Advertisement

ಕಾಲೇಜು ಪ್ರಾರಂಭದಲ್ಲೇ ವಿದ್ಯಾರ್ಥಿಗಳ ಹಾಜರಾತಿ ಕ್ಷೀಣ

12:44 PM May 21, 2019 | Team Udayavani |

ಚಿಕ್ಕಮಗಳೂರು: ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳು ಸೋಮವಾರದಿಂದ ಆರಂಭವಾಗಿದೆಯಾದರೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಬಹಳ ಕಡಿಮೆ ಕಂಡು ಬಂದಿವೆ.

Advertisement

ರಾಜ್ಯಾದ್ಯಂತ ಸೋಮವಾರದಿಂದ ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭವಾಗಿವೆ. ಆದರೆ ಜಿಲ್ಲೆಯಾದ್ಯಂತ ಇನ್ನೂ ಪ್ರಥಮ ಪಿಯು ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾತಿ ನಡೆಯುತ್ತಲೇ ಇದೆ. ಈವರೆಗೂ ಯಾವುದೇ ಕಾಲೇಜಿನಲ್ಲಿಯೂ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿಲ್ಲ. ಹಾಗಾಗಿ ಪ್ರಥಮ ಪಿಯು ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾತಿ ಬಹಳ ಕಡಿಮೆ ಇತ್ತು. ಅದರೊಂದಿಗೆ ದ್ವಿತೀಯ ಪಿಯು ತರಗತಿಗಳಿಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿರಲಿಲ್ಲ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಎಸ್‌.ದೇವರಾಜ್‌, ಸಾಮಾನ್ಯವಾಗಿ ಪ್ರತಿ ವರ್ಷವೂ ಕಾಲೇಜುಗಳ ಆರಂಭವಾದ ಮೊದಲ ವಾರ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇರುತ್ತದೆ. ನಂತರ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಾರೆ. ವಿದ್ಯಾರ್ಥಿಗಳು ಗೈರು ಹಾಜರಾಗಿರುವುದಕ್ಕೂ ಕಾಲೇಜುಗಳನ್ನು ಮೇ ತಿಂಗಳಲ್ಲೇ ಆರಂಭಿಸಿರುವುದಕ್ಕೂ ಸಂಬಂಧವಿಲ್ಲ. ಕಳೆದ ವರ್ಷ ಮೇ ಮೊದಲ ವಾರದಲ್ಲಿಯೇ ತರಗತಿಗಳನ್ನು ಆರಂಭಿಸಲಾಗಿತ್ತು ಎಂದು ತಿಳಿಸಿದರು.

ತರಗತಿಗಳನ್ನು ಮೊದಲೇ ಆರಂಭಿಸಿದರೆ ನಂತರ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಿನಿಂದಲೇ ಪಾಠವನ್ನು ಆರಂಭಿಸಿದರೆ ಸಿಲಬಸ್‌ ಪೂರ್ಣಗೊಳಿಸಲು ಸಹಕಾರಿಯಾಗುತ್ತದೆ ಎಂಬ ಕಾರಣದಿಂದಲೇ ಇಲಾಖೆಯು ಕಾಲೇಜನ್ನು ಮೇ ತಿಂಗಳಿನಲ್ಲೇ ಆರಂಭಿಸಲು ತೀರ್ಮಾನಿಸಿದೆ. ಹಾಗಾಗಿ ತರಗತಿಗಳು ಆರಂಭವಾದ ಕೂಡಲೇ ಪಾಠವನ್ನೂ ಆರಂಭಿಸಬೇಕಾಗುತ್ತದೆ ಎಂದು ತಿಳಿಸಿದರು.

ಉಪನ್ಯಾಸಕರ ಕೊರತೆ: ಜಿಲ್ಲೆಯಾದ್ಯಂತ ಕನ್ನಡ 19, ಆಂಗ್ಲಭಾಷೆಯ 11, ಉರ್ದು 3, ಇತಿಹಾಸ 9, ಎಕನಾಮಿಕ್ಸ್‌ 17, ಜಿಯೋಗ್ರಫಿ 1, ಸಮಾಜಶಾಸ್ತ್ರ 14, ಪೊಲಿಟಿಕಲ್ ಸೈನ್ಸ್‌ 8, ಕಾಮರ್ಸ್‌ 27, ಭೌತಶಾಸ್ತ್ರ 4, ರಸಾಯನ ಶಾಸ್ತ್ರ 2, ಗಣಿತ 9, ಜೀವಶಾಸ್ತ್ರ 6, ಎಲೆಕ್ಟ್ರಾನಿಕ್ಸ್‌ 1 ಸೇರಿದಂತೆ ಒಟ್ಟಾರೆ 131 ಉಪನ್ಯಾಸಕರ ಹುದ್ದೆ ಖಾಲಿ ಇದೆ. ಕೆಲವು ವಿಷಯಗಳಿಗೆ ಬೇರೆ ಕಾಲೇಜುಗಳಿಂದ ನಿಯೋಜನೆಗೊಳಿಸಲಾಗಿದೆ. ಉಳಿದ ಸ್ಥಾನಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಜಿಲ್ಲೆಯಾಧ್ಯಂತ ಒಟ್ಟಾರೆ 92 ಕಾಲೇಜುಗಳಿವೆ. ಈ ಪೈಕಿ 42 ಸರ್ಕಾರಿ, 3 ವಸತಿ, 16 ಅನುದಾನಿತ ಹಾಗೂ 31 ಅನುದಾನರಹಿತ ಕಾಲೇಜುಗಳು. ಚಿಕ್ಕಮಗಳೂರು ತಾಲೂಕಿನಲ್ಲಿ 11 ಸರ್ಕಾರಿ, 1 ವಸತಿ, 6 ಅನುದಾನಿತ ಹಾಗೂ 6 ಖಾಸಗಿ ಕಾಲೇಜುಗಳು ಇವೆ. ಕಡೂರು ತಾಲೂಕಿನಲ್ಲಿ 2 ಸರ್ಕಾರಿ, 1 ಅನುದಾನರಹಿತ, 2 ಖಾಸಗಿ, ಮೂಡಿಗೆರೆ ತಾಲೂಕಿನಲ್ಲಿ 6 ಸರ್ಕಾರಿ, 1 ವಸತಿ, 4 ಖಾಸಗಿ ಕಾಲೇಜುಗಳು, ನರಸಿಂಹರಾಜಪುರ ತಾಲೂಕಿನಲ್ಲಿ 3 ಸರ್ಕಾರಿ, 1 ಅನುದಾನರಹಿತ, 3 ಖಾಸಗಿ, ಶೃಂಗೇರಿ ತಾಲೂಕಿನಲ್ಲಿ 3 ಸರ್ಕಾರಿ, 1 ಅನುದಾನ ರಹಿತ, 1 ಖಾಸಗಿ ಹಾಗೂ ತರೀಕೆರೆ ತಾಲೂಕಿನಲ್ಲಿ 7 ಸರ್ಕಾರಿ, 3 ಅನುದಾನರಹಿತ ಹಾಗೂ 2 ಖಾಸಗಿ ಕಾಲೇಜುಗಳಿವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಾದ್ಯಂತ ಎಲ್ಲ ಸರ್ಕಾರಿ ಕಾಲೇಜುಗಳಿಗೂ ಸ್ವಂತ ಕಟ್ಟಡಗಳಿವೆ. ನಗರದ ಲಾಲ್ಬಹದ್ದೂರ್‌ ಶಾಸ್ತ್ರಿ, ಆಲ್ದೂರು, ಬಣಕಲ್ ಹಾಗೂ ಕೊಪ್ಪ ಕಾಲೇಜುಗಳ ಕಟ್ಟಡದ ದುರಸ್ತಿ ಆಗಬೇಕಿದೆ. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತು ಅನುದಾನ ಬಿಡುಗಡೆಯಾದ ಕೂಡಲೇ ದುರಸ್ತಿ ಕಾರ್ಯವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಸರ್ಕಾರದ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮದಡಿ ಜಿಲ್ಲೆಯ 11 ಕಾಲೇಜುಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ. ಈ ಕಾರ್ಯಕ್ರಮದಡಿ ಪ್ರಯೋಗಾಲಯ ಸೇರಿದಂತೆ ಸಿಇಟಿ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಜಿಲ್ಲೆಯ ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ಕಡೂರಿನ ಬಾಲಕ ಹಾಗೂ ಬಾಲಕಿಯರ ಕಾಲೇಜು, ತರೀಕೆರೆ, ಚೌಳಹಿರಿಯೂರು, ಬೀರೂರು ಕೆ.ಎಲ್.ಕೆ., ನಗರದ ಬಸವನಹಳ್ಳಿ ಹಾಗೂ ಲಾಲ್ ಬಹದ್ದೂರ್‌ ಶಾಸ್ತ್ರಿ ಕಾಲೇಜುಗಳು ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next