Advertisement

ಬೈಕ್‌ ರ್ಯಾಲಿಗೆ ಆರಂಭದಲ್ಲೇ ಅಡ್ಡಗಾಲು

12:58 PM Sep 06, 2017 | Team Udayavani |

ಹುಬ್ಬಳ್ಳಿ: ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್‌ ರ್ಯಾಲಿಗೆ ಇಲ್ಲಿನ ಅಂಚಟಗೇರಿ ಸಮೀಪ ತಡೆಯೊಡ್ಡಿದ ಪೊಲೀಸರು ಬಿಜೆಪಿ ನಾಯಕರಾದ  ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

Advertisement

ಬಿಜೆಪಿ ಯುವಮೋರ್ಚಾ ಮಂಗಳೂರಿನಲ್ಲಿ ಸೆ. 7ರಂದು ಹಮ್ಮಿಕೊಂಡ ಪ್ರತಿಭಟನೆಗೆ ಪೂರಕವಾಗಿ ಮಂಗಳವಾರ ಇಲ್ಲಿನ ನೆಹರು ಮೈದಾನದಿಂದ ಆರಂಭಗೊಂಡ ಬೈಕ್‌ರ್ಯಾಲಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. 

ಬೈಕ್‌ ರ್ಯಾಲಿಗೆ ಸೋಮವಾರವೇ ಅನುಮತಿ ನಿರಾಕರಿಸಿದ್ದ ಪೊಲೀಸರು, ಅಂಚಟಗೇರಿ ಸಮೀಪ ರ್ಯಾಲಿ ತಡೆದರಲ್ಲದೆ ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ಎಸ್‌.ಐ. ಚಿಕ್ಕನಗೌಡ್ರ, ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಬಂಧಿಸಿದರು. ಬಸ್‌ಗಳಲ್ಲಿ ಅವರನ್ನು ಕೇಂದ್ರ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆ ತಂದು ನಂತರ ಬಿಡುಗಡೆಗೊಳಿಸಲಾಯಿತು. 

ಸರ್ವಾಧಿಕಾರಿ ಧೋರಣೆ: ಇದಕ್ಕೂ ಮುನ್ನ ಮಾತನಾಡಿದ ಜಗದೀಶ ಶೆಟ್ಟರ, ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಮಾದರಿಯಲ್ಲೇ ಕಾಂಗ್ರೆಸ್‌ ಸರಕಾರ ವರ್ತಿಸುತ್ತಿದ್ದು, ಸರ್ವಾಧಿಕಾರಿ ಧೋರಣೆ ತಾಳಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಸುಮಾರು 18-20 ಹಿಂದೂ ಕಾರ್ಯಕರ್ತರ ಕೊಲೆಯಾಗಿದ್ದು, ಇದನ್ನು ಖಂಡಿಸಿ ಶಾಂತಿಯುತ ಹೋರಾಟಕ್ಕೆ ಬಿಜೆಪಿ ಮುಂದಾಗಿದ್ದರೂ ರಾಜ್ಯ ಸರಕಾರ ಪೊಲೀಸ್‌ ಬಲ ಪ್ರಯೋಗದಿಂದ ಹೋರಾಟ ದಮನ ಯತ್ನ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಕಪ್ಪು ಚುಕ್ಕೆ. ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ನವರು ಬಳ್ಳಾರಿ ಪಾದಯಾತ್ರೆ ಕೈಗೊಂಡಾಗ ಅವರಿಗೆ ರಕ್ಷಣೆ ನೀಡಲಾಗಿತ್ತು.

Advertisement

ಆದರೆ ಇಂದು ಕಾಂಗ್ರೆಸ್‌ ಸರಕಾರ ನಮ್ಮ ಹೋರಾಟ ತಡೆದು ಕೆರಳುವಂತೆ ಮಾಡಿದ್ದು, ಮುಂದಾಗುವ ಅನಾಹುತಗಳಿಗೆ ರಾಜ್ಯ ಸರಕಾರವೇ ಹೊಣೆ ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತ್ಯಕಾಲ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಪ್ರಬಲಗೊಳ್ಳಲಿದೆ. ಮಂಗಳೂರಿನಲ್ಲಿ ನಡೆಯುವ ಪ್ರತಿಭಟನಾ ರ್ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದು, ಸಚಿವ ರಮಾನಾಥ ರೈ ರಾಜೀನಾಮೆ ನೀಡುವವರೆಗೂ ಹೋರಾಟ ನಡೆಯಲಿದೆ ಎಂದರು. 

ದಾವೂದ್‌ ಚಿಕ್ಕಪ್ಪನಂತೆ ಸಿಎಂ ವರ್ತನೆ: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಹೆಚ್ಚುತ್ತಿದ್ದು, ತಡೆಯುವಂತೆ ಒತ್ತಾಯಿಸಲು ಬಿಜೆಪಿ ಮುಂದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಾವೂದ್‌ ಇಬ್ರಾಹಿಂ ಚಿಕ್ಕಪ್ಪನಂತೆ ವರ್ತಿಸುತ್ತಿದ್ದಾರೆ. ಮುಸ್ಲಿಂ ಮತ ಬ್ಯಾಂಕ್‌ ಓಲೈಕೆಗೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಲ್ಲಿ ಭಾಗಿಯಾದ ಆರೋಪವಿರುವ ಕೆಡಿಎಫ್, ಪಿಎಫ್ಐ ಸಂಘಟನೆಗಳ ನಿಷೇಧ ಹಾಗೂ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರೂ ರಾಜ್ಯ ಸರಕಾರದಿಂದ ಕ್ರಮ ಇಲ್ಲವಾಗಿದೆ. ಕೇರಳ ಹಾಗೂ ಪಶ್ಚಿಮ ಬಂಗಾಳ ಮಾದರಿಯಲ್ಲಿ ರಾಜ್ಯದಲ್ಲೂ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸಿ  ಹತ್ಯೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಡಿಸಿಪಿಗಳಾದ ನೇಮಗೌಡ, ಮಲ್ಲಿಕಾರ್ಜುನ ಬಾಲದಂಡಿ, ಎಸಿಪಿ ವಾಸುದೇವ, ಪೊಲೀಸ್‌ ಠಾಣಾಧಿಕಾರಿಗಳು ಸೂಕ್ತ ಬಂದೋಬಸ್ತ್  ಕಲ್ಪಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next