Advertisement

ತಟ್ಟುತ್ತಿದೆ ಲಾರಿ ಮುಷ್ಕರದ ಬಿಸಿ

11:55 AM Jul 24, 2018 | |

ಬೆಂಗಳೂರು: ಸರಕು ಸಾಗಣೆ ವಾಹನಗಳ ಮುಷ್ಕರ ನಾಲ್ಕು ದಿನ ಪೂರೈಸಿದ್ದು, ದಿನ ಕಳೆದಂತೆ ಮುಷ್ಕರ ತೀವ್ರ ಸ್ವರೂಪ ಪಡೆಯುತ್ತಿದ್ದು, ಅಗತ್ಯ ವಸ್ತು ಸೇರಿದಂತೆ ಸರಕು ಮತ್ತು ಸೇವೆ ಪೂರೈಕೆಯಲ್ಲಿ ಕ್ರಮೇಣ ವ್ಯತ್ಯಯವಾಗಲಾರಂಭಿಸಿದೆ.

Advertisement

ರಾಜಧಾನಿ ಬೆಂಗಳೂರು ಸೇರಿದಂತೆ ಇತರೆಡೆ ಆಹಾರ ಧಾನ್ಯ, ಬೇಳೆಕಾಳುಗಳ ಹಳೆಯ ದಾಸ್ತಾನು ಬಹುತೇಕ ಮಾರಾಟವಾಗಿದ್ದು, ಹೊಸ ದಾಸ್ತಾನು ಪೂರೈಕೆಯಾಗದಿದ್ದರೆ ಅಭಾವ ತಲೆದೋರುವ ಆತಂಕ ಮೂಡಿದೆ. ಇನ್ನೊಂದೆಡೆ ಸಣ್ಣ ಮತ್ತು ಭಾರಿ ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥ ಪೂರೈಕೆಯಲ್ಲೂ ವ್ಯತ್ಯಯವಾಗಿದ್ದು,

ಉತ್ಪಾದನೆ ಇಳಿಕೆಯಾಗುತ್ತಿರುವುದು ಉದ್ಯಮಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸರಕು ಸಾಗಣೆಗೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ನಿವಾರಿಸಲು ಮುಂದಾಗಬೇಕು ಎಂದು ಎಫ್ಕೆಸಿಸಿಐ ಕೇಂದ್ರ ಸರ್ಕಾರವನ್ನು ಕೋರಲು ನಿರ್ಧರಿಸಿದೆ.

ಹೋರಾಟ ತೀವ್ರ: ಕೇಂದ್ರ ಸರ್ಕಾರದಿಂದ ಈವರೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್‌ ಕಾಂಗ್ರೆಸ್‌ ನಿರ್ಧರಿಸಿದೆ. ಈ ನಡುವೆ ಸರಕು ಹೊತ್ತು ಸಾಗುವ ವಾಹನಗಳನ್ನು ಅಲ್ಲಲ್ಲಿ ತಡೆಯುವ ಕಾರ್ಯ ಆರಂಭವಾಗಿದೆ. ಪ್ರವಾಸಿ ವಾಹನ, ಮ್ಯಾಕ್ಸಿಕ್ಯಾಬ್‌ ಮಾಲೀಕರು ಸಹ ವಾಹನ ಸಂಚಾರ ಸ್ಥಗಿತಗೊಳಿಸಿ ಹೋರಾಟದ ತೀವ್ರತೆ ಹೆಚ್ಚಿಸಲು ಚಿಂತಿಸಿದ್ದಾರೆ.

ಟೋಲ್‌ಗ‌ಳಿಂದ ಮುಕ್ತಿ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್‌ ಕಾಂಗ್ರೆಸ್‌ ಶುಕ್ರವಾರದಿಂದ ರಾಷ್ಟ್ರವ್ಯಾಪಿ ಸರಕು ಸಾಗಣೆ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದೆ. ಭಾನುವಾರದವರೆಗೆ ಮುಷ್ಕರದ ತೀವ್ರತೆ ಕಂಡುಬಂದಿರಲಿಲ್ಲ. ಆದರೆ ಸೋಮವಾರದಿಂದ ಹಲವು ಸರಕುಗಳ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು, ಉದ್ಯಮಗಳು, ವ್ಯಾಪಾರ- ವಹಿವಾಟುದಾರರು ಮಾತ್ರವಲ್ಲದೇ ಸಾರ್ವಜನಿಕರಿಗೂ ಮುಷ್ಕರದ ಬಿಸಿ ತಟ್ಟಲಾರಂಭಿಸಿದಂತಿದೆ.

Advertisement

ಕಚ್ಚಾ ಸಾಮಗ್ರಿ ಕೊರತೆ: ಸರಕು ಸಾಗಣೆ ವಾಹನಗಳ ಮುಷ್ಕರದ ಬಿಸಿ ಸೋಮವಾರದಿಂದ ಕೈಗಾರಿಕೆಗಳಿಗೂ ತಟ್ಟಲಾರಂಭಿಸಿದೆ. ಜಿಎಸ್‌ಟಿ ಜಾರಿ ಬಳಿಕ ಬಹುತೇಕ ಉದ್ಯಮಿಗಳು ಅಗತ್ಯವಿರುವಷ್ಟು ಕಚ್ಚಾ ಸಾಮಗ್ರಿಯನ್ನಷ್ಟೇ ಖರೀದಿಸಿ ಬಳಸುತ್ತಿದ್ದಾರೆ. ದಾಸ್ತಾನು ಮಾಡುವ ವ್ಯವಸ್ಥೆ ಸ್ಥಗಿತಗೊಂಡಿದೆ.

ಹಾಗಾಗಿ ಈವರೆಗಿನ ಕಚ್ಚಾ ಸಾಮಗ್ರಿ ದಾಸ್ತಾನು ಬಳಕೆಯಾಗಿದ್ದು, ಮುಷ್ಕರ ಮುಂದುವರಿದರೆ ಕೊರತೆ ತಲೆದೋರುವ ಸಾಧ್ಯತೆ ಇದೆ. ಇದರಿಂದ ಉದ್ಯಮಗಳು ತೀವ್ರ ನಷ್ಟ ಅನುಭವಿಸುವ ಅಪಾಯವಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಉಪಾಧ್ಯಕ್ಷ ಸಿ.ಆರ್‌.ಜನಾರ್ದನ್‌ ಹೇಳಿದರು.

ಸಾವಿರಾರು ಕೋಟಿ ರೂ. ನಷ್ಟ: ಮುಷ್ಕರದಿಂದ ಉದ್ಯಮ, ಕೈಗಾರಿಕೆಗಳಿಗೆ ಮಾತ್ರವಲ್ಲದೇ ಇತರೆ ವ್ಯವಹಾರಗಳಿಗೂ ಹೊಡೆತ ಬೀಳಲಿದೆ. ಮುಷ್ಕರ ಮುಂದುವರಿದರೆ ಉತ್ಪಾದನೆ, ಸಾಗಣೆ, ವಿತರಣೆ, ಮಾರಾಟ ಸರಪಳಿಯಲ್ಲೂ ವ್ಯತ್ಯಯವಾಗಲಿದ್ದು, ನಿತ್ಯ ಸಾವಿರಾರು ಕೋಟಿ ರೂ. ನಷ್ಟವಾಗುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬಿಕ್ಕಟ್ಟು ನಿವಾರಿಸುವಂತೆ ಕೋರಿ ಒಕ್ಕೂಟದ ವತಿಯಿಂದ ಇ-ಮೇಲ್‌ ಮೂಲಕ ಮನವಿ ಮಾಡಲಾಗುವುದು ಎಂದು ಹೇಳಿದರು.

ಸಣ್ಣ ಉದ್ಯಮಕ್ಕೂ ಹೊಡೆತ: ಮುಷ್ಕರದಿಂದಾಗಿ ಭಾನುವಾರದಿಂದಲೇ ಸಣ್ಣ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ಸಣ್ಣ ಉದ್ದಿಮೆದಾರರು ತೊಂದರೆ ಅನುಭವಿಸುವಂತಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ನಿಕಟಪೂರ್ವ ಅಧ್ಯಕ್ಷ ಹನುಮಂತೇಗೌಡ ತಿಳಿಸಿದರು.

ಮುಷ್ಕರ ಮುಂದುವರಿದರೆ ವ್ಯತ್ಯಯ: ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಗೆ ಈವರೆಗೂ ಧಾನ್ಯಗಳ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿಲ್ಲ. ಆದರೆ ಮುಷ್ಕರ ಮುಂದುವರಿದರೆ ಪ್ರಮುಖ ಧಾನ್ಯಗಳ ಕೊರತೆ ತಲೆದೋರುವ ಆತಂಕವಿದೆ.

ರಾಜ್ಯದ ನಾನಾ ಭಾಗ ಹಾಗೂ ಅನ್ಯ ರಾಜ್ಯಗಳಿಂದ ರಾಜ್ಯಕ್ಕೆ ಪೂರೈಕೆಯಾಗುವ ಧಾನ್ಯ, ಬೇಳೆಕಾಳುಗಳ ಪ್ರಮಾಣದಲ್ಲಿ ಕ್ರಮೇಣ ಇಳಿಕೆ ಕಂಡುಬರುತ್ತಿದೆ. ಬೆಂಗಳೂರು ಹೊರತುಪಡಿಸಿ ಇತರೆಡೆ ಮುಷ್ಕರದ ಬಿಸಿ ಈಗಾಗಲೇ ತಟ್ಟಿದೆ ಎಂಬ ಮಾಹಿತಿ ಇದೆ ಎಂದು ಬೆಂಗಳೂರು ಧಾನ್ಯ ವರ್ತಕರ ಸಂಘದ ಉಪಾಧ್ಯಕ್ಷ ಪ್ರಸನ್ನ ಕುಮಾರ್‌ ಹೇಳಿದರು.

ಬೇಡಿಕೆಗೆ ಸ್ಪಂದಿಸುವವರೆಗೆ ಹೋರಾಟ: ಮುಷ್ಕರ ಕರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದಲ್ಲೂ ಸರಕು ಸಾಗಣೆ ಬಹುತೇಕ ಸ್ಥಗಿತಗೊಂಡಿದೆ. ಸೋಮವಾರ ಸೇಲಂ ಬಳಿಯ ತೊಪ್ಪೂರಿನಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು.

ಪ್ರವಾಸಿ ವಾಹನ, ಮ್ಯಾಕ್ಸಿಕ್ಯಾಬ್‌, ಪೆಟ್ರೋಲಿಯಂ ಡೀಲರ್‌ಗಳ ಬೆಂಬಲ ಪಡೆಯುವ ಪ್ರಯತ್ನವೂ ನಡೆದಿದೆ. ಕೇಂದ್ರ ಸರ್ಕಾರ ಈವರೆಗೆ ಮಾತುಕತೆ ಆಹ್ವಾನಿಸದ ಕಾರಣ ಬೇಡಿಕೆ ಈಡೇರಿಸುವವರೆಗೆ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊರ್ಟ್‌ ಕಾಂಗ್ರೆಸ್‌ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಜಿ.ಆರ್‌.ಷಣ್ಮುಖಪ್ಪ ಹೇಳಿದರು.

ಸಂಘ ಸೂಚಿಸಿದರೆ ವಾಹನ ಸಂಚಾರ ಸ್ಥಗಿತ: ಈಗಾಗಲೇ ಸರಕು ಸಾಗಣೆದಾರರ ಮುಷ್ಕರಕ್ಕೆ ಸಂಘದ ವತಿಯಿಂದ ನೈತಿಕ ಬೆಂಬಲ ನೀಡಲಾಗಿದೆ. ಒಂದೊಮ್ಮೆ ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್‌ ಕಾಂಗ್ರೆಸ್‌ ಸೂಚಿಸಿದರೆ ತಕ್ಷಣವೇ ಪ್ರವಾಸಿ ವಾಹನ ಸಂಚಾರ ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸಿದರು.

ತಮಿಳುನಾಡಿನ ಕೆಲವೆಡೆ ಹಾಗೂ ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಲಾರಿಗಳ ಸಂಚಾರಕ್ಕೆ ತುಸು ಅಡ್ಡಿಯಾಗಿತ್ತು. ನಂತರ ಸರಕು ಸಾಗಣೆ ವಾಹನಗಳ ಸಂಚಾರ ಮುಂದುವರಿದಿದೆ. ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್‌ ಕಾಂಗ್ರೆಸ್‌ ಮುಷ್ಕರಕ್ಕೆ ಸಂಘದ ಬೆಂಬಲವಿಲ್ಲ.
-ಬಿ. ಚೆನ್ನಾರೆಡ್ಡಿ, ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next