ಗೊರೇಬಾಳ: ಸಿಂಧನೂರಿನ ಕೆರೆಗೆ ಕುಡಿಯುವ ನೀರು ತುಂಬಿಸಲು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹಾಗೂ ನಗರಸಭೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಟ್ಟಿರುವುದರಿಂದ ನಗರದ ಕೆರೆಗೆ ನೀರು ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಎಲ್ಲ ಸಿಬ್ಬಂದಿ 40ನೇ ಉಪಕಾಲುವೆ ಮೇಲೆ ಶುಕ್ರವಾರ ಕಾರ್ಯನಿರತರಾಗಿದ್ದರು.
ಕಾಲುವೆಯುದ್ದಕ್ಕೂ ರೈತರು ತಮ್ಮ ಉಪಕಾಲುವೆಗಳ ಮೂಲಕ ಸಸಿ ಮಡಿಗೆ ನೀರು ಹರಿಸಿಕೊಳ್ಳಲು ಮುಂದಾಗಿದ್ದಾಗ ಖುದ್ದು ಪೌರಾಯುಕ್ತ ವಿರೂಪಾಕ್ಷಮೂರ್ತಿ ಭೇಟಿ ನೀಡಿ ಮನವೊಲಿಸಿ ಕೆರೆಗೆ ನೀರು ಹರಿಸುವಲ್ಲಿ ಸಂಪೂರ್ಣ ಯಶಸ್ವಿಯಾದರು. ನಗರದ ಮೂರ್‌ಮೈಲ್ ಕ್ಯಾಂಪ್‌ನಿಂದ ತುರ್ವಿಹಾಳವರೆಗೆ ಬರುವ ಕಾಲುವೆ ತೂಬುಗಳನ್ನು ಸ್ವತಃ ಪರಿಶೀಲಿಸಿದರು.
ಪ್ರತಿ ತೂಬಿಗೂ ಸಿಬ್ಬಂದಿ ನೇಮಕ ಮಾಡಿ ಯಾವುದೇ ಕಾರಣಕ್ಕೂ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿದ್ದು, ಬಹುಬೇಗ ನೀರು ಕೆರೆ ತಲುಪಲು ನೆರವಾಯಿತು. ನಿರ್ಲಕ್ಷ್ಯ ತೋರಿದ ಕೆಲ ಸಿಬ್ಬಂದಿ ಮೇಲೆ ಮಾತಿನ ಗದಾಪ್ರಹಾರ ನಡೆಸಿ ಸ್ಥಳದಲ್ಲಿಯೇ ಇದ್ದು, ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಿಂಧನೂರು ನಗರದ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬ ಆರೋಪಗಳ ನಡುವೆಯೂ ಪೌರಾಯುಕ್ತ ಅತ್ಯಂತ ಮುತುವರ್ಜಿವಹಿಸಿ ಕೆರೆಗೆ ನೀರು ತುಂಬಿಸಲು ಹರಸಾಹಸ ಪಡುತ್ತಿದ್ದಾರೆ. ಸಿಂಧನೂರು ನಗರದಲ್ಲಿ ಈಗಾಗಲೇ 24ಗಿ7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ.
ಈ ಕಾಮಗಾರಿ ಪೂರ್ಣಗೊಂಡ ನಂತರವೇ ನಾಗರಿಕರಿಗೆ ಪ್ರತಿನಿತ್ಯ ನೀರು ಕೊಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ನೀರಿದ್ದರೂ ವಾರಕ್ಕೊಮ್ಮೆಕೊಡಬಹುದು. ಆದರೂ ಅತ್ಯಂತ ಶ್ರಮವಹಿಸಿ ಇನ್ನೂ ಕೆಲವೇ ದಿನಗಳಲ್ಲಿ ನಾಲ್ಕು ದಿನಕ್ಕೊಮ್ಮೆ ನೀರು ಕೊಡಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ವಿರೂಪಾಕ್ಷಪ್ಪ ತಿಳಿಸಿದರು. ನಗರಸಭೆ ಸದಸ್ಯ ಶರಣಬಸವ ನೆಟೆಕಲ್, ಕಂದಾಯ ಅಧಿಕಾರಿ ಸುಬ್ರಮಣ್ಯಂ, ನೀರು ಪೂರೈಕೆ ವಿಭಾಗದ ಮುಖ್ಯಸ್ಥ ಶೇಖರಪ್ಪ ಇದ್ದರು.