ಹುಬ್ಬಳ್ಳಿ: ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ್ ಅವರು ಅನವಶ್ಯಕವಾಗಿ ತಿರುಗುತ್ತಿದ್ದವರಿಗೆ ಬಿಸಿ ಮುಟ್ಟಿಸಿದರು.
ವೃತ್ತದಲ್ಲಿ ಸುಮಾರು ಹೊತ್ತು ನಿಂತು ಕರ್ತವ್ಯ ನಿರ್ವಹಿಸಿದ ಪೊಲೀಸ್ ಆಯುಕ್ತರು ಅನಗತ್ಯವಾಗಿ ತಿರುಗಾಡುತ್ತಿರುವ ಹಲವು ವಾಹನಗಳನ್ನು ಸೀಜ್ ಮಾಡಿಸಿದರು. ಕೊರೊನಾ ವೈರಸ್ ಎಲ್ಲೆಡೆ ಹೆಚ್ಚಳವಾಗುತ್ತಿದ್ದು, ಈ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳದ ಜನರು ಬೇಕಾಬಿಟ್ಟಿ ತಿರುಗಾಡುತ್ತಿರುವುದನ್ನು ಕಂಡ ಪೊಲೀಸ್ ಆಯುಕ್ತರು, ಯಾವುದೇ ಮುಲಾಜು-ಒತ್ತಡಗಳಿಗೆ ಅವಕಾಶ ನೀಡದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಣ್ಣೀರು ಹಾಕಿದ ಮಹಿಳೆ:
ಬೇಕಾಬಿಟ್ಟಿ ತಿರುಗುವವರ ತಪಾಸಣೆ ಮಾಡುವಾಗ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಕೆಳಗೆ ಇಳಿಸಿ ಆಟೋರಿಕ್ಷಾ ಸೀಜ್ ಮಾಡಲು ಪೊಲೀಸ್ ಆಯುಕ್ತರು ಸೂಚನೆ ನೀಡಿದರು. ಈ ವೇಳೆ ಮಹಿಳೆ ಕಣ್ಣೀರು ಸುರಿಸುತ್ತಾ, ನಾನು ಕುಂದಗೋಳ ಪಪಂ ಉದ್ಯೋಗಿ. ಉದ್ಯೋಗ ನಿಮಿತ್ತ ಹೋಗಲೇಬೇಕು. ಅಧಿಕಾರಿಗಳು ಕೆಲಸಕ್ಕೆ ಬರಬೇಕು ಅಂತ ತಾಕೀತು ಮಾಡಿದ್ದಾರೆ. ನಿತ್ಯ ಬಾಡಿಗೆ ಆಟೋ ಮಾಡಿಕೊಂಡು ಕುಂದಗೋಳಕ್ಕೆ ಹೋಗುತ್ತಿದ್ದೇನೆ. ಆಟೋರಿಕ್ಷಾ ಸೀಜ್ ಮಾಡಿದರೆ ಹೇಗೆ ತೆರಳುವುದು ಎಂದು ಪೊಲೀಸ್ ಆಯುಕ್ತರ ಮುಂದೆ ಅಳಲು ತೋಡಿಕೊಂಡರು. ಸರಕಾರಿ ಉದ್ಯೋಗಿ ಎಂದು ಸರಿಯಾದ ಮಾಹಿತಿ ನೀಡಬೇಕೆಂದು ತಿಳಿಸಿದ ಆಯುಕ್ತರು ಆಟೋರಿಕ್ಷಾ ಬಿಟ್ಟು ಕಳುಹಿಸಿದರು.
ಊಟ ವಿತರಿಸಿದ ಉದ್ಯಮಿ: ಉದ್ಯಮಿ ರಾಜು ಶೀಲವಂತರ ನಗರದಲ್ಲಿ ವಿವಿಧೆಡೆ ಅನಾಥವಾಗಿ ಇದ್ದವರು ಹಾಗೂ ಉದ್ಯೋಗ ನಿಮಿತ್ತ ನಗರಕ್ಕೆ ಬಂದವರಿಗೆ ಪಲಾವ್ ಹಾಗೂ ಕುಡಿಯುವ ನೀರು ವಿತರಣೆ ಮಾಡಿದರು. ಲ್ಯಾಮಿಂಗ್ಟನ್ ರಸ್ತೆ ಸೇರಿದಂತೆ ವಿವಿಧೆಡೆ ಇದ್ದ ನಿರ್ಗತಿಕರಿಗೆ ಊಟ ವಿತರಿಸಲಾಯಿತು.