣ್ಣಿಗೆ ಪೆಪ್ಪರ್ ಸ್ಪ್ರೇನಿಂದ ಹೊಡೆದಿದ್ದಾಳೆ.

ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಈ ಘಟನೆಯ ಕುರಿತು  ಹೆಚ್ಚಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next