ಬೆಂಗಳೂರು: ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡುವ ಬಿಎಂಟಿಸಿ ರಿಯಾಯ್ತಿ ದರದ ಅಭಿವೃದ್ಧಿ ಶುಲ್ಕದಲ್ಲಿ ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಮಾರ್ಟ್‌ಕಾರ್ಡ್ ಆಧಾರಿತ ಪಾಸ್ ನೀಡಲಾಗುತ್ತದೆ. ಆದರೆ, ಅಭಿವೃದ್ಧಿ ಶುಲ್ಕ 200 ರೂ. ಪಾವತಿಸಲೇಬೇಕು. ಕಳೆದ ವರ್ಷ ಎಲ್ಲ ವಿಭಾಗಕ್ಕೂ 170 ರೂ. ಅಭಿವೃದ್ಧಿ ಶುಲ್ಕ ನಿಗದಿ ಮಾಡಲಾಗಿತ್ತು. 2019-20ನೇ ಸಾಲಿಗೆ ಪ್ರತಿ ವಿದ್ಯಾರ್ಥಿಯ ಬಸ್ ಪಾಸ್‌ಗೆ ತಲಾ 30ರೂ. ಅಭಿವೃದ್ಧಿ ಶುಲ್ಕ ಏರಿಸಲಾಗಿದೆ.
ಶುಲ್ಕ ವಿವರ: ಎಲ್ಲ ವಿದ್ಯಾರ್ಥಿಗಳ ಸ್ಮಾರ್ಟ್ ಕಾರ್ಡ್ ಆಧಾರಿತ ರಿಯಾಯ್ತಿ ದರದ ಬಸ್ ಪಾಸ್ ದರದಲ್ಲಿ 200 ರೂ. ಅಭಿವೃದ್ಧಿ ಶುಲ್ಕ ಸೇರಿಕೊಂಡಿರುತ್ತದೆ. ಪ್ರೌಢಶಾಲಾ ಹುಡುಗರಿಗೆ 600 ರೂ., ಹುಡುಗಿಯರಿಗೆ 400 ರೂ., ಪಿಯುಸಿ ವಿದ್ಯಾರ್ಥಿಗಳಿಗೆ 900 ರೂ., ಪದವಿ ಕಾಲೇಜು ವಿದ್ಯಾರ್ಥಿಗಳಿಗೆ 1100 ರೂ., ವೃತ್ತಿಪರ ಕಾಲೇಜು ವಿದ್ಯಾರ್ಥಿಗಳಿಗೆ 1150 ರೂ., ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ 1680 ರೂ., ಸಂಜೆ ಕಾಲೇಜು ಅಥವಾ ಪಿಎಚ್‌ಡಿ ಸಂಶೋಧಕರಿಗೆ 1480 ರೂ. ಶುಲ್ಕ ನಿಗದಿ ಮಾಡಲಾಗಿದೆ. ಕಳೆದ ವರ್ಷ ಅಭಿವೃದ್ಧಿ ಶುಲ್ಕ 170 ರೂ. ಇದ್ದಿದ್ದರಿಂದ ಎಲ್ಲ ವಿದ್ಯಾರ್ಥಿಗಳ ಪಾಸ್‌ನ ಬೆಲೆ 30 ರೂ. ಕಡಿಮೆ ಇತ್ತು.
ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಪಾಸ್: ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿರುವ ಪ್ರೌಢಶಾಲಾ ವಿದ್ಯಾರ್ಥಿಯಿಂದ ಸಂಶೋಧನಾ ವಿದ್ಯಾರ್ಥಿವರೆಗೂ ಎಲ್ಲರಿಗೂ ಬಸ್ ಪಾಸ್ ಉಚಿತವಾಗಿ ವಿತರಿಸಲಾಗುತ್ತದೆ. ಆದರೆ, 200 ರೂ. ಅಭಿವೃದ್ಧಿ ಶುಲ್ಕ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾವತಿಸಲೇಬೇಕಾಗಿದೆ.
Advertisement
ಪ್ರಾಥಮಿಕ, ಪ್ರೌಢ, ಪಿಯುಸಿ ಹಾಗೂ ಪದವಿ, ಸ್ನಾತಕೋತ್ತರ ಪದವಿ ಹೀಗೆ ಎಲ್ಲ ಶಾಲಾ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಿಗೂ ಬಿಎಂಟಿಸಿಯಿಂದ ರಿಯಾಯ್ತಿ ದರದ ಬಸ್ ಪಾಸ್ ನೀಡಲಾಗುತ್ತದೆ. ಸ್ಮಾರ್ಟ್‌ಕಾರ್ಡ್ ಆಧಾರಿತ ಬಸ್‌ಪಾಸ್ ಇದಾಗಿದ್ದು, ವಿದ್ಯಾರ್ಥಿಗಳಿಗೆ ಜುಲೈ ಮೊದಲ ವಾರದಿಂದ ವಿತರಣೆ ಮಾಡಲಾಗುತ್ತದೆ.
Related Articles
Advertisement
ರಿಯಾಯ್ತಿ ದರದ ಪಾಸ್ ವಿತರಣೆಗೆ 12 ಕೌಂಟರ್
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದ ಪಾಸ್ ವಿತರಣೆಗಾಗಿ 12 ಕೌಂಟರ್ ತೆರೆಯಲಾಗುತ್ತದೆ. ಉಳಿದಂತೆ ಎನ್.ಆರ್.ಕಾಲೋನಿ, ನಂದನಿ ಬಡಾವಣೆ, ಪೀಣ್ಯ, ಮಲ್ಲೇಶ್ವರ, ವಿದ್ಯಾರಣ್ಯಪುರ, ಯಲಹಂಕ ಸ್ಯಾಟಲೈಟ್ ಟೌನ್, ದೊಮ್ಮಲೂರು ಟಿಟಿಎಂಸಿ, ಎಲೆಕ್ಟ್ರಾನಿಕ್ ಸಿಟಿ ಡಿಪೋ-19, ಬನ್ನೇರುಘಟ್ಟ, ಶ್ರೀವಿದ್ಯಾನಗರ, ಇಸ್ರೊ ಬಡಾವಣೆ, ಎಂಸಿಟಿಸಿ ಹಾಗೂ ಬಸವೇಶ್ವರನಗರ ಬಸ್ ನಿಲ್ದಾಣದಲ್ಲಿ ತಲಾ 2 ಕೌಂಟರ್, ವೈಟ್ಫೀಲ್ಡ್, ಯಶವಂತಪುರ, ಯಲಹಂಕ ಓಲ್ಡ್ ಟೌನ್, ಶಿವಾಜಿನಗರ, ಕೋರಮಂಗಲ ಟಿಟಿಎಂಸಿ, ಜಯನಗರ ಟಿಟಿಎಂಸಿ, ಕೆಂಗೇರಿ ಟಿಟಿಎಂಸಿ ತಲಾ 4 ಕೌಂಟರ್, ಬನಶಂಕರಿ ಟಿಟಿಎಂಸಿಯಲ್ಲಿ 6 ಮತ್ತು ಶಾಂತಿನಗರ ಟಿಟಿಎಂಸಿ ಹಾಗೂ ವಿಜಯನಗರ ಟಿಟಿಎಂಸಿಯಲ್ಲಿ ತಲಾ 8 ಕೌಂಟರ್ ಸೇರಿದಂತೆ ನಗರಾದ್ಯಂತ ಇರುವ 26 ಪ್ರಮುಖ ಬಸ್ ನಿಲ್ದಾಣಗಳಲ್ಲಿ 92 ಕೌಂಟರ್ ತೆರೆಯಲಾಗುತ್ತದೆ.
ಕಾಲೇಜಿನಲ್ಲೇ ನೋಡಲ್ ಅಧಿಕಾರಿ
ಪದವಿ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಬಸ್ ಪಾಸ್ ವಿತರಣೆ ಸಂಬಂಧ ಕಾಲೇಜಿನ ಹಂತದಲ್ಲಿ ಅಧ್ಯಾಪಕರೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕಾಗುತ್ತದೆ. ವಿದ್ಯಾರ್ಥಿಗಳ ದಾಖಲಾತಿ ವೇಳೆ ಬಸ್ ಪಾಸ್ ಪಡೆಯುವ ವಿಧಾನ, ನವೀಕರಿಸಿಕೊಳ್ಳುವ ಬಗೆ, ಪಾಸ್ ದೊರೆಯುವ ಸ್ಥಳ, ಇತ್ಯಾದಿ ಮಾಹಿತಿ ವಿದ್ಯಾರ್ಥಿಗಳಿಗೆ ನೀಡಿ, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪ್ರತಿ ಕಾಲೇಜಿನ ಪ್ರಾಂಶುಪಾಲರಿಗೂ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಿಸಿದೆ.
ರಾಜು ಖಾರ್ವಿ ಕೊಡೇರಿ