ಬೆಂಗಳೂರು: ಸದಾಶಿವ ಆಯೋಗದ ವರದಿ ಜಾರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಆಯೋಗದ ವರದಿ ಜಾರಿ ಕುರಿತಂತೆ ಇತ್ತೀಚೆಗೆ ಸಚಿವ ಕೆ.ಎಚ್.ಮುನಿಯಪ್ಪ ನೀಡಿರುವ ಹೇಳಿಕೆ ಭೋವಿ,ಬಂಜಾರ ಕೊರಚ, ಕೊರಮ ಸೇರಿ ಇನ್ನಿತರ ಪರಿಶಿಷ್ಟ ಜಾತಿ ಸಮುದಾಯದ ಆಕ್ರೋಶಕ್ಕೂ ಕಾರಣವಾಗಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅವೈಜ್ಞಾನಿಕ ಸದಾಶಿವ ಆಯೋಗದ ವರದಿ ಜಾರಿಗೆ ಅವಕಾಶ ನೀಡಬಾರದು. ಒಂದು ವೇಳೆ ವರದಿ ಜಾರಿಗೆ ಮುಂದಾದರೆ ಬೀದಿ ಹೋರಾಟಕ್ಕೆ ಕರೆ ಕೊಡಬೇಕಾಗುತ್ತದೆ ಎಂದು ಸಮುದಾಯದ ಮುಖಂಡರು ಎಚ್ಚರಿಸಿದ್ದಾರೆ.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಭಾನುವಾರ ಅರಮನೆ ಮೈದಾನದದಲ್ಲಿ ಹಮ್ಮಿಕೊಂಡಿದ್ದ “ಮೀಸಲಾತಿ ಸಂರಕ್ಷಣಾ ರಾಜ್ಯ ಸಮಾವೇಶ’ದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಪ್ರಕಾಶ್ ರಾಥೋಡ್, ಪರಿಷತ್ತಿನ ಮಾಜಿ ಸದಸ್ಯೆ ಜಲಜಾ ನಾಯ್ಕ, ಶಾಸಕಿ ಮಂಜುಳಾ ಲಿಂಬಾವಳಿ, ಶಾಸಕ ಕೃಷ್ಣನಾಯ್ಕ, ಡಾ.ಚಂದ್ರು ಲಮಾಣಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಪಾಲ್ಗೊಂಡು ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಮುನಿಯಪ್ಪ ಹೇಳಿಕೆಗೆ ಪ್ರಕಾಶ್ ರಾಥೋಡ್ ವಿರೋಧ: ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮತ್ತು ವಿಧಾನ ಪರಿಷತ್ ಸದಸ್ಯ ಪ್ರಕಾಶ್‌ರಾಥೋಡ್, ಕಾನೂನು ಸಲಹೆ ಪಡೆದು ಸದಾಶಿವ ಆಯೋಗದ ವರದಿ ಜಾರಿ ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿದರು.
ಯಾವುದೇ ಕಾರಣಕ್ಕೂ ಅವೈಜ್ಞಾನಿಕ ಸದಾಶಿವ ಆಯೋಗದ ವರದಿ ಜಾರಿಯಾಗಲು ಬಿಡುವುದಿಲ್ಲ. ಒಂದು ವೇಳೆ ಸರ್ಕಾರ ಆಯೋಗದ ವರದಿ ಜಾರಿಗೆ ಮುಂದಾದರೆ ಪಕ್ಷದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಈಗಾಗಲೇ ಸಚಿವ ಮುನಿಯಪ್ಪ ಅವರು ಸದಾಶಿವ ಆಯೋಗದ ವರದಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಅದಕ್ಕೆ ನನ್ನ ವಿರೋಧವಿದೆ. ನಮ್ಮನ್ನು ಮೀಸಲಾತಿ ಪಟ್ಟಿಯಿಂದ ತೆಗೆದುಹಾಕುವ ಕೆಲಸ ನಡೆಯುತ್ತಿದ್ದು ಪರಿಶಿಷ್ಟ ಜಾತಿಗಳೆಲ್ಲರೂ ನಾವೆಲ್ಲರೂ ಒಂದಾಗಬೇಕು. ಪಕ್ಷ ಬೇಧ ಮರೆತು ಶಾಸಕರು ಸಮುದಾಯದ ಪರ ನಿಲ್ಲಬೇಕು ಎಂದು ಹೇಳಿದರು.
ಕೇಂದ್ರ ಸಚಿವ ನಾರಾಯಣ ಸ್ವಾಮಿ ಹೇಳಿಕೆಗೆ ಆಕ್ಷೇಪ: ಬಿಜೆಪಿ ಮುಖಂಡ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಈಗಾಗಲೇ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರು ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶವಿಲ್ಲ ಎಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಸದನದ ಹೊರಗೆ ಸದಾಶಿವ ಆಯೋಗದ ವರದಿ ಜಾರಿ ವಿಚಾರವಾಗಿ ರಾಜಕೀಯ ಬೆರೆಸುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನಂತ ನಾಯ್ಕ ಮಾತನಾಡಿ, ಈಗಾಗಲೇ ಲಮಾಣಿ, ಕೊರಚ, ಕೊರಮ, ಬೋವಿ ಸೇರಿ ಇನ್ನಿತರ ಸಮುದಾಯಗಳು ಪ್ರಯಾಸಪಟ್ಟು ಏಣಿ ಹತ್ತಿವೆ. ನಮ್ಮನ್ನು ಕೆಳಗಿಳಿಸುವ ಪ್ರಯತ್ನ ನಡೆಸಿದರೆ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ರವಿ ಮಾಕಳಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಸಚಿವ ಸಂಪುಟದಲ್ಲಿ ಅನ್ಯಾಯ
ಲಮಾಣಿ ಸಮುದಾಯಕ್ಕೆ 1976ರ ನಂತರ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ, ಇದು ನೋವು ತಂದಿದೆ. ನಮ್ಮ ಸರ್ಕಾರ ಇದನ್ನು ಸರಿಪಡಿಸುವ ನಿರೀಕ್ಷೆಯಿತ್ತು, ಅದು ಕೂಡ ಆಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರದ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಪರಿಷತ್ತಿನ ಸದಸ್ಯ ಪ್ರಕಾಶ ರಾಥೋಡ್ ಹೇಳಿದರು. ಸಮುದಾಯದ ಮುಖಂಡರಿಗೆ ಸಂಸತ್ ಚುನಾವಣೆಯಲ್ಲೂ ಸ್ಪರ್ಧಿಸುವ ಅವಕಾಶ ಸಿಗಬೇಕು. ನಿಗಮ ಮಂಡಳಿ ಮತ್ತು ವಿವಿಧ ಅಕಾಡೆಮಿಗಳಲ್ಲಿ ಕೂಡ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.