Advertisement
ನಾಲವಾರ ನಾಡಕಚೇರಿ ವ್ಯಾಪ್ತಿಯ ರಾಜೋಳಾ ಗ್ರಾಮದ ಪಾರಮ್ಮಾ ದ್ಯಾವಣ್ಣ ಎನ್ನುವ ವಿಧವೆ ಪಿಂಚಿಣಿಗಾಗಿ ನಾಲವಾರ ಉಪ ತಹಶೀಲ್ದಾರ ಕಚೇರಿಗೆ ಹೋಗಿ ಐದಾರು ಸಲ ಅಗತ್ಯ ದಾಖಲಾತಿ ಸಲ್ಲಿಸಿದರೂ ಈಕೆಯ ಅರ್ಜಿತಿರಸ್ಕಾರಗೊಳ್ಳುತ್ತಿದೆ. ಇದು ವೃದ್ಧೆಯ ಗೋಳಾಟಕ್ಕೆ ಕಾರಣವಾಗಿದೆ.
ಮಕ್ಕಳಿಲ್ಲದ ನನಗೆ ನನ್ನ ಪತಿ ದ್ಯಾವಣ್ಣನೇ ಗತಿಯಾಗಿದ್ದರು. 18 ತಿಂಗಳ ಹಿಂದೆ ಪತಿ ತೀರಿಕೊಂಡರು. ಸಂಬಂಧಿಕರು
ಇದ್ದೂ ಇಲ್ಲದಂತಿದ್ದಾರೆ. ನಾನೀಗ ಒಬ್ಬಂಟಿಯಾಗಿದ್ದೇನೆ. ರಾಜೋಳಾ ಗ್ರಾಮದ ಚಪ್ಪರದ ಮನೆಯಲ್ಲಿ ವಾಸವಿದ್ದೇನೆ. ಕೃಷಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ.
ಅನ್ನಭಾಗ್ಯ ಯೋಜನೆಯಿಂದ ಉಚಿತವಾಗಿ ಬರುವ 5 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ ತಿಂಗಳ ಗಂಜಿಯಾಗಿದೆ. ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು ಪಿಂಚಣಿ ಬರುತ್ತದೆ ಎಂದು ಗೆಳತಿ ಶರಣಮ್ಮ ಪೂಜಾರಿ ಹೇಳಿದ್ದರಿಂದ ಆಕೆಯೊಂದಿಗೆ ವರ್ಷದಿಂದ ತಹಶೀಲ್ದಾರ ಕಚೇರಿಗೆ ಅಲೆಯುತ್ತಿದ್ದೇನೆ. ಎರಡು ಸಲ ಅರ್ಜಿ ಸಲ್ಲಿಸಿದ್ದೇನೆ. ಅವು ತಿರಸ್ಕಾರಗೊಂಡಿವೆ. ಈಗ ಮತ್ತೆ ಅರ್ಜಿ ಸಲ್ಲಿಸಲು ಹೇಳುತ್ತಿದ್ದಾರೆ. ಅರ್ಜಿ ಕೊಡಲು ಬಂದಿದ್ದೇನೆ. ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದೆ. ಜೂ.1ಕ್ಕೆ ಬನ್ನಿ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ. ರಾಜೋಳಾದಿಂದ ನಾಲವಾರ ನಾಡಕಚೇರಿ ಮತ್ತು ರಾಜೋಳಾದಿಂದ ಚಿತ್ತಾಪುರಕ್ಕೆ ತಿರುಗಾಡಿ ಬೇಸತ್ತಿದ್ದೇನೆ. ನನ್ನ ಸಮಸ್ಯೆ ಯಾರೂ ಕೇಳುತ್ತಿಲ್ಲ ಎಂದು ವಿಧವೆ ಪಾರಮ್ಮಾ ತನ್ನ ಗೋಳು ಹೇಳಿಕೊಂಡರು.
Related Articles
ವೃದ್ಧ ಮಹಿಳೆಯರು ಅರ್ಜಿ ಸಲ್ಲಿಸಲು ವರ್ಷಾನುಗಟ್ಟಲೇ ಕಚೇರಿಗೆ ಅಲೆದರೂ ಒಂದು ಅರ್ಜಿ ಸ್ವೀಕೃತಿ ಆಗದಿರುವುದು
ತಾಲೂಕಿನ ಬೇಜವಾಬ್ದಾರಿ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.
Advertisement
ಮಡಿವಾಳಪ್ಪ ಹೇರೂರ