ಸಿದ್ದಾಪುರ: ಪಟ್ಟಣದ ತಾಪಂ ಸಭಾಭವನದಲ್ಲಿ ತಾಪಂ ಅಧ್ಯಕ್ಷ ಸುಧೀರ್ ಗೌಡರ್ ಅಧ್ಯಕ್ಷತೆಯಲ್ಲಿ ಸಾರಿಗೆ ಅದಾಲತ್ ನಡೆಯಿತು.
ವಾಯವ್ಯ ಕರ್ನಾಟಕ ಸಾರಿಗೆ ಇಲಾಖೆ ಶಿರಸಿ ವಿಭಾಗದ ಡಿಟಿಒ ಸುರೇಶ ನಾಯ್ಕ ಮಾತನಾಡಿ ಹೊಸ ಬಸ್ ಮಾರ್ಗಗಳನ್ನು ಹೊರತುಪಡಿಸಿ ಉಳಿದ ಬಸ್ ಮಾರ್ಗಗಳ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್ ವ್ಯವಸ್ಥೆಯನ್ನು ಮುಂದಿನ ಹತ್ತುದಿನಗಳಲ್ಲಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಅಧ್ಯಕ್ಷ ಸುದೀರ್ ಗೌಡರ್ ಮಾತನಾಡಿ, ಈ ಸಾರಿಗೆ ಅದಾಲತ್ ಸಭೆಗೆ ಕೆಎಸ್‌ಆರ್‌ಟಿಸಿ ಡಿಸಿಯವರೇ ಬರಬೇಕೆಂದು ಆಗ್ರಹಿಸಿದ್ದೆವು. ಆದರೆ ಅವರ ಬದಲಾಗಿ ಬಂದಿರುವ ಅಧಿಕಾರಿಗಳು ಎಷ್ಟರ ಮಟ್ಟಿಗೆ ಸಮಸ್ಯೆ ಪರಿಹರಿಸುತ್ತಾರೆ ನೋಡೊಣ. ತಾಲೂಕಿನ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ತಮಗೆ ಆಗಿರುವ ತೊಂದರೆಗಳ ಬಗ್ಗೆ ಹಾಗೂ ಆಗಬೇಕಾಗಿರುವ ವ್ಯವಸ್ಥೆ ಕುರಿತು ತಿಳಿಸಬೇಕು ಎಂದರು. ನಂತರ ವಿವಿಧ ಕಾಲೇಜು ವಿದ್ಯಾರ್ಥಿಗಳು ಬಸ್ ಸಮಸ್ಯೆಗಳಿಂದ ಆಗುವ ತೊಂದರೆಗಳ ಕುರಿತಾಗಿ ಅಳಲನ್ನು ತೋಡಿಕೊಂಡರು.
ಬೇಡ್ಕಣಿಯ ತ್ಯಾರ್ಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂತೋಷ ನಮ್ಮ ಕಾಲೇಜು ಪಟ್ಟಣದಿಂದ ಬಹಳ ದೂರ ಇದೆ. ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳುವುದಕ್ಕೂ ಬಸ್ ನಿಲ್ದಾಣ ಇಲ್ಲ. ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ತುಂಬಾ ತೊಂದರೆ ಆಗುತ್ತಿದೆ. ಈ ಕುರಿತು ಎಷ್ಟೋ ಮನವಿ ನೀಡಿ, ಪ್ರತಿಭಟನೆ ಮಾಡಿದ್ದೇವೆ. ಆದರೂ ಏನೂ ಪ್ರಯೋಜನ ಆಗಿಲ್ಲ. ನಮಗೆ ಸಮಪರ್ಕ ಬಸ್ ವ್ಯವಸ್ಥೆ ಮಾಡದಿದ್ದರೆ ನಾವು ಕಾಲೇಜನ್ನು ಬಹಿಷ್ಕಾರ ಮಾಡುತ್ತೇವೆ ಎಂದರು.
ಇದಕ್ಕೆ ಸಾರಿಗೆ ಅಧಿಕಾರಿ ಕಾಲೇಜು ಸಮಯಕ್ಕೆ ಬಸ್ ಬಿಡಲಾಗುವುದು. ಮಿನಿ ಬಸ್ ಬದಲಾಯಿಸಿ ದೊಡ್ಡ ಬಸ್ಸನ್ನು ಕಾಲೇಜು ವಿದ್ಯಾರ್ಥಿಗಳ ಸಮಯ ಕ್ಕೆ ಬದಲಾಯಿಸಿ ಕೊಡುವುದಾಗಿ ಹೇಳಿದರು. ಹರೀಶ ದೇವಾಡಿಗ ಮಾತನಾಡಿ ಶಿರಸಿ-ಸಿದ್ದಾಪುರ ಹಾಲ್ಕಣಿ ಮಾರ್ಗವಾಗಿ ಓಡಿಸುವ ಬಸ್ ಸರಿಯಾಗಿ ಬರುತ್ತಿಲ.ಇದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದು ಗಮನ ಸೆಳೆದರು. ಹಲಗೇರಿ ಕಾಲೇಜಿನ ಹೇಮಂತ ಮಾತನಾಡಿ, ಕೆಲವು ಬಸ್‌ಗಳನ್ನು ಹಲಗೇರಿಯಲ್ಲಿ ನಿಲ್ಲಿಸುವುದಿಲ್ಲ. ಇನ್ನು ಕೆಲವು ಬಸ್ ಬರುವುದಿಲ್ಲ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಮನೆಗೆ ಹೋಗುವುದಕ್ಕೆ ರಾತ್ರಿಯಾಗುತ್ತದೆ. ಇದನ್ನು ನಿಯಮಿತವಾಗಿ ಓಡಿಸುವ ವ್ಯವಸ್ಥೆ ಮಾಡುವಂತೆ ಕೇಳಿಕೊಂಡರು.
ಕೋಲಶಿರ್ಸಿ ಗ್ರಾಪಂ ಉಪಾಧ್ಯಕ್ಷ ಕೆ.ಆರ್. ವಿನಾಯಕ, ಹಲಗೇರಿ ಗ್ರಾಪಂ ಸದಸ್ಯ ಶ್ರೀಧರ ನಾಯ್ಕ, ವಾಜಗೋಡ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ ಸಮಸ್ಯೆಗಳ ಕುರಿತು ವಿವರಿಸಿದರು. ಜಿಪಂ ಸದಸ್ಯ ಎಂ.ಜಿ. ಹೆಗಡೆ ಗೆಜ್ಜೆ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮಾತನಾಡಿದರು. ಸದಸ್ಯರಾದ ವಿವೇಕ ಭಟ್, ರಘಪತಿ ಹೆಗಡೆ, ಶಿರಸಿ ಡಿಪೊ ವ್ಯವಸ್ಥಾಪಕ ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.