ಭೋಪಾಲ್(ಚಿನ್ಡ್ ವಾರಾ): ಇದು ಕಂಪ್ಯೂಟರ್ ಅಥವಾ ಮಾನವ ನಿರ್ಮಿತ ತಪ್ಪೋ ಎಂಬ ಬಗ್ಗೆ ಆರೋಪಿಸಬಹುದು. ಆದರೆ ಬಹು ನಿರೀಕ್ಷೆಯೊಂದಿಗೆ ಬರೆದಿದ್ದ ನೀಟ್ ಪರೀಕ್ಷೆಯ ಫಲಿತಾಂಶ ಯಡವಟ್ಟಿನಿಂದಾಗಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ದುರಂತ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ವಿಧಿ ಸೂರ್ಯವಂಶಿ ಎಂಬ ವಿದ್ಯಾರ್ಥಿನಿ ತಾನು ಮುಂದೆ ವೈದ್ಯಳಾಗಬೇಕೆಂಬ ಕನಸು ಕಂಡಿದ್ದಳು. ಆದರೆ ನೀಟ್ ಫಲಿತಾಂಶವನ್ನು ಪಟ್ಟಿಯಲ್ಲಿ ಪರೀಕ್ಷಿಸಿದಾಗ ತನ್ನ ಹೆಸರಿನ ಮುಂದೆ ಕೇವಲ 6 ಸಂಖ್ಯೆಗಳ ಫಲಿತಾಂಶ ಮಾತ್ರ ಇದ್ದಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಳು ಎಂದು ವರದಿ ವಿವರಿಸಿದೆ.
ಏತನ್ಮಧ್ಯೆ ವಿಧಿ ಸೂರ್ಯವಂಶಿ ನೀಟ್ ಪರೀಕ್ಷೆಯ ಒಎಂಆರ್ ಶೀಟ್ (ಉತ್ತರಪತ್ರಿಕೆಯ ಪ್ರತಿ)ಅನ್ನು ಪರಿಶೀಲಿಸಿದಾಗ ಆಕೆ ನಿಜಕ್ಕೂ ಅತ್ಯುತ್ತಮ ಅಂಕ(590) ಪಡೆದಿದ್ದಳು. ಆದರೆ ವಿದ್ಯಾರ್ಥಿನಿ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ.
ವಿಧಿ ನೀಟ್ ಪರೀಕ್ಷೆಯಲ್ಲಿ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಅಂಕ ಪಡೆದಿದ್ದಾಳೆ ಎಂಬುದನ್ನು ಪೋಷಕರು ನಂಬಲಿಲ್ಲವಾಗಿತ್ತು. ಮಾನಸಿಕ ಆಘಾತಕ್ಕೊಳಗಾಗಿದ್ದ ವಿಧಿ ತನ್ನ ಕೋಣೆಯಲ್ಲಿರುವ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ವರದಿ ತಿಳಿಸಿದೆ.
ಅಕ್ಟೋಬರ್ 16ರಂದು ನೀಟ್ ಪರೀಕ್ಷೆಯ ಫಲಿತಾಂಶವನ್ನು ಘೋಷಿಸಲಾಗಿತ್ತು. ಪರೀಕ್ಷೆಯಲ್ಲಿ ಒಡಿಶಾದ ಸೋಯೇಬ್ ಮತ್ತು ದಿಲ್ಲಿಯ ಆಕಾಂಕ್ಷ ಸಿಂಗ್ 720ರಲ್ಲಿ 720 ಅಂಕಗಳನ್ನು ಪಡೆದು ಇತಿಹಾಸ ಸೃಷ್ಟಿಸಿದ್ದರು.