Advertisement

ಮುಷ್ಕರ ನಿರ್ಧಾರ ಕೈ ಬಿಡದ ಕಾರ್ಮಿಕರು

02:55 PM Nov 20, 2018 | |

ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಹೊಸ ವೇತನ ಒಪ್ಪಂದದ ಮಾತುಕತೆ ಮುಗಿದು ಐದು ತಿಂಗಳು ಗತಿಸಿದರೂ ಇನ್ನೂ ಹೊಸ ವೇತನ ಜಾರಿಯಾಗದ್ದರಿಂದ ಕಾರ್ಮಿಕ ಸಂಘದ ಮುಖಂಡರು ಕಾರ್ಮಿಕರ ಸಂಘದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದಂತೆ ಗಣಿ ಆಡಳಿತ ವರ್ಗಕ್ಕೆ ಮುಷ್ಕರ ಕೈಗೊಳ್ಳುವ ಕುರಿತು ನ.9ರಂದು ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ರವಿವಾರ ಕಂಪನಿ ಅಧಿಕಾರಿಗಳು ಕಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸಿದರು.

Advertisement

ಕಾರ್ಮಿಕ ಮುಖಂಡರು ಮತ್ತು ಚಿನ್ನದ ಗಣಿ ಕಂಪನಿ ಅಧಿಕಾರಿಗಳ ಮಧ್ಯೆ ನಡೆದ ಮಾತುಕತೆ ಫಲಪ್ರದವಾಗಿಲ್ಲ. ಸ್ಥಳೀಯ ಮಟ್ಟದಲ್ಲಿ ಕಾರ್ಮಿಕರ ಹೊಸ ವೇತನ ಒಪ್ಪಂದ ಚರ್ಚೆ ನಡೆದು ಅಂತಿಮಗೊಳಿಸಲಾಗಿದೆ. ಸದ್ಯ ಆ ಒಪ್ಪಂದಕ್ಕೆ ಬಳ್ಳಾರಿಯ ಆರ್‌ಎಲ್‌ಸಿ (ಕೇಂದ್ರ)ಯವರ ಸಮಕ್ಷಮದಲ್ಲಿ ಸಹಿ ಹಾಕುವುದು ಬಾಕಿ ಇದೆ.

ಒಪ್ಪಂದಕ್ಕೆ ಸಹಿ ಹಾಕುವವರೆಗೆ ನಮ್ಮ ಮುಷ್ಕರದ ನೋಟಿಸ್‌ನ್ನು ಹಿಂಪಡೆಯುವುದಿಲ್ಲವೆಂದು ಕಾರ್ಮಿಕ ಸಂಘದ ಮುಖಂಡರು, ಗಣಿ ಆಡಳಿತ ವರ್ಗಕ್ಕೆ ಸ್ಪಷ್ಟಪಡಿಸಿದ್ದಾರೆ.

ವೇತನ ಒಪ್ಪಂದ ಮಾತುಕತೆ ಅಂತಿಮಗೊಂಡರೂ ಅದಕ್ಕೆ ಕಂಪನಿ ನಿರ್ದೇಶಕ ಮಂಡಳಿ ಅನುಮೋದನೆ ಬೇಕು. ಇದಾದ
ನಂತರ ಸರಕಾರದಿಂದಲೂ ಒಪ್ಪಿಗೆ ಪಡೆಯಬೇಕು. ಈ ಎರಡೂ ಪ್ರಕ್ರಿಯೆಗಳು ಮುಗಿಯದೆ ವೇತನ ಒಪ್ಪಂದಕ್ಕೆ ಸಹಿ ಮಾಡಲು ಸಾಧ್ಯವಿಲ್ಲ. ಆದಷ್ಟು ಶೀಘ್ರವಾಗಿ ಈ ಎರಡು ಪ್ರಕ್ರಿಯೆಗಳನ್ನು ಮುಗಿಸಿ ಒಪ್ಪಂದಕ್ಕೆ ಸಹಿ ಹಾಕೋಣ. ಅದಕ್ಕಾಗಿ ಇನ್ನೊಂದಿಷ್ಟು ಕಾಲಾವಕಾಶ ಬೇಕಾಗುತ್ತದೆ.

ಮುಷ್ಕರಕ್ಕಿಳಿಯದೆ ಸಹಕರಿಸಬೇಕೆಂದು ಗಣಿ ಆಡಳಿತ ಅಧಿಕಾರಿಗಳು ವಿನಂತಿಸಿದರು. ಆದರೆ ಇದಕ್ಕೆ ಕಾರ್ಮಿಕ ಸಂಘದ ಮುಖಂಡರು ಒಪ್ಪದೆ, ಈಗಾಗಲೆ ಸಾಕಷ್ಟು ಸಮಯ ಹಾಳಾಗಿದೆ. ಮುಷ್ಕರಕ್ಕಿಳಿಯುವ ನಮ್ಮ ನಿರ್ಧಾರ ಅಚಲವಾಗಿದೆ ಎಂದು ತಿಳಿಸಿದ್ದಾರೆ. ಮಾತುಕತೆಯಲ್ಲಿ ಗಣಿ ಆಡಳಿತ ವರ್ಗದಿಂದ ಪ್ರಧಾನ ವ್ಯವಸ್ಥಾಪಕ (ಸಮನ್ವಯ) ಡಾ| ಪ್ರಭಾಕರ ಸಂಗೂರಮಠ, ಮುಖ್ಯ ಆಡಳಿತಾಧಿಕಾರಿ ಡಾ| ಜಗದೀಶ ನಾಯ್ಕ, ವ್ಯವಸ್ಥಾಪಕ (ಮಾಸ) ಯಮನೂರಪ್ಪ, ಕಾರ್ಮಿಕ ಸಂಘದಿಂದ ಮುಂಡರಾದ ಆರ್‌.ಮಾನಸಯ್ಯ, ವಾಲೇಬಾಬು, ಮಹ್ಮದ್‌ ಅಮೀರಅಲಿ ಸೇರಿ ಇತರರು ಇದ್ದರು.

Advertisement

ಮುಷ್ಕರ ನಿರ್ಧಾರ ಕೈ ಬಿಡದ ಕಾರ್ಮಿಕರು ಶಾಸಕರ ಮನವೊಲಿಕೆಗೆ ಜಗ್ಗದ ಮುಖಂಡರು 
 ಹಟ್ಟಿ ಚಿನ್ನದ ಗಣಿ: ಚಿನ್ನದ ಗಣಿ ಕಂಪನಿ ಕಾರ್ಮಿಕರ ಹೊಸ ವೇತನ ಜಾರಿ ಸಂಬಂಧ ಟಿಯುಸಿಐ ಕಾರ್ಮಿಕ ಸಂಘದ ಮುಖಂಡರು ಆಡಳಿತ ಮಂಡಳಿಗೆ ಮುಷ್ಕರದ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಶಾಸಕ ಡಿ.ಎಸ್‌. ಹೂಲಗೇರಿ ಮಧ್ಯಸ್ಥಿಕೆಯಲ್ಲಿ ಕಂಪನಿ ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘದ ಮುಖಂಡರ ಸಭೆ ನಡೆಯಿತು.

ಈ ವೇಳೆ ಶಾಸಕ ಡಿ.ಎಸ್‌. ಹೂಲಗೇರಿ ಮಾತನಾಡಿ, ಕಾರ್ಮಿಕರ ಬೇಡಿಕೆ ಈಡೇರಿಸಲು ಗಣಿ ಸಚಿವರ ಬಳಿ ಖುದ್ದಾಗಿ ತೆರಳಿ ಚರ್ಚಿಸಿ ಶೀಘ್ರದಲ್ಲಿ ಹೊಸ ವೇತನ ಒಪ್ಪಂದ ಜಾರಿಗೆ ಅನುಮೋದನೆ ಪಡೆದುಕೊಂಡು ಬರುವೆ. ಮುಷ್ಕರ ನಡೆಸುವ ನಿರ್ಧಾರ ಕೈಬಿಡುವಂತೆ ಕಾರ್ಮಿಕ ಮುಖಂಡರಿಗೆ ವಿನಂತಿಸಿದರು.

ಇದಕ್ಕೊಪ್ಪದ ಕಾರ್ಮಿಕ ಸಂಘದ ಅಧ್ಯಕ್ಷ ವಾಲೇಬಾಬು ಹಾಗೂ ಪ್ರಧಾನ ಕಾರ್ಯದರ್ಶಿ ಅಮೀರ್‌ಅಲಿ ನಾವು ನೀಡಿರುವ ಮುಷ್ಕರ ದಿನಾಂಕದೊಳಗೆ ಬೇಡಿಕೆ ಈಡೇರಿಸುವುದಾಗಿ ಎರಡು ದಿನದಲ್ಲಿ ಲಿಖೀತವಾಗಿ ಭರವಸೆ ನೀಡಿದರೆ ಮಾತ್ರ ಮುಷ್ಕರ ನಡೆಸುವ ನಿರ್ಧಾರ ವಾಪಸ್‌ ಪಡೆಯುತ್ತೇವೆ. ಇಲ್ಲದಿದ್ದರೆ ಮುಷ್ಕರ ನಡೆಸುವ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದರು.

ಕಂಪನಿ ಪ್ರಧಾನ ವ್ಯವಸ್ಥಾಪಕ (ಗಣಿ) ಪ್ರಕಾಶ ಬಹದ್ದೂರ್‌, ಮುಖ್ಯ ಆಡಳಿತಾಧಿಕಾರಿ ಡಾ| ಜಗದೀಶ ನಾಯ್ಕ, ಕಾರ್ಮಿಕ ಸಂಘದ ಅಧ್ಯಕ್ಷ ವಾಲೇಬಾಬು ಇತರರು ಇದ್ದರು.

ಹೊಸ ವೇತನ ಒಪ್ಪಂದ ಜಾರಿ ಆಗಬೇಕೆಂಬುದು ನಮ್ಮ ಬೇಡಿಕೆ. ಜಾರಿ ವಿಳಂಬವಾಗಿದ್ದರಿಂದ ಅನಿವಾರ್ಯವಾಗಿ ಮುಷ್ಕರದ ನೋಟಿಸ್‌ ನೀಡಲಾಗಿದೆ. ಗಣಿ ಆಡಳಿತ ವರ್ಗದ ಅಧಿಕಾರಿಗಳು ಕರೆದ ಸಭೆಯಲ್ಲಿ ಇನ್ನಷ್ಟು ಸಮಯಾವಕಾಶ ನೀಡಬೇಕೆಂದು ಕೇಳಿದರು. ಇದಕ್ಕೆ ಕಾರ್ಮಿಕ ಸಂಘ ಒಪ್ಪಿಲ್ಲ. ಮುಷ್ಕರದ ನಮ್ಮ ನಿರ್ಧಾರ ಅಚಲವಾಗಿದೆ ಎಂದು ತಿಳಿಸಲಾಗಿದೆ. 
  ವಾಲೇಬಾಬು, ಅಧ್ಯಕ್ಷರು, ಕಾರ್ಮಿಕ ಸಂಘ, ಹಟ್ಟಿ ಚಿನ್ನದ ಗಣಿ

ಗಣಿ ಕಂಪನಿ ನಿಗಮದ ಅಧ್ಯಕ್ಷ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ರಾಜಶೇಖರ ಪಾಟೀಲ, ಸ್ಥಳೀಯ ಶಾಸಕ ಡಿ.ಎಸ್‌.ಹೂಲಗೇರಿ ಅವರು ಕಾರ್ಮಿಕರ ಬೇಡಿಕೆಗಳನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಆದಷ್ಟು ಬೇಗ ಈಡೇರಿಸಲು ಪ್ರಯತ್ನಿಸಲಾಗುವುದು. ಮುಷ್ಕರದ ನೋಟಿಸ್‌ ಹಿಂತೆಗೆದುಕೊಳ್ಳಲು ಕಾರ್ಮಿಕ ಸಂಘದ ಮುಖಂಡರ ಮನವೊಲಿಸಿ ಎಂದು ಹೇಳಿದ್ದರಿಂದ ಇಂದಿನ ಸಭೆ ಸೇರಿದಂತೆ ಎರಡು ಸಲ ಮಾತುಕತೆ ನಡೆಸಲಾಗಿದೆ. ಈ ಪ್ರಕ್ರಿಯೆ ಇನ್ನೂ ಮುಂದುವರಿಯಲಿದೆ.
  ಡಾ| ಜಗದೀಶ ನಾಯ್ಕ, ಮುಖ್ಯ ಆಡಳಿತಾಧಿಕಾರಿ, ಹಟ್ಟಿ ಚಿನ್ನದ ಗಣಿ ಕಂಪನಿ.

Advertisement

Udayavani is now on Telegram. Click here to join our channel and stay updated with the latest news.

Next