Advertisement

ಅತಿಥಿ ಉಪನ್ಯಾಸಕರ ಮುಷ್ಕರ-ವಿದ್ಯಾರ್ಥಿಗಳಿಗೆ ಸಂಕಷ್ಟ

05:00 PM Jan 07, 2022 | Team Udayavani |

ಹಾವೇರಿ: ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ಕುಂಠಿತಗೊಂಡ ನಂತರದ ದಿನಗಳಿಂದ ಸರ್ಕಾರಿ ಪದವಿ ಕಾಲೇಜುಗಳು ಕಾರ್ಯಾರಂಭ ಮಾಡಿದ್ದು, ಬಹುತೇಕ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡು ತರಗತಿ ನಡೆಸಲಾಗುತ್ತಿದೆ. ಆದರೆ, ಕಳೆದ 26 ದಿನಗಳಿಂದ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಠಾವಧಿ  ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ಸರ್ಕಾರ ಹಾಗೂ ಅತಿಥಿ ಉಪನ್ಯಾಸಕರ ನಡುವಿನ ಹೋರಾಟದಲ್ಲಿ ವಿದ್ಯಾರ್ಥಿಗಳು ಬಿದಿಗೆ ಬಿಳುವಂತಾಗಿದೆ.

Advertisement

ರಾಜ್ಯದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಅವುಗಳಲ್ಲಿ ಶೇ.30ರಷ್ಟು ಖಾಯಂ ಉಪನ್ಯಾಸಕರಿದ್ದರೆ, ಶೇ.70ರಷ್ಟು ಅತಿಥಿ ಉಪನ್ಯಾಸಕರಿಂದಲೇ ತರಗತಿಗಳನ್ನು ನಡೆಸುವ ಪರಿಸ್ಥಿತಿ ಇದೆ. ಕೋವಿಡ್‌ ಎರಡನೇ ಅಲೆ ಕುಂಠಿತಗೊಂಡ ನಂತರದ ದಿನಗಳಲ್ಲಿ ಸರ್ಕಾರ ಪದವಿ ಕಾಲೇಜುಗಳನ್ನು ಪುನರಾರಂಭಿಸಲಾಗಿದೆ. ಕೆಲ ಕಾಲೇಜುಗಳಲ್ಲಿ ಪ್ರಾಂಶುಪಾಲರನ್ನು ಹೊರತುಪಡಿಸಿದರೆ ಖಾಯಂ ಉಪನ್ಯಾಸಕರೇ ಇಲ್ಲ. ಕೆಲವೆಡೆ ಕಾಲೇಜುಗಳಲ್ಲಿ ಒಂದಿಷ್ಟು ಉಪನ್ಯಾಸಕರಿದ್ದರೂ ಪ್ರಮುಖ ವಿಷಯದ ಉಪನ್ಯಾಸಕರ ಕೊರತೆ ಸಾಕಷ್ಟಿದೆ.

ಇಂತಹ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ಪಾಠ ಪ್ರವಚನಕ್ಕೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಅತಿಥಿ ಉಪನ್ಯಾಸಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು ಎಂಬ ಕೂಗು ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿದೆ.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೆಟ್ಟು: ಕೊರೊನಾ ಮಹಾಮಾರಿಯಿಂದಾಗಿ ಸುದೀರ್ಘ‌ ಅವಧಿಯ ಬಳಿಕ ಕಾಲೇಜು ಆರಂಭವಾಗಿರುವುದರಿಂದ ಹೊಸ ಹುಮ್ಮಸ್ಸಿನೊಂದಿಗೆ ವಿದ್ಯಾರ್ಥಿಗಳು ಕಾಲೇಜಿಗೆ ಬಂದರೆ, ಕಲಿಸಲು ಉಪನ್ಯಾಸಕರಿಲ್ಲದೇ ಆವರಣದಲ್ಲಿ ಹರಟೆ ಹೊಡೆದು ಮನೆಗಳಿಗೆ ತೆರಳುವಂತಾಗಿದೆ. ಉಳ್ಳವರು ಖಾಸಗಿ ಕಾಲೇಜುಗಳಿಗೆ ತೆರಳಿದರೆ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳೇ ಅಧ್ಯಯನ ಮಾಡುವುದು ಹೆಚ್ಚು. ಆದರೆ, ಕಳೆದ 26
ದಿನಗಳಿಂದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಬಡ ಪದವಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶೈಕ್ಷಣಿಕ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬಡ ಮಕ್ಕಳ ಶಿಕ್ಷಣಕ್ಕೆ ಪೆಟ್ಟು ಬೀಳುತ್ತಿದೆ.

ಸೇವಾ ಭದ್ರತೆಗೆ ಒತ್ತಾಯ: ಜಿಲ್ಲೆಯಲ್ಲಿ 13 ಸರ್ಕಾರಿ ಪದವಿ ಕಾಲೇಜುಗಳಿದ್ದು, ಸುಮಾರು 400ಕ್ಕೂ ಅಧಿ ಕ ಮಂದಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಸೇವಾ ಭದ್ರತೆ ಇಲ್ಲದೇ ಅತಿಥಿ ಉಪನ್ಯಾಸಕರು ಸಮಸ್ಯೆ ಅನುಭವಿಸುವಂತಾಗಿದೆ. ಕಳೆದ 15-20 ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಹಲವರು ಪಿಎಚ್‌ಡಿ, ಸೆಟ್‌ ಹಾಗೂ ನೆಟ್‌ ಪರೀಕ್ಷೆಗಳನ್ನು ಪಾಸಾಗಿದ್ದು, ಯುಜಿಸಿ ನಿಯಮಾವಳಿ ಪ್ರಕಾರ ವಿದ್ಯಾರ್ಹತೆ ಹೊಂದಿದ್ದಾರೆ. ಇವರನ್ನು ಖಾಯಂಗೊಳಿಸಲು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು. ಅಲ್ಲದೇ, ಪಶ್ಚಿಮ ಬಂಗಾಳ ಮಾದರಿಯನ್ನು ರಾಜ್ಯದಲ್ಲಿ ಜಾರಿಗೊಳಬೇಕು ಎಂಬುದು ಅತಿಥಿ ಉಪನ್ಯಾಸಕರ ಆಗ್ರಹವಾಗಿದೆ.

Advertisement

ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಸೇವಾ ಭದ್ರತೆ, ಕನಿಷ್ಟ ವೇತನ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತರಗತಿಗಳನ್ನು ಅನಿರ್ದಿಷ್ಠಾವಧಿವರೆಗೆ ಬಹಿಷ್ಕರಿಸಿದ್ದಾರೆ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರ ಆದಷ್ಟು ಬೇಗ ಅತಿಥಿ ಉಪನ್ಯಾಸಕರ ಬೇಡಕೆಗಳಿಗೆ ಸ್ಪಂದಿಸಿ ವಿದ್ಯಾರ್ಥಿಗಳ ಪಾಠ-ಪ್ರವಚಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು.
ಬಸವರಾಜ ಭೋವಿ, ಎಸ್‌ಎಫ್‌ಐ ಜಿಲ್ಲಾ
ಸಹ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next