ಹುಬ್ಬಳ್ಳಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದ ಜೆಡಿಎಸ್ ಪಕ್ಷ ಅತೀ ಹೆಚ್ಚು ಸ್ಥಾನ ಗೆಲ್ಲಬೇಕಾಗಿದ್ದು, ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಜೆ.ಸಿ. ನಗರದ ಅಕ್ಕನ ಬಳಗದಲ್ಲಿ ಹು-ಧಾ ಮಹಾನಗರ ಜಿಲ್ಲಾ ಜೆಡಿಎಸ್ ಘಟಕದಿಂದ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕೆಲಸವಾಗಬೇಕು. ಮುಂಬರುವ ಚುನಾವಣೆಯಲ್ಲಿ ಪಕ್ಷದ ಶಕ್ತಿ ಏನೆಂಬುದನ್ನು ತೋರಿಸಬೇಕು.
ಅದಕ್ಕಾಗಿ ಕಾರ್ಯಕರ್ತರು ಒಗಟ್ಟಿನಿಂದ ಕೆಲಸ ನಿರ್ವಹಿಸಬೇಕು. ಈಗಾಗಲೇ ರಾಜ್ಯದಲ್ಲಿ ಪಕ್ಷಕ್ಕೆ ಉತ್ತಮ ಅವಕಾಶವಿದ್ದು, ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಬೇಕು. ಕಾರ್ಯಕರ್ತರು ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು.
ವಾರ್ಡ್‌ಗಳಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸುವ ಮೂಲಕ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ಬಿಜೆಪಿ- ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖ. ಇದರಿಂದ ಜನರು ಬೇಸತ್ತಿದ್ದು, ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಉಳಿಗಾಲವಿಲ್ಲ.
ಈ ಬಾರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ನತ್ತ ಎಲ್ಲರ ಒಲವು ಇದೆ. ಪಕ್ಷ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಸಂದೇಹ ಇಲ್ಲ. ಆದ್ದರಿಂದ ಕಾರ್ಯಕರ್ತರು ಧೈರ್ಯದಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಹೇಳಿದರು.
ಮಾಜಿ ಶಾಸಕ ಎಂ.ಎಸ್. ಅಕ್ಕಿ, ಮುಖಂಡರಾದ ಮುಜಾಹೀದ್ ಕಾಂಟ್ರ್ಯಾಕ್ಟರ್, ಗಂಗಾಧರ ಪಾಟೀಲ ಕುಲಕರ್ಣಿ, ಗುರುರಾಜ ಹುಣಸಿಮರದ, ಅಲ್ತಾಫ್ ಕಿತ್ತೂರ, ರಾಜು ಅಂಬೋರೆ, ಶ್ರೀಕಾಂತ ಜಮನಾಳ, ಫಮೀದಾ ಕಿಲ್ಲೆದಾರ, ಸುರೇಶ ಹಿರೇಮಠ,
ಈಶ್ವರ ಸಾಣಿಕೊಪ್ಪ, ಇಶಾìದ ಭದ್ರಾಪುರ, ನಾಗರಾಜ ಪಾಟೀಲ, ದಮಯಂತಿ ಅಣ್ಣಿಗೇರಿ, ಗಂಗಾಧರ ಪೆರೂರ, ಕಿರಣ ಹಿರೇಮಠ, ಅಸ್ಲಂ ಗಾಂಜೇವಾಲೆಡ, ನವೀನ ಮುನಿಯಪ್ಪನವರ ಇತರರಿದ್ದರು. ಶ್ರೀಕಾಂತ ಮಗಜಿಕೊಂಡಿ ಸ್ವಾಗತಿಸಿದರು. ನವೀದ ಮುಲ್ಲಾ ನಿರೂಪಿಸಿದರು.