Advertisement

ಬಿಲ್‌ ಮೂಲಕವೂ ಕರೆಂಟ್‌ ಹೊಡೆಯುತ್ತೆ !

12:30 AM Jan 21, 2019 | |

2006ರ ಜನವರಿಯಲ್ಲಿ ಕೇಂದ್ರ ಸರ್ಕಾರ ದೇಶದ ವಿದ್ಯುತ್‌ ದರ ನೀತಿಯನ್ನು ಜಾರಿಗೊಳಿಸಿತು. ಅಲ್ಲಿಂದ ಮುಂದೆ ದರ ನಿಷ್ಕರ್ಷೆ ಸರ್ಕಾರದ ನಿಯಂತ್ರಣದಿಂದ ಹೊರಗೆ ಬಂದಿತು. ಕಾಯ್ದೆಯ 62ನೇ ಕಲಂ ಈ ವಿದ್ಯುತ್‌ ನಿಯಂತ್ರಣ ಪ್ರಾಧಿಕಾರಕ್ಕೆ ದರ ನಿಗದಿಗೆ ಸಂಬಂಧಿಸಿದಂತೆ ನಿಯಮ, ನಿರ್ದೇಶನಗಳನ್ನು ಕೂಡ ಕಾಲಕಾಲಕ್ಕೆ ಪ್ರಕಟಿಸುವ ಅಧಿಕಾರ ಕೊಟ್ಟಿದೆ.

Advertisement

ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಇಲಾಖೆಗಳು, ವ್ಯವಸ್ಥೆಗಳು ನಿಂತ ನೀರಾಗಿವೆ ಎಂದು ಬಿಡಿಸಿ ಹೇಳಬೇಕಾದ ಅಗತ್ಯವೇ ಇಲ್ಲ. ಸೇವೆ ನೀಡುವಲ್ಲಿ ಸಾಕಷ್ಟು ಬದಲಾವಣೆಗಳು ಕಳೆದ ದಶಕದಿಂದೀಚೆಗೆ ಆಗುತ್ತಿರುವುದನ್ನು ಕಾಣುತ್ತಿದ್ದೇವಾದರೂ ಈ ಹಿಂದಿನ ನಿಧಾನಗತಿಯ ಕಾರಣ, ನಾವು ಇನ್ನಷ್ಟು ವೇಗವನ್ನು ನಿರೀಕ್ಷಿಸುವಂತಾಗಿದೆ. ಈ ಮಾತು ವಿದ್ಯುತ್ಛಕ್ತಿ ಕ್ಷೇತ್ರಕ್ಕೂ ಅನ್ವಯಿಸುವಂತಾಗಿದೆ. ಈ ಹಿಂದೆ ವಿದ್ಯುತ್‌ ಬೆಲೆ ಎಂದು ನಿರ್ಧಾರ ರಾಜ್ಯ ಸರ್ಕಾರಗಳ ಕೈಯಲ್ಲಿದ್ದಾಗ, 50 ಪೈಸೆ ಏರಿಕೆಯ ಗುರಿಯಲ್ಲಿದ್ದ ಸರ್ಕಾರ ಯೂನಿಟ್‌ ಬೆಲೆ ಒಂದು ರೂ. ಏರಿಸುತ್ತಿತ್ತು ನಂತರ ಜನರ ಒತ್ತಾಯಕ್ಕೆ ಮಣಿದಿರುವುದಾಗಿ ವಿಧೇಯತೆ ಪ್ರದರ್ಶಿಸಿ ದರವನ್ನು 50 ಪೈಸೆಗೆ ಇಳಿಸುತ್ತಿದ್ದ ನಾಟಕವನ್ನು ನಾವು ಕುತೂಹಲದಿಂದಲೇ ನೋಡುತ್ತಿದ್ದೆವು.

ಈಗ ಹಾಗಿಲ್ಲ, ವಿದ್ಯುತ್ಛಕ್ತಿ ನಿಯಂತ್ರಣ ಪ್ರಾಧಿಕಾರ ಎಂಬ ವ್ಯವಸ್ಥೆ 2003ರ ಹೊಸ ವಿದ್ಯುತ್‌ ಕಾಯ್ದೆಯನ್ವಯ ಜಾರಿಯಾಗಿ ಕೆಲವು ಬದಲಾವಣೆಗಳಿಗಂತೂ ಕಾರಣವಾಗಿದೆ. ಆದರೆ, ಜನ ಈ ಬಗ್ಗೆ ಗಮನ ಕೊಟ್ಟಿಲ್ಲ. ಕಳೆದ ಕೆಲವು ದಿನಗಳಿಂದ ವಿವಿಧ ಎಸ್ಕಾಂಗಳು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಕೆಇಆರ್‌ಸಿಗೆ ಸಲ್ಲಿಸಿದ ದರ ಏರಿಕೆಯ ಮನವಿ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪುಟಗಟ್ಟಲೆ ಪ್ರಕಟವಾಗಿದೆ. ಸರ್ಕಾರದ ವಶೀಲಿಬಾಜಿಗಳು ಇಂದಿಗೂ ನಡೆಯುತ್ತವೆಯಾದರೂ ವಿದ್ಯುತ್‌ ದರ ಏರಿಕೆಯ ಸರ್ಕಸ್‌ ಈಗ ಸರ್ಕಾರದ್ದಲ್ಲ, ವಿದ್ಯುತ್‌ ಪ್ರಸರಣ ಕಂಪನಿಗಳದ್ದು. ಈ ವ್ಯವಸ್ಥೆಯನ್ನು ಸ್ವಲ್ಪ ಅರ್ಥ ಮಾಡಿಕೊಳ್ಳುವ ಪ್ರಯತ್ನ ಒಳ್ಳೆಯದು.

ಕೆಇಆರ್‌ಸಿ ಮತ್ತು ದರ ನಿಷ್ಕರ್ಷೆ
2003ರ ವಿದ್ಯುತ್‌ ಕಾಯ್ದೆ ವಿದ್ಯುತ್‌ ದರ ನಿಗದಿಪಡಿಸುವ ಅಧಿಕಾರವನ್ನು ಸ್ವತಂತ್ರ ನಿರ್ವಹಣೆಯ ಒಂದು ಪ್ರಾಧಿಕಾರ ಕೇಂದ್ರ ವಿದ್ಯುತ್‌ ಆಯೋಗದ ನೀತಿ ಮಾದರಿಗಳನ್ನು ಅನುಸರಿಸಿ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದೆ. 2006ರ ಜನವರಿಯಲ್ಲಿ ಕೇಂದ್ರ ಸರ್ಕಾರ ದೇಶದ ವಿದ್ಯುತ್‌ ದರ ನೀತಿಯನ್ನು ಜಾರಿಗೊಳಿಸಿತು. ಅಲ್ಲಿಂದ ಮುಂದೆ ದರ ನಿಷ್ಕರ್ಷೆ ಸರ್ಕಾರದ ನಿಯಂತ್ರಣದಿಂದ ಹೊರಗೆ ಬಂದಿತು. ಕಾಯ್ದೆಯ 62ನೇ ಕಲಂ ಈ ವಿದ್ಯುತ್‌ ನಿಯಂತ್ರಣ ಪ್ರಾಧಿಕಾರಕ್ಕೆ ದರ ನಿಗದಿಗೆ ಸಂಬಂಧಿಸಿದಂತೆ ನಿಯಮ, ನಿರ್ದೇಶನಗಳನ್ನು ಕೂಡ ಕಾಲಕಾಲಕ್ಕೆ ಪ್ರಕಟಿಸುವ ಅಧಿಕಾರ ಕೊಟ್ಟಿದೆ.

ಒಂದು ಯೂನಿಟ್‌ನ ಬೆಲೆ ಇಷ್ಟು ಎಂದು ಎಲ್ಲರಿಗೂ ಒಂದೇ ದರ ನಿಗದಿಪಡಿಸುವುದು ತಪ್ಪಾಗುತ್ತದೆ. ಎಲ್ಲರಿಗೂ ಕೊಡುವುದು “ವಿದ್ಯುತ್‌’ ಆಗಿರುವಾಗ ಮನೆ ಬಳಕೆಯವನಿಗೆ ಒಂದು ದರ ಇಟ್ಟು ಅದನ್ನೇ ಕಾರ್ಖಾನೆ ಮಾಲೀಕನಿಗೆ, ಅಂಗಡಿಯ ವ್ಯಾಪಾರಿಗೂ ನಿಗದಿ ಪಡಿಸಿದರೆ? ಅದು ಖಂಡಿತ ಸರಿ ಅನಿಸುವುದಿಲ್ಲ. ಬೆಲೆ ನಿಷ್ಕರ್ಷೆಯಲ್ಲಿ ವರ್ಗೀಕರಣ ಮಾಡಲು ದರ ನೀತಿಯಲ್ಲಿ ಅವಕಾಶವಿದೆ. ಗ್ರಾಹಕನ ಸಂಪರ್ಕ ಸಾಮರ್ಥ್ಯ, ಒಟ್ಟು ಬಳಕೆ, ಸರಬರಾಜಿನ ಸಮಯ, ಗ್ರಾಹಕನ ಭೌಗೋಳಿಕ ಪ್ರದೇಶ, ಸೇವೆಯನ್ನು ಬಳಸಿಕೊಳ್ಳುವುದನ್ನು ಆಧರಿಸಿ ಯೂನಿಟ್‌ ದರ ಬದಲಾಗುತ್ತದೆ. ಹಾಗಾಗೇ, ಮನೆ ಬಳಕೆದಾರನಿಗೆ ಒಂದು ಯೂನಿಟ್‌ ದರ, ಅಂಗಡಿಯವನಿಗೆ ಬೇರೆ, ಕಾರ್ಖಾನೆ ಮಾಲೀಕನಿಗೆ ಬೇರೆ ಎಂಬುದು ನಿಕ್ಕಿಯಾಗಿದೆ. ಎಸ್ಕಾಂ ಭಾಷೆಯಲ್ಲಿ ಎಲ್‌ಟಿ 1, ಎಲ್‌ಟಿ2, ಹೆಚ್‌ಟಿ 4 ಮೊದಲಾದ ವರ್ಗೀಕರಣವನ್ನು ನಾವು ಕಾಣಬಹುದು. 

Advertisement

ಒಂದು ನೆನಪಿರಲಿ, ಒಮ್ಮೆ ವಿದ್ಯುತ್‌ ಆಯೋಗ; ಕರ್ನಾಟಕದಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ, ಹೃಸ್ವವಾಗಿ ಕೆಇಆರ್‌ಸಿ ದರ ನಿಗದಿಪಡಿಸಿ ಆದೇಶ ಹೊರಡಿಸಿತು ಎಂತಾದರೆ, ಮತ್ತೆ ಇನ್ನೊಮ್ಮೆ ಆ ಆರ್ಥಿಕ ವರ್ಷದಲ್ಲಿ ಪ್ರಸರಣ ಕಂಪನಿಗಳು ಬೆಲೆ ಪರಿಷ್ಕರಣಕ್ಕೆ ದುಂಬಾಲು ಬೀಳುವಂತಿಲ್ಲ. ಇಂಧನಗಳಿಗೆ ಅನ್ವಯಿಸುವಂತೆ ಬೀಳುವ ಸರ್‌ಚಾರ್ಜ್‌ಗಳ ವಿಚಾರದಲ್ಲಿ ಆಗುವ ವ್ಯತ್ಯಾಸವನ್ನು ಕಂಪನಿಗಳು ಗ್ರಾಹಕರಿಂದ ಪಡೆಯಲು ಕೆಇಆರ್‌ಸಿಯಿಂದ ಅನುಮತಿ ಕೇಳಬಹುದಷ್ಟೇ.

ವಿದ್ಯುತ್‌ ದರ ನಿಯಂತ್ರಣ ವ್ಯವಸ್ಥೆ
ಕರ್ನಾಟಕದ ವಿಷಯಕ್ಕೆ ಬರುವುದಾದರೆ, ಕೆಇಆರ್‌ಸಿ ಟಾರಿಫ್ ನಿಯಮಗಳು ಜಾರಿಗೆ ಬಂದಿದ್ದು 2000ದಲ್ಲಿ. ಆ ವರ್ಷದ ಜೂನ್‌ 14ರಂದು ರಾಜ್ಯ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಪ್ರಕಟಿಸಿತು. ಅದರ ಪ್ರಕಾರ, ಪ್ರತಿ ಆರ್ಥಿಕ ವರ್ಷದ ಆರಂಭಕ್ಕೆ ಕನಿಷ್ಠ ನಾಲ್ಕು ತಿಂಗಳ ಮುಂಚಿತವಾಗಿ ಆ ವರ್ಷದಲ್ಲಿ ಅದು ನಿರೀಕ್ಷಿಸಿರುವ ಆದಾಯದ ಸಂಪೂರ್ಣ ಲೆಕ್ಕಾಚಾರವನ್ನು ಆರು ಸೆಟ್‌ಗಳಲ್ಲಿ ಮಂಡಿಸಬೇಕು. ಇದನ್ನು ಇಆರ್‌ಸಿ(ಎಕ್ಸ್‌ಪೆಕ್ಟೆಡ್‌ ರೆವೆನ್ಯೂ ಫ್ರಂ ಚಾರ್ಜಸ್‌) ಎನ್ನುತ್ತಾರೆ. ಆಯೋಗ ಇದನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಕೆಇಆರ್‌ಸಿ ಸಲ್ಲಿಕೆಯಾದ 15 ಕೆಲಸದ ದಿನಗಳಲ್ಲಿ ಅದು ಹೆಚ್ಚಿನ ವಿವರಣೆಯನ್ನು ಕೂಡ ಎಸ್ಕಾಂನಿಂದ ಪಡೆಯಬಹುದು. 

ಪ್ರಾಧಿಕಾರದ ಅನುಮತಿ ಪಡೆದ ನಂತರ ಎಸ್ಕಾಂ ದರ ಏರಿಕೆ ಪ್ರಸ್ತಾಪದ ಮುಖ್ಯಾಂಶಗಳನ್ನು ಎರಡು ದಿನ ತಲಾ ಎರಡು ಕನ್ನಡ ಹಾಗೂ ಇಂಗ್ಲೀಷ್‌ ದಿನಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸುತ್ತದೆ. ಈ ಪ್ರಕಟಣೆ ಹೊರಡಿಸಲು ಕೆಲವು ನಿಯಮಗಳಿವೆ. ಸಾಗರ ನಗರಸಭೆಯ ಬೀದಿ ದೀಪದ ಗುತ್ತಿಗೆ ಜಾಹೀರಾತು ಬಳ್ಳಾರಿಯ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗುವ ಕರಾಮತ್ತು ತರಹದ ಉದಾಹರಣೆಗಳಿರುವ ಹಿನ್ನೆಲೆಯಲ್ಲಿ, ಈ ಎಸ್ಕಾಂಗಳು ಪ್ರಕಟಿಸುವ ದರ ಏರಿಕೆ ಪ್ರಸ್ತಾಪದ ಪ್ರಕಟಣೆ, ಆ ಭಾಗದ ಪ್ರಚಲಿತ ದಿನಪತ್ರಿಕೆಯಲ್ಲಿಯೇ ಪ್ರಕಟವಾಗಿರಬೇಕು ಎಂದು ನಿಯಮ ರೂಪಿಸಲಾಗಿದೆ.

ಇದನ್ನು ಗಮನಿಸಿದ ಆಸಕ್ತರು ಆರು ಪ್ರತಿಗಳ ಅಫಿಡೆವಿಟ್‌ ಸಹಿತ ಆಕ್ಷೇಪವನ್ನು ಮೊದಲ ಜಾಹೀರಾತು ಬಂದ 30 ದಿನಗಳೊಳಗೆ ಕೆಇಆರ್‌ಸಿಗೆ ಸಲ್ಲಿಸಬಹುದು. ಆಯೋಗ ಕರೆಯುವ ವಿಚಾರಣಾ ದಿನದಂದು ಖುದ್ದು ಪಾಲ್ಗೊಂಡು ತಮ್ಮ ವಾದ ಮಂಡಿಸಲು ಕೂಡ ಅರ್ಜಿದಾರ ಗ್ರಾಹಕರಿಗೆ ಅವಕಾಶವಿದೆ. ಅದನ್ನು ಅವರು ತಮ್ಮ ಆಕ್ಷೇಪದಲ್ಲಿಯೇ ಸ್ಪಷ್ಟಪಡಿಸಿರಬೇಕಾಗುತ್ತದೆ. ಈ ದರ ವಿಮರ್ಶೆ ಪ್ರಕ್ರಿಯೆಯ ಆರು ಹಂತಗಳ ನಕಾಶೆ ಇದರೊಂದಿಗಿದೆ.

ಇಆರ್‌ಸಿಯ ಪೂರ್ಣ ಪ್ರತಿಯನ್ನು ನಿರ್ದಿಷ್ಟ ಶುಲ್ಕ ಪಾವತಿಸಿ ಎಸ್ಕಾಂನಿಂದ ಪಡೆಯಬಹುದು ಅಥವಾ ಅಂತಜಾìಲದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ನಾವು ಎಸ್ಕಾಂಗಳ ವಿದ್ಯುತ್‌ ಖರೀದಿ, ಟ್ರಾನ್ಸ್‌ಮಿಷನ್‌ ಹಂತದಲ್ಲಾಗುವ ವಿದ್ಯುತ್‌ ನಷ್ಟ, ಸೇವಾ ಗುಣಮಟ್ಟ, ಬಂಡವಾಳ ಹೂಡಿಕೆ ಮುಂತಾದವುಗಳಲ್ಲಿನ ನ್ಯೂನ್ಯತೆಯನ್ನು ದಾಖಲೆ ಸಮೇತ ಬೆಳಕಿಗೆ ತಂದು ವಿದ್ಯುತ್‌ ಏರಿಕೆ ಅಥವಾ ಏರಿಕೆಯ ಪ್ರಮಾಣವನ್ನು ಪ್ರಶ್ನಿಸಬಹುದು. ಖುದ್ದು ವಿಚಾರಣೆಯಲ್ಲಿ ವಿದ್ಯುತ್‌ ಪ್ರಸರಣ ಕಂಪನಿಗೇ ಶಾಕ್‌ ಕೊಡಬಹುದು. ಜನರಿಗೆ ಇಂಥಹದೊಂದು ಸುವರ್ಣಾವಕಾಶ ಸಿಕ್ಕಿರುವಾಗ ಅದನ್ನು ಬಳಸಿಕೊಳ್ಳಬೇಕು.

ದರ ಏರಿಕೆ ವಿಮರ್ಶೆಗೆ ತೂಕ
“ಬಳಸಿಕೊಳ್ಳಬೇಕು’ ಎಂಬ ಮಾತಲ್ಲಿ ತಥ್ಯವಿದೆ. ಆದರೆ ಜನಸಾಮಾನ್ಯರಿಗೆಲ್ಲ ಅವಕಾಶವಿದೆ ಎಂಬುದು ಕೇವಲ ಕ್ಲೀಷೆಯಾಗುತ್ತದೆ. ವಿದ್ಯುತ್‌ ದರ ನಿಷ್ಕರ್ಷೆ ಹತ್ತು ಹಲವು ತಾಂತ್ರಿಕ ಅಂಶಗಳನ್ನು ಒಳಗೊಂಡಿರುತ್ತದೆ. ಎಸ್ಕಾಂನಿಂದ ಕೆಇಆರ್‌ಸಿ ರೂಪಿಸುವಾಗ ದೊಡ್ಡ ತಂತ್ರಜ್ಞರು, ಆರ್ಥಿಕ ತಜ್ಞರ ತಂಡ ಕೆಲಸ ಮಾಡಿರುತ್ತದೆ. ಅದನ್ನು ನಾಗರಿಕ ಪ್ರಶ್ನಿಸಬೇಕು ಎಂದಾಗ ಅವನಿಗಿರುವ ಅತಿ ದೊಡ್ಡ ತೊಡಕು ಮಾಹಿತಿ ಅಥವಾ ದಾಖಲೆಗಳನ್ನು ಸಂಗ್ರಹಿಸುವುದರಲ್ಲಿ ಎದುರಾಗುತ್ತದೆ. ಆರು ಘಂಟೆ ಲೋಡ್‌ ಶೆಡ್ಡಿಂಗ್‌ ಮಾಡಿದರೆ ಮೀಟರ್‌ ಸ್ಥಿರ ಬಾಡಿಗೆಯಲ್ಲಿ ಶೇ. 30ರ ಸೋಡಿ ಕೊಡಬೇಕು ಎಂದರೆ ಆರು ಘಂಟೆ ತೆಗೆಯುವುದಿಲ್ಲ. 5 ಘಂಟೆ 59 ನಿಮಿಷದ ಪವರ್‌ಕಟ್‌ ಮಾತ್ರ ನಮ್ಮದು ಎನ್ನುವ ಕಾಲವಿದು. ಇಂಥ ಜಾಣರ ಎದುರು ವಾದಿಸುವವರನ್ನು ಸಿದ್ಧಪಡಿಸುವ ಅಥವಾ ಅವರಿಗೆ ಸೂಕ್ತ ಬೆಂಬಲ ಕೊಡುವ ವ್ಯವಸ್ಥೆಯನ್ನು ಸೃಷ್ಟಿಸಬೇಕಾಗಿದೆ.

ಪ್ರಶ್ನಿಸುವವರನ್ನು ಸರ್ಕಾರ ಸೃಷ್ಟಿಸಲಿ
ಗ್ರಾಹಕರಿಗೆ ಸಿಗಬೇಕಿರುವ ಸೇವೆಗಳ ಕುರಿತು ದನಿಯೆತ್ತಿ ಪ್ರಶ್ನಿಸುವವರು ಯಾರು ಎಂದು ಪ್ರಶ್ನಿಸುವವರಿಗೆ ಉತ್ತರ ಅಚ್ಚರಿಯಾಗಬಹುದಾದರೂ, ಸರ್ಕಾರವೇ ಅಂಥ ವ್ಯವಸ್ಥೆಯನ್ನು ಹುಟ್ಟುಹಾಕಬೇಕು ಎಂಬುದು ಹೆಚ್ಚು ಅರ್ಥಪೂರ್ಣವಾದುದು. ಈ ರೀತಿ ಮೌಲ್ಯಯುತವಾಗಿ ಪ್ರಶ್ನಿಸುವವರು ನಿರ್ಮಾಣವಾದರೆ ಎಸ್ಕಾಂಗಳ ವ್ಯವಹಾರದ ಒಳಸುಳಿಗಳಿಗೆ ಬ್ರೇಕ್‌ ಬೀಳುತ್ತದೆ, ಗುಣಮಟ್ಟದ ಸೇವೆ ಕೊಡದೆ ಬೆಲೆ ಏರಿಕೆಗೆ ಮುಂದಾದರೆ ಜನ ಅದನ್ನು ಪ್ರಶ್ನಿಸಿ ಕೆಇಆರ್‌ಸಿಯನ್ನು ತಮ್ಮ ಪರ ನಿರ್ಧಾರ ಮಾಡುವಂತೆ ಮಾಡುತ್ತಾರೆ. ಸರ್ಕಾರ ವೈಯುಕ್ತಿಕವಾಗಿ ಪ್ರತ್ಯೇಕ ವ್ಯಕ್ತಿಗಳನ್ನು ತರಬೇತಿಗೊಳಿಸಲು ಸಾಧ್ಯಲ್ಲದಿರುವಾಗ ವಿದ್ಯುತ್‌ ಗ್ರಾಹಕ ಸಂಘಟನೆಗಳನ್ನು ಸಜ್ಜುಗೊಳಿಸಬೇಕು. ಇದಕ್ಕಾಗಿ ಅವಶ್ಯ ಹಣಕಾಸು ಹಾಗೂ ಸಂಪನ್ಮೂಲ ವ್ಯಕ್ತಿ, ವ್ಯವಸ್ಥೆಗಳನ್ನು ಒದಗಿಸಬೇಕು.

ಪ್ರಸ್ತುತ ಎಸ್ಕಾಂಗಳ ದರ ಏರಿಕೆ ಪ್ರಸ್ತಾಪಕ್ಕೆ ವಿವಿಧ ಜನ, ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗುತ್ತದೆ. ಉದ್ಯಮ ಮಂದಿಯ ಆಕ್ಷೇಪಗಳು ತಮ್ಮ ಮೇಲಾಗುವ ಏರಿಕೆಯನ್ನು ತಡೆಯುವ ಪ್ರಯತ್ನ ಮಾಡುತ್ತಾರೆ, ಪರಿಣತರಿಂದ ಮಾಡಿಸುತ್ತಾರೆ. ಆದರೆ, ಅವರಿಗೆ ಸಂಸ್ಥೆಯ ನೀತಿಯಿಂದ ಜನಸಾಮಾನ್ಯ, ರೈತ, ಗ್ರಾಮೀಣ ಮಂದಿ ಮುಂತಾದ ನಿರ್ಲಕ್ಷಿತ ವಲಯದವರಾದರೆ ಅವರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಸಂಸ್ಥೆಯ ಆಡಳಿತ, ತಾಂತ್ರಿಕ ವ್ಯತ್ಯಯಗಳಿಗೆ ಅವರು ತಲೆಹಾಕುವುದಿಲ್ಲ. ಈ ಕಾರಣಕ್ಕಾಗಿಯೇ ಜನಸಾಮಾನ್ಯರ ಪರ ನಿಲ್ಲುವ ವ್ಯವಸ್ಥೆ ಬೇಕು. ಇಲ್ಲದಿದ್ದರೆ ಈಗಿನಂತೆ ಎಸ್ಕಾಂಗಳು ವರ್ಷಕ್ಕೊಮ್ಮೆ ದರ ಏರಿಕೆ ಪ್ರಸ್ತಾಪ ಸಲ್ಲಿಸುತ್ತವೆ. ಅದು ಸಾರಾಸಗಟಾಗಿ ಜಾರಿಯಾಗದಿದ್ದರೂ ಪ್ರಬಲ ಪ್ರತಿವಾದವಿಲ್ಲದ ಕಾರಣ ಎಸ್ಕಾಂಗಳ ದರ ಪರಿಷ್ಕರಣ ಸಲಹೆಯ ಬಹುಪಾಲು, ಸೇವೆಯ ಗುಣಮಟ್ಟ, ನಿರ್ವಹಣೆಯ ಎಡವಟ್ಟುಗಳನ್ನು ಮರೆಮಾಚಿ ಜಾರಿಗೆ ಬರುತ್ತದೆ. ಹಾಗಾಗಬೇಕೆ?

– ಮಾ.ವೆಂ.ಸ.ಪ್ರಸಾದ್‌
ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next