ಉಪ್ಪಿನಂಗಡಿ: ಖಾಸಗಿ ಬಸ್‌ಗಳು ಸ್ಥಗಿತಗೊಂಡಿರುವುದು ಬಿಟ್ಟರೆ ಉಪ್ಪಿನಂಗಡಿಯಲ್ಲಿ ರಿಕ್ಷಾ, ಜೀಪು, ಟೆಂಪೋ ಹಾಗೂ ಕೆಎಸ್ಸಾರ್ಟಿಸಿ ಬಸ್‌ಗಳು ಎಂದಿನಂತೆ ಸಂಚಾರ ಕೈಗೊಂಡವು. ಇಲ್ಲಿನ ಶ್ರೀಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಮಹಾಶಿವರಾತ್ರಿ ಮಖೆ ಜಾತ್ರೆಯ ರಥೋತ್ಸವ ಹಾಗೂ ಉಪ್ಪಿನಂಗಡಿ ಹೋಬಳಿ ಮಟ್ಟದ ಜನಸಂಪರ್ಕ ಸಭೆಯೂ ಯಶಸ್ವಿಯಾಗಿ ನಡೆಯಿತು.
ದ.ಕ. ಜಿಲ್ಲಾ ಹರತಾಳಕ್ಕೆ ಕರೆ ನೀಡಲಾದ ಹಿನ್ನೆಲೆಯಲ್ಲಿ ಫೆ. 25ರಂದು ಬೆಳಗ್ಗೆ ಒಂದು ಖಾಸಗಿ ಬಸ್ ಮಂಗಳೂರಿಗೆ ಹೊರಟಿದ್ದು ಬಿಟ್ಟರೆ ಮತ್ತೆಲ್ಲ ಖಾಸಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಪ್ರಯಾಣಕ್ಕೆ ಖಾಸಗಿ ಬಸ್ ವ್ಯವಸ್ಥೆಯನ್ನೇ ಅವಲಂಭಿಸಿಕೊಂಡಿರುವ ಮಡಂತ್ಯಾರು, ಕಕ್ಕೆಪದವು, ಬಂದಾರು, ಪದು¾ಂಜ, ತಣ್ಣೀರುಪಂಥ, ಕರಾಯ ಹೀಗೆ ಬೆಳ್ತಂಗಡಿ ತಾಲೂಕಿನ ಕೆಲವು ಭಾಗಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸಮಸ್ಯೆಯಲ್ಲಿ ಸಿಲುಕುವಂತಾಯಿತು.
ಕೆಎಸ್ಸಾರ್ಟಿಸಿ ಬಸ್‌ಗಳು ಇತ್ತಾದರೂ ಅವುಗಳು ಎಂದಿನಂತೆ ಸಂಚರಿಸುತ್ತಿರಲಿಲ್ಲ. ಬಳಿಕ ಬಸ್‌ಗಳಿಗೂ ಪ್ರಯಾಣಿಕರ ಕೊರತೆ ಎದುರಾಯಿತು. ಪೇಟೆಯಲ್ಲಿ ಸಾರ್ವಜನಿಕರ ಕೊರತೆಯಿತ್ತು. ಕೆಲವು ಅಂಗಡಿಗಳನ್ನು ಬೆಳಗ್ಗೆಯಿಂದಲೇ ಮುಚ್ಚಿದ್ದರೆ, ಮಧ್ಯಾಹ್ನವಾಗುತ್ತಲೇ ಹೆಚ್ಚಿನ ಮಾಲಕರು ಅಂಗಡಿಗಳ ಬಾಗಿಲೆಳೆದು ತೆರಳಿದರು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡ ದೂರ ಸಂಚಾರ ಮಾಡುವ ಲಾರಿ ಸೇರಿದಂತೆ ಘನ ವಾಹನಗಳ ಪ್ರಯಾಣ ಇಳಿಮುಖವಾಗಿತ್ತು.
ಕಿಡಿಗೇಡಿ ಕೃತ್ಯ
ಉಪ್ಪಿನಂಗಡಿ-ಪುತ್ತೂರು ರಸ್ತೆಯ ಬೇರಿಕೆ ಎಂಬಲ್ಲಿ ಕಿಡಿಗೇಡಿಗಳು ಕೆಎಸ್ಸಾರ್ಟಿಸಿ ಬಸ್‌ಗೆ ಕಲ್ಲು ಹೊಡೆ ದಿರುವುದು ಬಿಟ್ಟರೆ, ಪೆರಿಯಡ್ಕ, ಕಲ್ಲೇರಿ ಹಾಗೂ ಗಾಂಧಿಪಾರ್ಕ್ ಬಳಿ ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಾಕಲಾಗಿತ್ತು. ಪೆರಿಯಡ್ಕದಲ್ಲಿ ಮಧ್ಯರಾತ್ರಿಯೇ ಕಿಡಿಗೇಡಿಗಳು ಈ ಕೃತ್ಯವೆಸಗಿದಂತೆ ಕಂಡು ಬರುತ್ತಿದ್ದು, ಬೆಳಗ್ಗೆ ಟಯರೆಲ್ಲ ಉರಿದು ಭಸ್ಮವಾಗಿ ಹೋಗಿತ್ತು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಖೆ ಜಾತ್ರೆ ಅಂಗವಾಗಿ ಶನಿವಾರ ಬೆಳಗ್ಗೆ ರಥೋತ್ಸವ ನಡೆಯಿತು. ಇಲ್ಲೂ ಎಂದಿನ ಜನಸ್ತೋಮ ಇಲ್ಲದಿದ್ದರೂ ವಿಜೃಂಭಣೆಯಿಂದಲೇ ರಥೋತ್ಸವ ನಡೆಯಿತು. ಸಿಎ ಬ್ಯಾಂಕ್ ಹಾಲ್‌ನಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಹೋಬಳಿ ಮಟ್ಟದ ಜನಸಂಪರ್ಕ ಸಭೆಗೆ ದೂರದೂರದ ಊರಿನಿಂದಲೂ ಜನರು ಹಕ್ಕುಪತ್ರ ಪಡೆಯಲು ಬಂದಿದ್ದರು. ಹಾಗಾಗಿ ಸಭೆಯಲ್ಲಿ ಜನರ ಭಾಗವಹಿಸುವಿಕೆ ಉತ್ತಮವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅಲ್ಲಲ್ಲಿ ಬಿಗು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.