ಬಾದಾಮಿ: ಸರಕಾರ ಪ್ರಥಮ ಪಿಯುಸಿ ಪ್ರವೇಶಕ್ಕೆ ಖಾಸಗಿ ಅನುದಾನಿತ ಕಾಲೇಜುಗಳಿಗೆ 80 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಿದೆ. ಇದರಿಂದ ಬಹುತೇಕ ನಗರ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಪ್ರವೇಶಕ್ಕೆ ಪರದಾಡುವಂತಾಗಿದೆ.
ಸರಕಾರ 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 10 ಗ್ರೇಸ್ ಅಂಕ ನೀಡಿದ್ದರಿಂದ ಶೇ. 85 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ, ಇವರೆಲ್ಲರೂ ಕಲಾ ವಿಭಾಗದ ಪ್ರಥಮ ಪಿಯುಸಿಗೆ ಪ್ರವೇಶ ಸಿಗದಂತಾಗಿದೆ.
ಪ್ರವೇಶ ಸಿಗದ ವಿದ್ಯಾರ್ಥಿಗಳು ಭವಿಷ್ಯದ ಚಿಂತೆ ಎದುರಾಗಿದೆ. ಖಾಸಗಿ ಕಾಲೇಜುಗಳು 80ಕ್ಕಿಂತ ಹೆಚ್ಚುವರಿಯಾಗಿ 20ವಿದ್ಯಾರ್ಥಿಗಳ ಪ್ರವೇಶಕ್ಕೆ ಸರಕಾರದಿಂದ ಅನುಮತಿ ಪಡೆಯಲು ಸಮಯಾವಕಾಶವಿತ್ತು. ಆದರೆ, ಅದರ ದಿನಾಂಕವೂ ಸಹಿತ ಮುಗಿದಿದೆ. ಇದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಲ್ಲದೇ ಪ್ರತಿ ವರ್ಷ ಒಂದು ವರ್ಗಕ್ಕೆ 20 ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶ ಪಡೆಯುವ ನಿಯಮವನ್ನು ಇಲಾಖೆ ಮೊಟಕುಗೊಳಿಸಿದೆ. ಸರಕಾರ ಈ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸಿ ಹೆಚ್ಚುವರಿ ವರ್ಗಕ್ಕೆ ಸಲ್ಲಿಸುವ ಪ್ರಸ್ತಾವನೆಯ ದಿನಾಂಕ ವಿಸ್ತರಿಸಿ ವರ್ಗಕ್ಕೆ 20 ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ವಿದ್ಯಾರ್ಥಿಗಳಾದ ಶಂಕ್ರಮ್ಮ ತಳವಾರ, ರಾಘು ಮೇಲಿನಮನಿ, ರವಿ, ಸಂತೋಷ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಸರಕಾರವನ್ನು ಆಗ್ರಹಿಸಿದ್ದಾರೆ.
ಒಂದು ವಿಭಾಗಕ್ಕೆ 80 ವಿದ್ಯಾರ್ಥಿಗಳು ಮಾತ್ರ ಪ್ರವೇಶ ನೀಡಬೇಕು ಎಂಬ ನಿಯಮವಿದೆ. ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳು ಪ್ರವೇಶ ಮಾಡಿಕೊಳ್ಳಬೇಕು ಎಂಬ ಆದೇಶ ಸರಕಾರದಿಂದ ಆಗುವ ನಿರೀಕ್ಷೆ ಇದೆ. ಅನುಮತಿ ನೀಡಿದರೆ ಮಾತ್ರ ಪ್ರವೇಶ ನೀಡಬೇಕು. –
ರಾಮಕೃಷ್ಣ, ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ಬಾಗಲಕೋಟೆ
ಸರಕಾರದ ಆದೇಶದಂತೆ ಈಗ 80 ವಿದ್ಯಾರ್ಥಿಗಳು ಮಾತ್ರ ಪ್ರವೇಶ ನೀಡಬೇಕಿದೆ. ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂ ಧಿಸಿದಂತೆ ಸರಕಾರದ ಆದೇಶದ ನಿರೀಕ್ಷೆಯಲ್ಲಿದ್ದೇವೆ. ಅನುಮತಿ ನೀಡಿದರೆ ಪ್ರವೇಶ ನೀಡುತ್ತೇವೆ.
ಎ.ಆರ್. ನಾಯಕ, ಪ್ರಾಚಾರ್ಯ ಜಿ.ಎಂ. ಕೆ.ಪದವಿ ಪೂರ್ವ ಕಾಲೇಜು ಬಾದಾಮಿ