Advertisement

ಎಚ್ಡಿಕೆ ನೇತೃತ್ವದ ಸರ್ಕಾರಕ್ಕೆ ಶ್ರಮಿಸಿ

04:35 PM May 23, 2017 | Team Udayavani |

ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರಕಾರ ರಚನೆ ಆಗಲೇಬೇಕೆನ್ನುವ ನಿಟ್ಟಿನಲ್ಲಿ ಪರಿಶ್ರಮ ಹಾಗೂ ಪ್ರಾಮಾಣಿಕವಾಗಿ ಕಾರ್ಯಕರ್ತರು ಶ್ರಮಿಸುವ ಅವಶ್ಯಕತೆ ಇದೆ ಎಂದು ಜೆಡಿಎಸ್‌ ಪಕ್ಷದ ಧಾರವಾಡ ಜಿಲ್ಲಾ ವೀಕ್ಷಕ ಮರಿಲಿಂಗೇಗೌಡರು ಹೇಳಿದರು. 

Advertisement

ಜೆ.ಸಿ. ನಗರದ ಅಕ್ಕನ ಬಳಗದಲ್ಲಿ ಹುಬ್ಬಳ್ಳಿ ಶಹರ, ಹುಬ್ಬಳ್ಳಿ ಕೇಂದ್ರ, ಗ್ರಾಮೀಣ ಮತ್ತು ತಾಲೂಕು ಘಟಕದ ಕಾರ್ಯಕರ್ತರ ಸಭೆ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿ ಅಧಿಕಾರ ಹಿಡಿಯಲು ನರೇಂದ್ರ ಮೋದಿಯವರು ಏನೆಲ್ಲ ತಂತ್ರಗಾರಿಕೆ, ಪ್ರಚಾರ ಕೈಗೊಂಡರೋ ಅದೇ ಮಾದರಿಯ ಪ್ರಚಾರಕ್ಕೆ ನಾವು ಮುಂದಾಗಬೇಕಾಗಿದೆ. 

ಟಿಕೆಟ್‌ ಇನ್ನಿತರ ಗೊಂದಲಗಳನ್ನು ತಪ್ಪಿಸುವ ನಿಟ್ಟಿನಲ್ಲಿ ವಿಧಾನಸಭೆ ಚುನಾವಣೆಗೆ 10 ತಿಂಗಳು ಕಾಲಾವಕಾಶ ಇರುವಾಗಲೇ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆ ಮಾಡುವುದಾಗಿ ಹೇಳಿದರು. ರಾಜ್ಯ ಸರಕಾರ ರೈತರ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ರೈತರ ಸಾಲಮನ್ನಾ ಮಾಡಲು ಕೇಂದ್ರದತ್ತ ಬೊಟ್ಟು ಮಾಡುತ್ತಿದೆ.

ಆದರೆ ರಾಜ್ಯದ ರೈತರ ಸಾಲವನ್ನು ಕೇಂದ್ರ ಸರಕಾರ ಯಾಕೆ ಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಬೆಂಗಳೂರು ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ನೂರಾರು ಕೋಟಿ ರೂ. ಮೌಲ್ಯದ ಸರಕಾರಿ ಭೂಮಿ ಹಾಗೂ ಕೆರೆಗಳು ಅತಿಕ್ರಮಣಗೊಂಡಿದ್ದು, ಅವುಗಳನ್ನು ತೆರವುಗೊಳಿಸಿ ಸಕ್ರಮ ಮಾಡಿದರೂ ಸರಕಾರಕ್ಕೆ ಸಾವಿರಾರು ಕೋಟಿ ರೂ. ಆದಾಯ ಬರಲಿದೆ.

ಅದೇ ಹಣದಿಂದ ರಾಜ್ಯ ರೈತರ ಸಂಪೂರ್ಣ ಸಾಲಮನ್ನಾ ಮಾಡಬಹುದು ಎಂದು ಸಲಹೆ ನೀಡಿದರು. ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ಪಕ್ಷದಲ್ಲಿ ಶಿಸ್ತು-ಸಂಯಮ ಕಾಯ್ದುಕೊಳ್ಳಬೇಕು. ತಳಮಟ್ಟದದಿಂದ ಪಕ್ಷ ಸಂಘಟನೆ ಮಾಡಿದ್ದೆ ಆದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕನಿಷ್ಠ 45 ಸ್ಥಾನಗಳನ್ನು ಗೆಲ್ಲಬಹುದು.

Advertisement

ಪಕ್ಷದ ಅಭ್ಯರ್ಥಿಗಳ ಆಯ್ಕೆಗಾಗಿ ಮೂರು ಬಾರಿ ಸಮೀಕ್ಷೆ ನಡೆಯಲಿದೆ. ಆನಂತರವಷ್ಟೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಹಾಗಾಗಿ ಟಿಕೆಟ್‌ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರು ಪಕ್ಷವನ್ನು ಕೆಳಮಟ್ಟದಿಂದ ಸಂಘಟಿಸಲು ಕೈಜೋಡಿಸಬೇಕು ಎಂದರು. ಇನ್ನೋರ್ವ ವೀಕ್ಷಕ ಬಿ.ಎಸ್‌. ಚಂದ್ರಶೇಖರ ಮಾತನಾಡಿ, 2018ರ ವಿಧಾನಸಭೆ ಚುನಾವಣೆ ನಿಮಿತ್ತ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ವೀಕ್ಷಕರನ್ನು ನಿಯೋಜಿಸಿದ್ದಾರೆ.

ವೀಕ್ಷಕರು ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷ ಸಂಘಟನೆಗೆ  ಒತ್ತು ನೀಡುವಂತೆ ಮನವರಿಕೆ ಮಾಡಲಿದ್ದಾರೆ.ಎಲ್ಲೆಡೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂಬುದೇ ಒತ್ತಾಸೆಯಾಗಿದೆ. ಆದರೆ, ಹಣ ಹಾಗೂ ಜನ ಬಲ ಹೊಂದಿರುವ ಜಗದೀಶ ಶೆಟ್ಟರ, ಬಿ.ಎಸ್‌. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದು ಸುಲಭದ ಕೆಲಸವಲ್ಲ.

ಆ ನಿಟ್ಟಿನಲ್ಲಿ ಸಂಘಟನೆಯೊಂದಿಗೆ ಚುನಾವಣೆಯಲ್ಲಿ ಹೋರಾಡಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು. ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿದರು. ವಿಜಯ್‌ ಅಳಗುಂಡಗಿ, ಶಿವಣ್ಣ ಹುಬ್ಬಳ್ಳಿ, ಗಂಗಾಧರ ಪೆರೂರ, ದಮಯಂತಿ ಹಂಡಗಿ ಸೇರಿದಂತೆ ಹಲವು ಮುಖಂಡರು ತಮ್ಮ ವಿಚಾರಗಳನ್ನು ವೀಕ್ಷಕರಿಗೆ ತಿಳಿಸಿದರು.

ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ಬಿ.ಗಂಗಾಧರಮಠ, ಧಾರವಾಡ ಜಿಲ್ಲಾಧ್ಯಕ್ಷ ಮುಜಾಯಿದ್‌ ಕಂಟ್ರಾಕ್ಟರ್‌, ರೈತ ಮುಖಂಡ ಗಂಗಾಧರ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ಅಲ್ತಾಫ್‌ ಕಿತ್ತೂರ, ಫ‌ಮೀದಾ ಕಿಲ್ಲೇದಾರ, ನಾಗನಗೌಡ ಪಾಟೀಲ, ಕಿರಣ್‌ ಹಿರೇಮಠ ಸೇರಿದಂತೆ ಮೊದಲಾದವರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next