Advertisement

ಮುಷ್ಕರ ಸ್ಥಗಿತ: ಚಾಮುಂಡಿ ಪೂಜೆ ಪುನಾರಂಭ

11:21 AM Dec 16, 2018 | |

ಮೈಸೂರು: ಮುಜರಾಯಿ ಸಚಿವರು ಹಾಗೂ ಅಧಿಕಾರಿಗಳ ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಮುಜರಾಯಿ ಇಲಾಖೆ ಸಮೂಹದ 22 ದೇವಾಲಯಗಳ ಅರ್ಚಕರು, ನೌಕರರು ಕೈಗೊಂಡಿದ್ದ ಮುಷ್ಕರ ಶನಿವಾರ ಸಂಜೆ ವೇಳೆಗೆ ಸ್ಥಗಿತಗೊಂಡಿತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಮುಜರಾಯಿ ಇಲಾಖೆ ಸಮೂಹದ 22 ದೇವಾಲಯಗಳ ನೌಕರರು ಮುಷ್ಕರ ಆರಂಭಿಸಿದ್ದರು.

Advertisement

ಚಾಮುಂಡೇಶ್ವರಿ ದೇವಾಸ್ಥಾನ ಹಾಗೂ ಸಮೂಹ ದೇವಾಸ್ಥಾನಗಳ ನೌಕರರ ಸಂಘದ ನೇತೃತ್ವದಲ್ಲಿ ಚಾಮುಂಡಿಬೆಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟಕಾರರು, ಶೇ.30 ವೇತನ ವೃದ್ಧಿ ಹಾಗೂ ಹೆಚ್ಚುವರಿ ತುಟ್ಟಿಭತ್ಯೆ ಮಂಜೂರು ಮಾಡಲು ಕಾಯಂದ ಆದೇಶ ನೀಡುವುದು, ವಾರ್ಷಿಕ ಬೋನಸ್‌ ಪಾವತಿಸುವುದು, 75 ಮಂದಿ ತಾತ್ಕಾಲಿಕ ನೌಕರರನ್ನು ಕಾಯಂಗೊಳಿಸುವುದು ಸೇರಿದಂತೆ ಏಳು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದರು. 

ಮುಷ್ಕರ 2ನೇ ದಿನಕ್ಕೆ: ಮುಜರಾಯಿ ದೇವಾಲಯಗಳ ಅರ್ಚಕರು, ನೌಕರರು ಕೈಗೊಂಡಿರುವ ಮುಷ್ಕರದ ಕುರಿತು ಶಾಸಕ ಎಸ್‌.ಎ. ರಾಮದಾಸ್‌ ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸಿದ್ದರು. ಆದರೆ, ಪ್ರತಿಭಟನಾಕಾರರ ಬೇಡಿಕೆ ಈಡೇರಿಸುವ ಕುರಿತು ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆ ನೀಡದ ಕಾರಣಕ್ಕೆ ಶನಿವಾರವೂ ಮುಷ್ಕರ ಮುಂದುವರಿದಿತ್ತು.

ಎಂದಿನಂತೆ ದೇವಸ್ಥಾನಗಳಲ್ಲಿ ಬೆಳಗ್ಗೆ ಪೂಜಾ ಕೈಂಕರ್ಯಗಳನ್ನು ನಡೆಸಿದ ಅರ್ಚಕರು ನಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಮೊದಲ ದಿನದಂತೆ ಶನಿವಾರವೂ ಸಹ ಚಾಮುಂಡಿಬೆಟ್ಟ ಹಾಗೂ ಇನ್ನಿತರ ದೇವಸ್ಥಾನಗಳಲ್ಲಿ ಯಾವುದೇ ಪೂಜಾ ಕೈಂಕರ್ಯಗಳು ನಡೆಯಲಿಲ್ಲ. 

ಸಚಿವರ ಭರವಸೆ: ಈ ನಡುವೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌. ನಾಗೇಂದ್ರ ಹಾಗೂ ಎಂಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ, ಅರ್ಚಕರು ಹಾಗೂ ಸಿಬ್ಬಂದಿ ಸಮಸ್ಯೆ ಆಲಿಸಿದರು. ಈ ವೇಳೆ ದೂರವಾಣಿ ಮೂಲಕ ಮುಜರಾಯಿ ಇಲಾಖೆ ಸಚಿವ ರಾಜಶೇಖರ್‌ ಪಾಟೀಲ್‌ ಅವರನ್ನು ಸಂಪರ್ಕಿಸಿದ ಶಾಸಕ ರಾಮದಾಸ್‌, ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವ ಕುರಿತು ನೇರವಾಗಿ ಸಚಿವರಿಂದಲೇ ಭರವಸೆ ಕೊಡಿಸಿದರು. 

Advertisement

ಡಿ.24ರಂದು ಸಭೆ: ಪ್ರತಿಭಟನಾಕಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವ ರಾಜಶೇಖರ್‌ ಪಾಟೀಲ್‌, ತಾತ್ಕಾಲಿಕ ನೌಕರರನ್ನು ಕಾಯಂ ಮಾಡುವುದು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಡಿ.24ರಂದು ಸಭೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು. ಹೀಗಾಗಿ ಮುಷ್ಕರವನ್ನು ಕೈಬಿಡುವಂತೆ ಸಚಿವರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸಚಿವರ ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು, ಸಂಜೆ 4 ಗಂಟೆ ವೇಳೆಗೆ ಪ್ರತಿಭಟನೆಯನ್ನು ಹಿಂಪಡೆದರು. 

17ಕ್ಕೆ ಅಧಿಕಾರಿಗಳ ಸಭೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಎಸ್‌.ಎ.ರಾಮದಾಸ್‌ ಅವರು ಮುಜರಾಯಿ ಸಚಿವರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಡಿ.24ರಂದು ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿದೆ. ಜತೆಗೆ ಅಧಿಕಾರಿಗಳು ಡಿ.17ರಂದು ಬೋನಸ್‌ ಸಹ ಕೊಡಿಸುವುದಾಗಿ ಹೇಳಿದ್ದಾರೆ ಎಂದು ಸಂಘದ ಕಾರ್ಯದರ್ಶಿ ವಿಶ್ವನಾಥ್‌ ತಿಳಿಸಿದ್ದಾರೆ.

ಸಂಜೆ ಬಳಿಕ ಪೂಜೆ: ಅರ್ಚಕರು ಹಾಗೂ ಸಿಬ್ಬಂದಿ ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಂಜೆ 4 ಗಂಟೆ ನಂತರ ಚಾಮುಂಡಿಬೆಟ್ಟ ಸೇರಿದಂತೆ ಇತರೆ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಎಂದಿನಂತೆ ದೈನಂದಿನ ಪೂಜಾ ಕೈಂಕರ್ಯಗಳು ನಡೆಯಿತು. ಸಂಜೆ ನಂತರ ದೇವಸ್ಥಾನಗಳಿಗೆ ತೆರಳಿದ ಭಕ್ತಾಧಿಗಳು ದೇವರ ದರ್ಶನ ಪಡೆಯುವ ಜತೆಗೆ ಇನ್ನಿತರ ಸೇವೆಗಳನ್ನು ಪಡೆದರು.  

Advertisement

Udayavani is now on Telegram. Click here to join our channel and stay updated with the latest news.

Next