Advertisement

ಗ್ರಾಮ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ಕೊನೆಗಾಣಿಸಲು ಶ್ರಮಿಸಿ: ಯಡಿಯೂರಪ್ಪ

09:17 AM Oct 03, 2019 | Team Udayavani |

ಬೆಂಗಳೂರು: ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಭ್ರಷ್ಟಾಚಾರವನ್ನು ಕೊನೆಗಾಣಿಸಲು ಶ್ರಮಿಸಿ ಪ್ರಾಮಾಣಿಕತೆಯಡೆಗೆ ಅಭಿವೃದ್ಧಿ ಕಡೆಗೆ ಗಮನ ಕೊಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗ್ರಾಮ ಪಂಚಾಯ್ತಿ ಪ್ರತಿನಿಧಿಗಳಿಗೆ ಕರೆ ನೀಡಿದರು.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಗಾಂಧಿ ಜಯಂತಿ ಪ್ರಯುಕ್ತ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಎಷ್ಟರ ಮಟ್ಟಿಗೆ ಶ್ರಮ ವಹಿಸುತ್ತೀರೋ ಅಷ್ಟರ ಮಟ್ಟಿಗೆ ಅಭಿವೃದ್ಧಿಯಾಗುತ್ತದೆ. ಇಲ್ಲದಿದ್ದರೆ ಹಣ ದುರುಪಯೋಗವಾಗುತ್ತದೆ ಎಂದು ಹೇಳಿದರು.

ನಿಮಗೊಂದು ಕಿವಿಮಾತು ಹೇಳುತ್ತೇನೆ. ದಯಮಾಡಿ ನಿಮ್ಮ ಗ್ರಾಮ ಪಂಚಾಯ್ತಿಯಲ್ಲಿ ಹಿರಿಯರ ಸಭೆ ನಡೆಸಿ ಚರ್ಚಿಸಿ. ನಿಮ್ಮ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸಿದ ಊರಿನ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿ. ಪುರಸ್ಕೃತರು ಪ್ರಶಸ್ತಿ ಇಟ್ಟುಕೊಂಡು ಮೈಮರೆಯದೆ ಪೈಪೋಟಿಯಿಂದ ಉತ್ತಮ ಕೆಲಸ ಮಾಡಿ ಇತರರಿಗೆ ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.

ಸ್ವಂತ ಸಂಪನ್ಮೂಲ ಸೃಷ್ಟಿಸಿಕೊಳ್ಳಲು ಆದ್ಯತೆ ಕೊಡಿ
ಮಹಾತ್ವ ಗಾಂಧೀಜಿಯವರು ಪ್ರತಿಪಾದಿಸಿದ ಗ್ರಾಮ ಸ್ವರಾಜ್ಯ ಕಲ್ಪನೆಗೆ ಬದ್ಧರಾಗಿ ಎಲ್ಲ ಸರ್ಕಾರಗಳು ಪಂಚಾಯತ್‌ರಾಜ್‌ ವ್ಯವಸ್ಥೆಗೆ ಸಾಂಸ್ಥಿಕ ರೂಪ ನೀಡುತ್ತಾ ಬಂದಿವೆ. ನಮ್ಮ ಸರ್ಕಾರವು ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಲಪಡಿಸಿ ಮತ್ತಷ್ಟು ಶಕ್ತಿಶಾಲಿಯನ್ನಾಗಿಸಲು ಬದ್ಧವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಅನುದಾನವನ್ನು ಗ್ರಾಮ ಪಂಚಾಯ್ತಿಗಳು ಸಮರ್ಥವಾಗಿ ಬಳಸಿಕೊಂಡು ಗ್ರಾಮೀಣಾಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿವೆ. ಗ್ರಾಮ ಪಂಚಾಯ್ತಿಗಳು ಅವಕಾಶವಿದ್ದಲ್ಲಿ ತಮ್ಮದೇ ಸಂಪನ್ಮೂಲ ಸೃಷ್ಟಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಪಂಚಾಯತ್‌ರಾಜ್‌ ಸಂಸ್ಥೆಗಳ ಆಡಳಿತವನ್ನು ಪಾರದರ್ಶಕಗೊಳಿಸಲು ಕಂಪ್ಯೂಟರ್‌ ಅಪ್ಲಿಕೇಷನ್‌ ವ್ಯವಸ್ಥೆಯನ್ನು ಪೂರ್ಣವಾಗಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ದೃಷ್ಟಿಯಿಂದಲೇ ಗ್ರಾಮ ಪಂಚಾಯ್ತಿಗಳ ಆಸ್ತಿಗಳು ಮತ್ತು ದಾಖಲೆಗಳ ಗಣಕೀಕರಣದತ್ತ ಸರ್ಕಾರ ಹೆಜ್ಜೆ ಇಡುತ್ತಿದೆ. ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಕೆಡಿಪಿ ಸಭೆಯನ್ನು ನಡೆಸುವ ಹೊಣೆಗಾರಿಕೆಯನ್ನು ಹಸ್ತಾಂತರಿಸಿ ಗ್ರಾಮ ಹಂತದಲ್ಲಿ ಇರುವ ಎಲ್ಲ ಸರ್ಕಾರದ ಅಧಿಕಾರಿ, ಸಿಬ್ಬಂದಿ ಸಭೆಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಮ ಹಂತದಲ್ಲಿ ಸರ್ಕಾರದ 29 ಇಲಾಖೆಗಳು ಅನುಷ್ಠಾನಗೊಳಿಸುವ ಯೋಜನೆಗಳು ಫ‌ಲಪ್ರದವಾಗಲು ಗ್ರಾಮ ಪಂಚಾಯ್ತಿಯನ್ನು ಸದೃಢಗೊಳಿಸುವುದು ಇದರ ಉದ್ದೇಶ ಎಂದು ತಿಳಿಸಿದರು.

Advertisement

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ದೇಶದಲ್ಲಿ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಕನಸು ನನಸಾಗಲು ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವತ್ಛ ಭಾರತ, ಫಿಟ್‌ ಇಂಡಿಯಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜತೆಗೆ ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ರಾಜ್ಯದ ಗ್ರಾಮ ಪಂಚಾಯ್ತಿ ಸದಸ್ಯರು, ಅಧ್ಯಕ್ಷರು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ನಾಡಿಗೆ ಕೀರ್ತಿ ಬರಲಿದೆ ಎಂದು ಹೇಳಿದರು.

2018-19ನೇ ಸಾಲಿನ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ 176 ಗ್ರಾಮ ಪಂಚಾಯ್ತಿ ಪ್ರತಿನಿಧಿಗಳಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌. ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮುನಿರಾಜು, ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಎಸ್‌.ವೀರಯ್ಯ, ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ನಾಗಾಂಬಿಕಾ ದೇವಿ, ಪ್ರಧಾನ ಕಾರ್ಯದರ್ಶಿ (ಪಂಚಾಯತ್‌ರಾಜ್‌) ಉಮಾ ಮಹದೇವನ್‌, ಗ್ರಾಮೀಣಾಭಿವೃದ್ಧಿ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಇಲಾಖೆ ನಿರ್ದೇಶಕ (ಪಂಚಾಯತ್‌ರಾಜ್‌- 1) ಎಸ್‌.ಎ. ಅಶ್ರಫ‌ುಲ್‌ ಹಸನ್‌ ಉಪಸ್ಥಿತರಿದ್ದರು.

ಶಾಸಕರು, ಸಂಸದರನ್ನು ಆಯ್ಕೆ ಮಾಡುವ ಮತದಾರರು ದೊಡ್ಡ ಸಂಖ್ಯೆಯಲ್ಲಿರುತ್ತಾರೆ. ಆದರೆ ಗ್ರಾಮ ಪಂಚಾಯ್ತಿಯಲ್ಲಿ ಸೀಮಿತ ಮತದಾರರಿರುತ್ತಾರೆ. ನಿಮ್ಮ ಪ್ರತಿಯೊಂದು ಹೆಜ್ಜೆಯನ್ನು ಜನ ಗಮನಿಸುತ್ತಿರುತ್ತಾರೆ ಎಂಬುದನ್ನು ಮರೆಯಬಾರದು. ಏನೇ ಹೇಳಿದರೂ ನಡೆ, ನುಡಿ, ವ್ಯವಹಾರವನ್ನು ಜನ ಗಮನಿಸುತ್ತಿರುತ್ತಾರೆ ಎಂಬುದು ತಿಳಿದಿರಲಿ.
– ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ವಿಧಾನಸಭಾ ಕ್ಷೇತ್ರ ಬಹಳ ದೊಡ್ಡದು. ಆದರೆ ಗ್ರಾಮ ಪಂಚಾಯ್ತಿ ಬಹಳ ಚಿಕ್ಕದು. ನಾವು ಗೆಲ್ಲುವುದು ಬಹಳ ಸುಲಭ. ನಾವು ನಿಮ್ಮ ಪ್ರಯತ್ನದಿಂದ ನಾವು ಗೆಲ್ಲುತ್ತೇವೆ. ಆದರೆ ನೀವು ಗೆಲ್ಲುವುದು ಕಷ್ಟ. ಸಾಮಾನ್ಯ ಜನರ ಮನಸ್ಸನ್ನು ಗೆದ್ದವರು ನೀವು. ಅದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ.
– ಕೆ.ಎಸ್‌. ಈಶ್ವರಪ್ಪ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next