Advertisement
ಫಲಕಾರಿಯಾಗದ ಚಿಕಿತ್ಸೆ: ಗ್ರಾಮದ ವೆಂಕಟಸ್ವಾಮಿ ಎಂಬುವರ ಪುತ್ರ ಪ್ರಜ್ವಲ್‌ಗೆ ಗಂಟಲು ಊದುಕೊಂಡಿದ್ದರಿಂದ ಚಿಕ್ಕಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತೋರಿಸಿ ಬಳಿಕ ಇಂದಿರಾಗಾಂಧಿ ಆಸ್ಪತ್ರೆ ಮತ್ತು ವಾಣಿ ವಿಳಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
Related Articles
ಗ್ರಾಮದ ಮುನಿರತ್ನಮ್ಮ ಹಾಗೂ ಸರೋಜಮ್ಮ, ಶ್ರೀನಿವಾಸ್ ಸಹಿತ ಹಲವರು ಗಂಟಲು ನೋವಿನಿಂದ ಬಳಲುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಆವರಿಸಿದೆ.
Advertisement
ಶಾಲೆಯ ವಿದ್ಯಾರ್ಥಿಗಳಿಗೆ ಗಂಟಲು ರೋಗ: ಗ್ರಾಮ ಸ.ಕಿ.ಪ್ರಾ.ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಜ್ವಲ್ ಮೃತಪಟ್ಟ ಬಳಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 10 ಮಂದಿ ವಿದ್ಯಾರ್ಥಿಗಳಿಗೆ ಗಂಟಲು ರೋಗ ಕಾಣಿಸಿಕೊಂಡಿದ್ದು, ಸ್ವತಃ ಪಾಠಪ್ರವಚನಗಳು ಮಾಡುವ ಶಿಕ್ಷಕರು ಸಹ ಭಯಭೀತಿಗೊಂಡಿದ್ದಾರೆ. ಶಾಲೆಯಲ್ಲಿ 22 ಮಂದಿ ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ 10 ಮಂದಿ ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನು ನಿಲ್ಲಿಸಿದ್ದಾರೆ ಎಂದು ಮುಖ್ಯಶಿಕ್ಷಕಿ ವಿಜಯ ತಿಳಿಸಿದರು.
ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ತಂಡ ಶಾಲೆಗೆ ಭೇಟಿ ನೀಡಿ ಎಲ್ಲಾ ಮಕ್ಕಳಿಗೆ ಚಿಕಿತ್ಸೆ ನೀಡಿದರಲ್ಲದೇ ಬಿಸಿನೀರು ತಣ್ಣಗೆ ಮಾಡಿ ಕುಡಿಯ ಬೇಕು. ಜೊತೆಗೆ ಬಿಸಿ ನೀರಿನಲ್ಲಿ ಉಪ್ಪು ಹಾಕಿ ಗಾಲೀìಗ್ ಮಾಡಲು ವೈದ್ಯರು ಸೂಚನೆ ನೀಡಿದ್ದಾರೆ. ಅದನ್ನು ಪಾಲನೆ ಮಾಡುತ್ತಿದ್ದೇವೆ ಎಂದು ಮಕ್ಕಳು ಹೇಳಿದರು.
ನಿಲ್ಲದ ಆತಂಕ: ಗ್ರಾಮದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡಿರುವ ಗಂಟಲು ರೋಗದಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಸದ್ಯದ ಮಟ್ಟದಲ್ಲಿ ಯಾರೂ ಸಹ ಸಮಾಧಾನಗೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಗಂಟಲು ನೋವು ಕಾಣಿಸಿಕೊಂಡರೆ ಸಮೀಪದ ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಮತ್ತು ಬೆಂಗಳೂರಿನ ಆಸ್ಪತ್ರೆಗೆ ದೌಡಾಯಿಸುತ್ತಿದ್ದು, ರೋಗ ಮಾತ್ರ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ ಎಂಬ ತಳಮಳ ಮತ್ತು ಆತಂಕ ಗ್ರಾಮಸ್ಥರಲ್ಲಿ ಬೇರೂರಿದೆ.
ಗ್ರಾಮದಲ್ಲಿ ಗಂಟಲು ರೋಗ ದಿನೇ ದಿನೇ ಮಕ್ಕಳು ಮತ್ತು ಹಿರಿಯರಿಗೆ ಹರಡುತ್ತಿದ್ದರು ಸಹ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುವ ಗೋಜಿಗೆ ಹೋಗಿಲ್ಲವೆಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೇವಲ ಸಾದಲಿ ಆಸ್ಪತ್ರೆಯ ವೈದ್ಯರು ಮತ್ತು ಆಶಾ ಕಾರ್ಯಕರ್ತರು,ದಾದಿಯರು ಮಾತ್ರ ನೀರಿನ ಮಾದರಿ ಸ್ವೀಕರಿಸಿ ಚಿಕಿತ್ಸೆ ನೀಡಿದ್ದಾರೆ ಆದರೂ ಸಹ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಹಿರಿಯ ಅಧಿಕಾರಿಗಳು ಭೇಟಿ ನೀಡಿ ರೋಗವನ್ನು ನಿಯಂತ್ರಣ ಮಾಡಿ ಜನರ ಆರೋಗ್ಯವನ್ನು ಕಾಪಾಡಬೇಕೆಂದು ಅಳಲು ತೋಡಿಕೊಂಡಿದ್ದಾರೆ.
ಗ್ರಾಮದಲ್ಲಿ ಗಂಟಲು ರೋಗ ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಗ್ರಾಮ ಪಂಚಾಯಿತಿಯಿಂದ ಅಥವಾ ಆರೋಗ್ಯ ಇಲಾಖೆಯಿಂದ ಯಾವುದೇ ರೀತಿಯ ಸ್ವತ್ಛತೆ ಕಾರ್ಯ ನಡೆಯುತ್ತಿಲ್ಲ. ಎಲ್ಲೆಡೆ ಗಲೀಜು ತುಂಬಿದೆ. ಚರಂಡಿ ನೀರು ರಸ್ತೆಗೆ ಹರಿದು ಸೊಳ್ಳೆಗಳಿಗೆ ಆಶ್ರಯತಾಣವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.
ನೀರು ಶುದ್ಧೀಕರಣ ಘಟಕ ಮಂಜೂರು: ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿರುವ ಕುರಿತು ಶಾಸಕ ವಿ.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದ ಪರಿಣಾಮ ತಾಲೂಕಿನಾದ್ಯಂತ 40 ನೀರು ಶುದ್ಧೀಕರಣ ಘಟಕ ಮಂಜೂರು ಮಾಡಿದ್ದಾರೆ. ಅದರಲ್ಲಿ ಜರುಗಹಳ್ಳಿ ಸಹ ಸೇರಿದ್ದು, ಶೀಘ್ರವೇ ಘಟಕ ಆರಂಭಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷರು ತಿಳಿಸಿದ್ದಾರೆ.
ನಾಟಿ ಔಷಧಿ ಸ್ವೀಕರಿಸಬೇಡಿ – ಆರೋಗ್ಯಾಧಿಕಾರಿ: ಇಂಗ್ಲಿಷ್‌ನಲ್ಲಿ ದೀಪ್ತಿರಿಯಾ ಎಂದು ಕರೆಯಲ್ಪಡುವ ಗಂಟಲು ಮಾರಿ ರೋಗ 15 ವರ್ಷದ ಮಕ್ಕಳಿಗೆ ಗಂಟಲು ನೋವು, ಗಂಟಲೊಳಗೆ ಫುಲ್ ವೈಟೀಶ್ ಕಾಣಿಸಿಕೊತ್ತದೆ. ಯಾವುದೇ ಆಹಾರ ನುಂಗುವುದಕ್ಕೆ ಆಗುವುದಿಲ್ಲ. ನೀರು ಅಥವಾ ಎಂಜಿಲು ನುಂಗುವುದಕ್ಕೆ ನೋವು ಬರುತ್ತದೆ. ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಉಸಿರಾಟದ ತೊಂದರೆಯಾಗಿ ಪ್ರಾಣಹಾನಿ ಆಗುವ ಅವಕಾಶಗಳು ಹೆಚ್ಚಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ತಿಳಿಸಿದರು.
ಗಂಟಲು ನೋವು, ಜ್ವರ ಅಥವಾ ಎಂಜಲು ನುಂಗಲು ತೊಂದರೆಯಾದರೆ ಸಮೀಪದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ರೋಗಿಗಳು ಪಿತ್ರೋಮೈಸಿನ್, ಅಝೀತರೋ ಮೈಸಿನ್, ಅಥವಾ ಪೆನ್ಸಿಲಿನ್ ಚುಚ್ಚುಮದ್ದು ಸ್ವೀಕರಿಸಬೇಕು. ನಾಟಿ ಔಷಧಿ ಸ್ವೀಕರಿಸಬಾರದು ಎಂದು ತಿಳಿಸಿದರು.
ನೀರು ಕುಡಿಯುವುದಕ್ಕೆ ಯೋಗ್ಯವಲ್ಲ – ವರದಿ: ಗ್ರಾಮದಲ್ಲಿರುವ ಕೊಳವೆಬಾವಿಯಲ್ಲಿ ಲಭಿಸಿರುವ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದೆ ಎಂದು ಈಗಾಗಲೇ ತಿಳಿದುಬಂದಿದೆ. ಗಂಟಲುರೋಗ ವ್ಯಾಪಕವಾಗಿರುವುದರಿಂದ ಕುಡಿಯುವ ನೀರು ಆರೋಗ್ಯ ಇಲಾಖೆಯ ಅಧಿಕಾರಿಗಳು ನಮೂನೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ನೀರು ಕುಡಿಯಲು ಯೋಗ್ಯವಿಲ್ಲವೆಂದು ಪ್ರಯೋಗಾಲಯದಿಂದ ಧೃಡಪಟ್ಟಿದೆ. ಕಲುಷಿತ ನೀರು ಸೇವಿಸಿ ಗಂಟಲು ರೋಗ ಕಾಣಿಸಿಕೊಂಡಿರಬಹುದು ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಟ್ಯಾಂಕರ್ ನೀರು ಸರಬರಾಜು: ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ, ಗ್ರಾಪಂ ಸದಸ್ಯ ಶ್ರೀನಿವಾಸ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಕೂಡಲೇ ಸ್ವತ್ಛತೆ ಕಾರ್ಯವನ್ನು ನಡೆಸಲಾಗುವುದು. ಗ್ರಾಮದಲ್ಲಿ ಸರಬರಾಜು ಮಾಡುವ ನೀರು ಕುಡಿಯುವುದಕ್ಕೆ ಯೋಗ್ಯವಲ್ಲವೆಂದು ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ವರದಿ ನೀಡಿದ ಬಳಿಕ ನೀರು ಸರಬರಾಜು ಸ್ಥಗಿತಗೊಳಿಸಿ ಖಾಸಗಿ ಕೊಳವೆಬಾವಿಯಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದೇವೆ. ಮುಂಜಾಗ್ರತ ಕ್ರಮವಾಗಿ ಖಾಸಗಿ ಕೊಳವೆಬಾವಿಯ ನೀರು ಸಹ ಪರೀಕ್ಷೆ ಮಾಡಲು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ ಎಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸುಬ್ಬಣ್ಣ ಮತ್ತು ಪಿಡಿಒ ಗೌಸ್‌ಪೀರ್ ತಿಳಿಸಿದರು.