Advertisement

ಹಾಸ್ಟೆಲ್‌ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

11:36 AM Jan 23, 2017 | Team Udayavani |

ಬೆಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಕಾಲೇಜು ಹಾಸ್ಟೆಲ್‌ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಶರಣಾಗಿರುವ ಘಟನೆ ಭಾನುವಾರ ಮಧ್ಯಾಹ್ನ ಕುಮಾರಸ್ವಾಮಿ ಲೇಔಟ್‌ ಸಮೀಪ ನಡೆದಿದೆ. 

Advertisement

ದಯಾನಂದ ಸಾಗರ್‌ ಕಾಲೇಜಿನ ವಿದ್ಯಾರ್ಥಿ ಜಹಾನ್‌ವುಲ್‌ ಆಲಂ (18) ಮೃತ ದುರ್ದೈವಿ. ಹಾಸ್ಟೆಲ್‌ನ ಮೂರನೇ ಮಹಡಿಯ ಕಾರಿಡಾರ್‌ನಿಂದ ಜಿಗಿದ ಆಲಂನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಸಹಪಾಠಿಗಳು ಹಾಗೂ ಹಾಸ್ಟೆಲ್‌ ಸಿಬ್ಬಂದಿ ಮುಂದಾದರಾದರೂ ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ವಿದ್ಯಾರ್ಥಿ ಆಲಂ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಘಟನೆ ಕುರಿತು ಮೃತನ ಪೋಷಕರಿಗೆ ಮಾಹಿತಿ ನೀಡಿದ್ದು, ಸೋಮವಾರ ಅವರು ನಗರಕ್ಕೆ ಬರಲಿದ್ದಾರೆ. ಮೃತನ ಕುಟುಂದವರು ನೀಡುವ ದೂರು ಆಧಾರಿಸಿ ಮುಂದಿನ ತನಿಖೆ ನಡೆಯಲಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ಹೇಳಿದ್ದಾರೆ. 

ಆಲಂ ಮೂಲತಃ ಮುಂಬೈಯವನಾಗಿದ್ದು, ದಯಾನಂದ ಸಾಗರ್‌ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಮಧ್ಯಾಹ್ನ ಮೂರನೇ ಮಹಡಿಯಲ್ಲಿರುವ ತನ್ನ ಕೊಠಡಿಯಲ್ಲಿದ್ದ ಆಲಂ, 3 ಗಂಟೆಗೆ ಸುಮಾರಿಗೆ ಮಹಡಿಯಿಂದ ಜಿಗಿಯಲು ಮುಂದಾಗಿದ್ದ. ಆ ವೇಳೆ ಕಾರಿಡಾರ್‌ನಲ್ಲಿದ್ದ ವಿದ್ಯಾರ್ಥಿಯೊಬ್ಬ, ಕಾರಿಡಾರ್‌ನ ಮೂರು ಅಡಿಯಷ್ಟು ಎತ್ತರವಿರುವ ಸಿಮೆಂಟ್‌ ಕಟ್ಟೆಯನ್ನು ಹತ್ತಿ ಕೆಳಗೆ ಹಾರಲು ಅಣಿಯಾಗಿದ್ದ ಆಲಂನನ್ನು ನೋಡಿ ರಕ್ಷಣೆಗೆ ಧಾವಿಸಿದ್ದಾನೆ.

ಜೋರಾಗಿ ಕಿರುಚಿಕೊಂಡು ಕೆಳಗೆ ಹಾರದಂತೆ ಆಲಂನಲ್ಲಿ ವಿನಂತಿಸಿಕೊಂಡಿದ್ದಾನೆ. ಆದರೆ, ಈ ಮನವಿಗೆ ಕಿವಿಗೊಡದೆ ಕಟ್ಟೆಯ ಮೇಲಿಂದ ಆಲಂ ಕೆಳಗೆ ಜಿಗಿದಿದ್ದಾನೆ ಎಂದು ಎಸ್‌.ಡಿ.ಶರಣಪ್ಪ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

Advertisement

ಮರಣಪತ್ರ?: ಮೃತನ ಕೊಠಡಿಯಲ್ಲಿ ಮೂರು ಪುಟಗಳ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ತನ್ನ ಸಾವಿನ ಕಾರಣಗಳ ಕುರಿತು ಆತ ಸ್ವವಿಸ್ತಾರವಾಗಿ ಬರೆದಿಲ್ಲದೆ, ತಾನು ಸಾವಿನ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಪೋಷಕರಲ್ಲಿ ಕ್ಷಮಾಪಣೆಯನ್ನೂ ಕೋರಿದ್ದಾನೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. 

ಮರಣ ಪತ್ರ ಪತ್ತೆಯಾಗಿರುವುದನ್ನು ಖಚಿತ ಪಡಿಸಿರುವ ಡಿಸಿಪಿ, ಆ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ. ಮೃತ ವಿದ್ಯಾರ್ಥಿ ಕೊಠಡಿಯಲ್ಲಿ ಪತ್ರವೊಂದು ಸಿಕ್ಕಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ, ಘಟನೆ ಸಂಬಂಧ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು, ಹಾಸ್ಟೆಲ್‌ ಸಿಬ್ಬಂದಿ ಹಾಗೂ ಮೃತ ವಿದ್ಯಾರ್ಥಿಯ ಸಹಪಾಠಿಗಳ ವಿಚಾರಣೆ ನಡೆಯಲಿದ್ದು, ಈಗಾಗಲೇ ಕೆಲವರಿಂದ ಔಪಾಚಾರಿಕವಾಗಿ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next