ಹುಬ್ಬಳ್ಳಿ: ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಏಳು ವಿಧಾನಸಭೆ ಕ್ಷೇತ್ರಗಳ ಬಿಜೆಪಿ ಪ್ರಮುಖರು ಹಾಗೂ ಮುಖಂಡರೊಂದಿಗೆ ಮಹತ್ವದ ಸಭೆ ಶನಿವಾರ ನಗರದಲ್ಲಿ ನಡೆಯಿತು. ಉಪಚುನಾವಣೆಯಲ್ಲಿ ಪಕ್ಷ ನಿರ್ಧರಿಸುವ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಸೂಚಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, 15 ಕ್ಷೇತ್ರಗಳ ಉಪ ಚುನಾವಣೆ ನಿಟ್ಟಿನಲ್ಲಿ ಉ. ಕರ್ನಾಟಕದ 7 ಕ್ಷೇತ್ರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅನರ್ಹ ಶಾಸಕರು ಪಕ್ಷಕ್ಕೆ ಬರುತ್ತಾರೆ ಅಥವಾ ಅವರಿಗೆ ಟಿಕೆಟ್ ನೀಡಬೇಕು ಎಂಬುದರ ಕುರಿತು ಯಾವುದೇ ಚರ್ಚೆ ಆಗಿಲ್ಲ ಎಂದರು.
ಶಾಸಕರ ಅನರ್ಹತೆ ಬಗ್ಗೆ ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಿದ್ದು, ಸದ್ಯದ ಮಟ್ಟಿಗೆ ಈ ಚರ್ಚೆ ಅಪ್ರಸ್ತುತ. ಒಂದು ವೇಳೆ ಸುಪ್ರಿಂ ಅನರ್ಹತೆ ಎತ್ತಿ ಹಿಡಿದರೆ ಅಥವಾ ರಾಜೀ ನಾಮೆ ಅಂಗೀಕರಿಸಿ ಎಂದು ತೀರ್ಪು ನೀಡಿದರೆ ಮಾತ್ರ ಸ್ಥಾನ ಖಾಲಿಯಾಗುತ್ತದೆ. ಹೀಗಾಗಿ, ತೀರ್ಪಿನ ನಂತರ ಎಲ್ಲವೂ ಸ್ಪಷ್ಟವಾಗಲಿದೆ. ರಾಜೀನಾಮೆ ನೀಡಿರುವ ಶಾಸಕರು ಪಕ್ಷಕ್ಕೆ ಬರುವುದಾಗಿ ಹೇಳಿಲ್ಲ. ಅವರಿಗೆ ಟಿಕೆಟ್ ನೀಡಬೇಕು ಎನ್ನುವ ಪ್ರಶ್ನೆ ಸದ್ಯಕ್ಕಿಲ್ಲ ಎಂದರು.
ತೀರ್ಪಿನ ನಂತರ ಅನರ್ಹ ಶಾಸಕರು ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇವೆ.ಅನರ್ಹ ಶಾಸಕರು ಬರುತ್ತಾರೆ ಅಥವಾ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎನ್ನುವ ನಿರೀಕ್ಷೆಯಲ್ಲಿ ನಾವಿಲ್ಲ ಎಂದರು. ಉಪ ಚುನಾವಣೆ ಉಸ್ತುವಾರಿಯನ್ನು ಪಕ್ಷ ನನಗೆ ನೀಡಿದ್ದು, ನ. 4ರೊಳಗೆ ಉಪಚುನಾವಣೆ ನಡೆಯುವ ಕ್ಷೇತ್ರಕ್ಕೆ ಉಸ್ತುವಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷರು ಘೋಷಣೆ ಮಾಡಲಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಉಸ್ತುವಾರಿಯನ್ನು ಎನ್. ರವಿಕುಮಾರ ಅವರಿಗೆ ವಹಿಸಲಾಗಿದೆ ಎಂದರು.
ಉಪ ಸಮಿತಿ ರಚನೆ: ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿ ಸಿದಂತೆ ಉಪ ಸಮಿತಿಗಳನ್ನು ರಚಿಸಲಾಗಿದೆ. 4 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಆಕಾಂಕ್ಷಿಗಳ ಪಟ್ಟಿ ಮಾಡಿ, ರಾಜ್ಯ ಸಮಿತಿಗೆ ಸಲ್ಲಿಸಿದ್ದಾರೆ. ಮುಂದಿನ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ. ಹಾಲಿ ಸದಸ್ಯರಿಗೆ ಟಿಕೆಟ್ ನೀಡಬೇಕು ಅಥವಾ ನೀಡಬಾರದು ಎನ್ನುವ ಮಾತಿಲ್ಲ. ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಲಿಂಬಾವಳಿ ತಿಳಿಸಿದರು.