ಕೆ.ಆರ್.ನಗರ: ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ವರ್ತಮಾನ ಹಾಗೂ ಭವಿಷ್ಯದ ಪೀಳಿಗೆಗೆ ನದಿಗಳಿಂದಾಗುವ ಪ್ರಯೋಜನ ಮತ್ತು ಅವುಗಳ ಅಗತ್ಯದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿಲ್ಪಾ ಸಲಹೆ ನೀಡಿದರು.
ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಕೆ.ಆರ್.ನಗರ ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ನೆಹರು ಯುವ ಕೇಂದ್ರ ಮತ್ತು ಸಂಗೊಳ್ಳಿ ರಾಯಣ್ಣ ಯುವಕ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಜಲ ಹಾಗೂ ಜಲ ಮೂಲಗಳ ಸಂರಕ್ಷಣೆಗಾಗಿ ಶ್ರಮದಾನ ಶಿಬಿರದ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪರಿಸರ ವಿನಾಶ ತಡೆಯಿರಿ: ನದಿಗಳ ಉಗಮ ಸ್ಥಾನ, ಅವುಗಳು ಹರಿಯುವಾಗ ನದಿ ಪಾತ್ರಗಳಲ್ಲಿ ಕೃಷಿ, ನೀರಾವರಿ ಮತ್ತು ಮತ್ತಿತರ ಅನುಕೂಲಗಳಾಗುತ್ತಿದ್ದರೂ ಮನುಷ್ಯನ ಪರಿಸರ ವಿನಾಶ ಮನೋಭಾವದಿಂದ ನದಿಗಳು ಬತ್ತಿ ಹೋಗುತ್ತಿವೆ. ನೀರು ಸಮುದ್ರವನ್ನೇ ಸೇರುತ್ತಿಲ್ಲ. ಇದರಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿದ್ದು, ಇದನ್ನು ತಪ್ಪಿಸುವ ದೃಷ್ಟಿಯಿಂದ ನದಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕೆರೆ ನೀರು ಸಂರಕ್ಷಣೆ: ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ ಮಾತನಾಡಿ, ಮಳೆಯ ನೀರು ಹರಿದು ಕೆರೆಗಳಿಗೆ ಬಂದು ಸೇರುವಂತಾಗಬೇಕು. ಕೆರೆಗಳಿಗೆ ಸೇರಿದ ನಂತರ ಸ್ವತ್ಛತೆ ಕಾಪಾಡಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿ ಜೀವರಾಶಿಗೂ ನೀರು ಅತ್ಯಗತ್ಯವಾಗಿದೆ. ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಕಾಲ ಕಾಲಕ್ಕೆ ಮಳೆ ಬರಲು ಅರಣ್ಯ ಸಂಪತ್ತನ್ನು ಸಂರಕ್ಷಿಸುವುದರ ಜತೆಗೆ ಮರ ಗಿಡಗಳನ್ನು ನೆಟ್ಟು ಪೋಷಿಸಬೇಕು. ಇದರಿಂದ ಜೀವ ಸಂಕುಲದ ಏರುಪೇರು ಇಲ್ಲದೆ ಕಾಲಕ್ಕೆ ತಕ್ಕಂತೆ ಪರಿಸರ ಸಮತೋಲನವಾಗಲಿದೆ ಎಂದು ಹೇಳಿದರು. ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನಾ ಘಟಕದಲ್ಲಿ ಕೇವಲ ಪ್ರಮಾಣ ಪತ್ರಕ್ಕಾಗಿ ಸೇವೆ ಸಲ್ಲಿಸದೇ ಪ್ರಾಮಾಣಿಕತೆಯಿಂದ ಪರಿಸರ ಕಾಳಜಿ ತೋರಬೇಕು. ಆಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಪ್ರಮಾಣ ಪತ್ರ: ಇದೇ ಸಂದರ್ಭದಲ್ಲಿ ಕಳೆದ ಮೂರು ದಿನಗಳಿಂದ ಜಲ ಹಾಗೂ ಜಲ ಮೂಲಗಳ ಸಂರಕ್ಷಣೆಗಾಗಿ ಶ್ರಮದಾನ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಕೋಕಿಲಾ ಪ್ರಮಾಣ ಪತ್ರ ವಿತರಿಸಿದರು. ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಗಳಾದ ಮೋಹನ್, ಪ್ರಿಯಾಂಕ, ರಾಷ್ಟ್ರೀಯ ಯುವ ಸ್ವಯಂ ಸೇವಕ ಎಚ್.ವಿ.ಪುನೀತ್‌ರಾಜ್, ವಲಯ ಅರಣ್ಯಾಧಿಕಾರಿ ಕುಮಾರ್ ಇತರರು ಹಾಜರಿದ್ದರು.