ಮೈಸೂರು: ಕ್ಷುಲ್ಲಕ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳ ನಡುವೆ ನಡೆದ ಜಗಳದಲ್ಲಿ ವಿದ್ಯಾರ್ಥಿಯೊಬ್ಬನ ಕಣ್ಣಿಗೆ ಗಂಭೀರ ಗಾಯವಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯನಗರ ನಾಲ್ಕನೇ ಹಂತದಲ್ಲಿರುವ ಎಸ್‌ವಿಇಐ ಶಾಲೆಯಲ್ಲಿ ಶನಿವಾರ ಬೆಳಗ್ಗೆ ಘಟನೆ ನಡೆದಿದ್ದು, ಹೂಟಗಳ್ಳಿ ಕೆಎಚ್‌ಬಿ ಕಾಲೋನಿ ನಿವಾಸಿ ಹಾಗೂ ಮೇಟಗಳ್ಳಿ ಪೊಲೀಸ್ ಠಾಣೆಯ ಜೀಪ್ ಚಾಲಕ ಯೋಗೇಶ್ ಅವರ ಪುತ್ರ ಕೆ.ವೈ.ಯಶವಂತ್ ಕುಮಾರ್(13) ಗಾಯಗೊಂಡಿರುವ ಬಾಲಕ. ಈತನನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪ$ತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಎಸ್‌ವಿಇಐ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಯಶವಂತ್ ಕುಮಾರ್ ಶನಿವಾರ ಬೆಳಗ್ಗೆ 9 ಗಂಟೆಗೆ ಸೈಕಲ್‌ನಲ್ಲಿ ಶಾಲೆಗೆ ತೆರಳಿದ್ದಾನೆ. ಬಳಿಕ ಸಾಮೂಹಿಕ ಪ್ರಾರ್ಥನೆಗಾಗಿ ಹೋಗುತ್ತಿದ್ದ ಸಂದರ್ಭ ಎದುರಾದ ಶಾಲೆಯ ಮತ್ತೂಬ್ಬ ವಿದ್ಯಾರ್ಥಿ ದಾರಿ ಬಿಡುವಂತೆ ಯಶವಂತ್‌ನನ್ನು ಕೇಳಿದ್ದಾನೆ.
ಆದರೆ ಆತನಿಗೆ ದಾರಿಬಿಡದೆ ಯಶವಂತ್ ತನ್ನಪಾಡಿಗೆ ಮುಂದೆ ಸಾಗಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಮತ್ತೂಬ್ಬ ವಿದ್ಯಾರ್ಥಿ ಯಶವಂತ್‌ನ ಬಲಗಣ್ಣಿಗೆ ಮುಷ್ಠಿಯಿಂದ ಗುದ್ದಿ ಗಾಯಗೊಳಿಸಿದ್ದಾನೆ. ಘಟನೆಯಿಂದ ತೀವ್ರ ಗಾಯಗೊಂಡ ಯಶವಂತ್‌ನನ್ನು ಶಾಲೆಯ ಸಿಬ್ಬಂದಿ, ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ, ಪೋಷಕರಿಗೆ ವಿಷಯ ತಿಳಿಸಿದ್ದಾರೆ.
ಬಳಿಕ ಆಸ್ಪತ್ರೆಗೆ ತೆರಳಿದ ಯಶವಂತ್ ಪೋಷಕರು, ಮಗನ ಆರೋಗ್ಯ ವಿಚಾರಿಸಿದ ವೇಳೆ ಆಸ್ಪತ್ರೆಯ ವೈದ್ಯರು ಯಶವಂತ್ ಕಣ್ಣಿಗೆ ತೀವ್ರ ಪೆಟ್ಟಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿದರು ಕಣ್ಣಿನ ದೃಷ್ಟಿ ಬರುವುದು ಶೇ.90 ಅನುಮಾನ ಎಂದು ತಿಳಿಸಿದ್ದಾರೆ.
ಬಳಿಕ ಹಲ್ಲೆ ನಡೆಸಿದ ಬಾಲಕ ಮತ್ತು ಘಟನೆಗೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣವೆಂದು ಗಾಯಾಳು ಯಶವಂತ್ ತಂದೆ ಯೋಗೇಶ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.