Advertisement

ಆರನೇ ದಿನಕ್ಕೆ ಕಾಲಿಟ್ಟ ಮುಷ್ಕರ: ಎಲ್ಲೆಡೆ ಕಸ

11:38 AM Oct 09, 2018 | Team Udayavani |

ಮೈಸೂರು: ಸರ್ಕಾರ ಹಾಗೂ ಜಿಲ್ಲಾಡಳಿತದ ಮನವೊಲಿಕೆ ಕಸರತ್ತಿನ ನಡುವೆಯೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ನಡೆಸುತ್ತಿರುವ ಮುಷ್ಕರ ಹಲವರ ಬೆಂಬಲದ ನಡುವೆ ಆರನೇ ದಿನವೂ ಮುಂದುವರಿಯಿತು. 

Advertisement

ಕಳೆದ ಐದು ದಿನಗಳಿಂದ ನಗರ ಪಾಲಿಕೆ ಕಚೇರಿ ಎದುರು ಮುಷ್ಕರ ನಡೆಸುತ್ತಿರುವ ಪೌರಕಾರ್ಮಿಕರ ಹೋರಾಟಕ್ಕೆ ಸೋಮವಾರ ರಾಜಕೀಯ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಬೆಂಬಲ ನೀಡಿದರು. ಪೌರಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿದ್ದು, ಕಸದ ಸಮಸ್ಯೆ ದ್ವಿಗುಣಗೊಂಡು ಆಶುಚಿತ್ವದ ನಡುವೆಯೇ ದಸರಾ ಉದ್ಘಾಟನೆ ಆಗುವ ಸಾಧ್ಯತೆ ಇದೆ. 

ದಸರೆ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದ ಜತೆಗೆ ನಗರದ ಸ್ವತ್ಛತೆಗೂ ಭಾರೀ ಪೆಟ್ಟು ಬಿದ್ದಿದೆ. ಈ ನಡುವೆ ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿರುವ ಕಾಯಂ ಪೌರಕಾರ್ಮಿಕರು ನಗರದ ಪ್ರಮುಖ ಕಡೆಗಳಲ್ಲಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. 

ಸಾಮಾನ್ಯ ದಿನಗಳಲ್ಲಿ ಮೈಸೂರು ನಗರ ಭಾಗದಲ್ಲಿ ಪ್ರತಿನಿತ್ಯ 400 ಟನ್‌ ಕಸ ಸಂಗ್ರಹಣೆಯಾಗುತ್ತದೆ. ಆದರೆ, ಕಳೆದ ಆರು ದಿನಗಳಿಂದ ಅಂದಾಜು 2400 ಟನ್‌ ಕಸ ಸಂಗ್ರಹವಾಗಿದ್ದು, ಕಾಯಂ ನೌಕರರು ಶೇ.70 ಕಸವನ್ನು ವಿಲೇವಾರಿ ಮಾಡಿದ್ದಾರೆ. ಆದರೆ, ದಸರೆಯಲ್ಲಿ ನಿತ್ಯ 800 ಟನ್‌ ಕಸ ಸಂಗ್ರಹವಾಗುವ ಸಾಧ್ಯತೆ ಇದ್ದು, ಒಂದೊಮ್ಮೆ ಸರ್ಕಾರದ ಮಾತುಕತೆ ವಿಫ‌ಲವಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ

ಕಾಯಂ ನೌಕರರು ಪ್ರತಿಭಟನೆಯನ್ನು ಬೆಂಬಲಿಸಿದರೆ ಕಸದ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ. ಈ ಹಿನ್ನೆಲೆಯಲ್ಲಿ ನಗರಪಾಲಿಕೆ ಯಂತ್ರೋಪಕರಣಗಳ ಮೂಲಕ ನಗರದ ಸ್ವತ್ಛತೆ ಮಾಡಲು ಮುಂದಾಗಿದ್ದು, ಸ್ವಯಂ ಸೇವಕರ ಮೂಲಕವೂ ಸ್ವತ್ಛತಾ ಕಾರ್ಯವನ್ನು ನಡೆಸುವ ಮೂಲಕ ಪರ್ಯಾಯ ಮಾರ್ಗ ಕಂಡುಕೊಳ್ಳಲು ಚಿಂತನೆಗಳನ್ನು ನಡೆಸಿದೆ. 

Advertisement

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದರು.

ಆದರೆ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಇದರಿಂದ ನಗರದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಇಲ್ಲದಿದ್ದಲ್ಲಿ ಜಂಬೂಸವಾರಿ ಮೆರವಣಿಗೆಯನ್ನು ತಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

 ಪ್ರತಿಭಟನೆಯಲ್ಲಿ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಮುಡುಕುತೊರೆ ಶಾಖಾ ಮಠದ ಸಿದ್ದರಾಮ ಸ್ವಾಮೀಜಿ, ಬೆಂಗಳೂರಿನ ಮಹಾಬೋದಿ ಸೊಸೈಟಿಯ ಪ್ರಕಾಶ್‌ ಬಂತೇಜಿ ಸ್ವಾಮೀಜಿ, ಛಲವಾದಿ ಗುರುಪೀಠದ ನಾಗದೇವಸ್ವಾಮೀಜಿ, ಬಿಜೆಪಿ ಮುಖಂಡ ಕೆ.ಶಿವರಾಮ್‌, ರೈತ ಹೋರಾಟಗಾರ ಬೊಕ್ಕಳ್ಳಿ ನಂಜುಂಡಸ್ವಾಮಿ ಮತ್ತಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next